ADVERTISEMENT

ಮುಳಬಾಗಿಲು ತಹಶೀಲ್ದಾರ್‌ಗೆ 3 ವರ್ಷ ಜೈಲು, ₹ 7 ಲಕ್ಷ ದಂಡ

ರೈತರಿಂದ ₹5 ಲಕ್ಷ ಲಂಚ ಪಡೆದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 21:42 IST
Last Updated 12 ಸೆಪ್ಟೆಂಬರ್ 2024, 21:42 IST
ಬಿ. ಸಿ.ವೆಂಕಟಾಚಲಪತಿ, ತಹಶೀಲ್ದಾರ್
ಬಿ. ಸಿ.ವೆಂಕಟಾಚಲಪತಿ, ತಹಶೀಲ್ದಾರ್   

ಮುಳಬಾಗಿಲು: ಭೂವ್ಯಾಜ್ಯ ಇತ್ಯರ್ಥ ಸಂಬಂಧ ರೈತರೊಬ್ಬರಿಂದ ₹5 ಲಕ್ಷ ಲಂಚ ಸ್ವೀಕಾರ ಮಾಡಿದ್ದ ಪ್ರಕರಣದಲ್ಲಿ ಮುಳಬಾಗಿಲು ಹಾಲಿ ಗ್ರೇಡ್–1 ತಹಶೀಲ್ದಾರ್ ಬಿ.ಎಸ್ ವೆಂಕಟಾಚಲಪತಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮೂರು ವರ್ಷ ಕಾರಾಗೃಹ ಹಾಗೂ ₹7 ಲಕ್ಷ ದಂಡ ವಿಧಿಸಿ ಬುಧವಾರ ಆದೇಶಿಸಿದೆ.

ಏನಿದು ಪ್ರಕರಣ?: ಪ್ರಸಕ್ತ ಗ್ರೇಡ್–1 ತಹಶೀಲ್ದಾರ್ ಆಗಿರುವ ಬಿ.ಸಿ. ವೆಂಕಟಾಚಲಪತಿ 2017ರಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ತಾಲ್ಲೂಕಿನ ಗೊಟ್ಟಿಗೆರೆ ಗ್ರಾಮದ ರೈತ ಎಚ್.ಪಿ. ಮಂಜುನಾಥ್ ಅವರ ತಂದೆ ಹೆಸರಿನಲ್ಲಿದ್ದ 1.37 ಎಕರೆ ಜಮೀನಿನ ಭೂ ವ್ಯಾಜ್ಯ ತಕರಾರು ಪ್ರಕರಣದ (ಆರ್‌ಆರ್‌ಟಿ) ವಿಚಾರಣೆಯನ್ನು ವೆಂಕಟಾಚಲಪತಿ ಅವರೇ ನಡೆಸುತ್ತಿದ್ದರು. 

ರೈತ ಮಂಜುನಾಥ್ ಅವರ ಪರವಾಗಿ ಆದೇಶ ಹೊರಡಿಸಲು ತಹಶೀಲ್ದಾರರ ಆಪ್ತ ಸಹಾಯಕ ಬಿ.ಆರ್. ಮಧುಸೂದನ್ ಮುಖಾಂತರ ₹15 ಲಕ್ಷ ಲಂಚಕ್ಕೆ ವೆಂಕಟಾಚಲಪತಿ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತಿದ್ದ ಮಂಜುನಾಥ್ ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. 2017ರ ಡಿಸೆಂಬರ್ 18ರಂದು ಬೆಂಗಳೂರಿನ ಕಂದಾಯ ಭವನದ ಕಾರು ಪಾರ್ಕಿಂಗ್‌ ಬಳಿ ದೂರುದಾರ ರೈತ ಮಂಜುನಾಥ್ ಅವರಿಂದ ಬಿ.ಆರ್. ಮಧುಸೂದನ್ ₹5 ಲಕ್ಷ ಪಡೆಯುತ್ತಿರುವಾಗಲೇ ಎಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ತಹಶೀಲ್ದಾರ್ ಬಿ.ಸಿ. ವೆಂಕಟಾಚಲಪತಿ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. 

ADVERTISEMENT

ಈ ಸಂಬಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. 

ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ, ತಹಶೀಲ್ದಾರ್ ಬಿ.ಸಿ. ವೆಂಕಟಾಚಲಪತಿಗೆ ಮೂರು ವರ್ಷ ಕಾರಾಗೃಹ ಮತ್ತು ₹7 ಲಕ್ಷ ದಂಡ ವಿಧಿಸಿದ್ದಾರೆ. ಎರಡನೇ ಅಪರಾಧಿ ಬಿ.ಆರ್. ಮಧುಸೂದನ್‌ಗೆ ಮೂರು ವರ್ಷ ಜೈಲು ಮತ್ತು ₹40,000 ದಂಡ ವಿಧಿಸಿಲಾಗಿದೆ. ಎಸಿಬಿ ಪರವಾಗಿ ಸರ್ಕಾರಿ ಅಭಿಯೋಜಕ ಮಂಜುನಾಥ ಹೊನ್ನಯ್ಯ ನಾಯ್ಕ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.