ಬಂಗಾರಪೇಟೆ: ಜೂ. 28ರಿಂದ ಆಹಾರ ಇಲಾಖೆಯ ಸರ್ವರ್ ಮೂರುದಿನಗಳ ಕಾಲ ಸ್ಥಗಿತಗೊಳ್ಳುವುದರಿಂದ ಪಡಿತರದಾರರು ಜೂ. 27ರೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆದುಕೊಳ್ಳಬೇಕು ಎಂದು ಆಹಾರ ಶಿರಸ್ತೆದಾರ್ ಅಭಿಜಿತ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿ, ಜುಲೈ ತಿಂಗಳಿಂದ ಕುಟುಂಬದ ಸದಸ್ಯರಿಗೆ ತಲಾ 10ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಇಲಾಖೆ ತಂತ್ರಾಂಶದಲ್ಲಿ ಕೆಲವು ಬದಲಾವಣೆ ಮಾಡಬೇಕಿದ್ದು, 28ರಿಂದ ಮೂರುದಿನಗಳ ಕಾಲ ಇಲಾಖೆಯ ಸರ್ವರ್ ಕೆಲಸ ಸ್ಥಗಿತಗೊಳ್ಳಲಿದೆ ಎಂದರು.
ಜೂ. 27ರೊಳಗೆ ಪಡಿತರ ಅಂಗಡಿಗಳಲ್ಲಿ ತಮ್ಮ ಪಾಲಿನ ಅಕ್ಕಿ, ರಾಗಿಯನ್ನು ಪಡೆಯಬೇಕು. ಜುಲೈ 1ರಂದೇ ಎಲ್ಲ ಅಂಗಡಿಗಳಲ್ಲಿ ಕಡ್ಡಾಯವಾಗಿ ಪಡಿತರ ಚೀಟಿಯಲ್ಲಿರುವ ಸದಸ್ಯರಿಗೆ ತಲಾ 10ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಬೇಕು. ಅದಕ್ಕಾಗಿ ಈ ತಿಂಗಳ 28ರಿಂದಲೇ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಬೇಕು ಎಂದು ತಿಳಿಸಿದರು.
ಆಹಾರ ನಿರೀಕ್ಷಕ ಗೋಪಾಲ್, ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಹುನ್ಕುಂದ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಕಣಿಂಬೆಲೆ ಶ್ರೀನಿವಾಸ್, ಪೆದ್ದಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.