ADVERTISEMENT

ಮಠಗಳ ಅನುದಾನ ಸ್ಥಗಿತಕ್ಕೆ ರಂಭಾಪುರಿ ಶ್ರೀ ಬೇಸರ: ಮೋದಿ ಕಾರ್ಯಕ್ಕೆ ಶ್ಲಾಘನೆ

ಕೆಲ ಸಮುದಾಯಗಳ ತುಷ್ಟೀಕರಣದಿಂದ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 12:25 IST
Last Updated 10 ಡಿಸೆಂಬರ್ 2023, 12:25 IST
   

ಕೋಲಾರ: ‘ಕೆಲ ಸಮುದಾಯಗಳನ್ನು ತುಷ್ಟೀಕರಣ ಮಾಡುವ ಉದ್ದೇಶದಿಂದ ಕೆಲ ರಾಜಕಾರಣಿಗಳು ಸಣ್ಣತನದ ಕೆಲಸ ಮಾಡಿ ಕೆಲ ವರ್ಗಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದು ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಈ ಮಾತನ್ನು ಹೇಳದೆ ನನಗೆ ಬೇರೆ ದಾರಿ ಇಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾಗಲಾಪುರದ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಜಾಗೃತಿ ಸಮಾರಂಭ ಮತ್ತು ಕಾರ್ತಿಕ ದೀಪೋತ್ಸವದಲ್ಲಿ ಅವರು ಮಾತನಾಡಿದರು.

‘ಧರ್ಮಪೀಠಗಳು ಸ್ಪಷ್ಟವಾಗಿ ಹೇಳದೆ ಹೋದರೆ ಬೇರೆ ಯಾರೂ ಈ ಮಾತು ಹೇಳಲು ಸಾಧ್ಯವಾಗುವುದಿಲ್ಲ.‌ ಆ ನೋವಿನಿಂದ ಧ್ವನಿ ಎತ್ತಬೇಕಾಗಿದೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರದಲ್ಲಿ ಬಹಳಷ್ಟು ಸಂಪನ್ಮೂಲವು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗುವ ಕಾರಣ ರಚನಾತ್ಮಕ, ಗುಣಾತ್ಮಕ ಕಾರ್ಯಗಳಿಗೆ ಅನುದಾನದ ಕೊರತೆ ಕಾಡುತ್ತಿದೆ. ಇದು ನನ್ನ ಅಭಿಪ್ರಾಯ ಅಲ್ಲ; ಬದಲಾಗಿ ಯಾವುದೇ ಪಕ್ಷದ ಶಾಸಕರನ್ನು ಕೇಳಿದರೂ ಈ ನೋವು ವ್ಯಕ್ತಪಡಿಸುತ್ತಾರೆ. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅನುದಾನ ಸಿಗದಿದ್ದರೆ ಮತದಾರರಿಗೆ ಮುಖ ತೋರಿಸುವುದು ಹೇಗೆ, ಮುಂದಿನ ಚುನಾವಣೆಗೆ ಏನು ಮಾಡಬೇಕೆಂಬ ಭಾವನೆ ಶಾಸಕರಲ್ಲಿ ಬರುತ್ತಿದೆ. ಈ ವಿಚಾರ ಸರ್ಕಾರದ ಗಮನಕ್ಕೂ ಬಂದಿರಬಹುದು. ಚಳಿಗಾಲದ ಅಧಿವೇಶನದ ನಂತರ ಅನುದಾನ ಬಿಡುಗಡೆಯಾಗುವ ವಿಶ್ವಾಸದಲ್ಲಿ ಕೆಲವರು ಇದ್ದಾರೆ’ ಎಂದು ಹೇಳಿದರು.

‘ಹಿಂದಿನ ಸರ್ಕಾರದಲ್ಲಿ ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿದ ಅನುದಾನವನ್ನು ಈಗ ತಡೆಹಿಡಿಯಲಾಗಿದೆ. ಆ ಅನುದಾನ ಬಿಡುಗಡೆಗೆ ಈಗಿನ ಸರ್ಕಾರ ಪರಿಶೀಲಿಸಬೇಕು’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿ ರಚನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ಉತ್ಕೃಷ್ಟ ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿದು ಸುಪ್ರಸಿದ್ಧ ಕ್ಷೇತ್ರಗಳಿಗೆ ಹೊಸ ಸ್ವರೂಪ ಕೊಡುತ್ತಿದ್ದಾರೆ. ಇಂಥ ಕಾರ್ಯಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಹೊಗಳಿದರು.

‘ಮೋದಿ ಅವರಂಥ ಪ್ರಧಾನಿ ಕಂಡಿರುವ ದೇಶವೇ ಧನ್ಯ. ಸುತ್ತಲೂ ವೈರಿಗಳಿದ್ದಾರೆ. ವೈರಿಗಳ ಮಧ್ಯದಲ್ಲಿ ಭಾರತ ಸ್ವಾಭಿಮಾನ, ಆತ್ಮಬಲದಿಂದ ಇದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇದು ವಿರೋಧಿಗಳ ಮೆಚ್ಚುಗೆಗೂ ಪಾತ್ರವಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.