ಕೋಲಾರ: ‘ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಪರಿಹಾರಕ್ಕಾಗಿ ₹ 600 ಕೋಟಿ ಬಿಡುಗಡೆ ಮಾಡಲು ಕೇಳುತ್ತಿದ್ದೇವೆ. ಹಣ ನೀಡಲು ಈ ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲ’ ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘₹ 1,350 ಕೋಟಿ ವೆಚ್ಚದ ಕೆ.ಸಿ ವ್ಯಾಲಿ ಯೋಜನೆಗೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಹಣ ನೀಡಿ ಕಾರ್ಯಗತ ಮಾಡಿದ್ದೇವೆ. ಆದರೆ ಜಿಲ್ಲೆಗೆ ಅನುಕೂಲವಾಗುವ ಎತ್ತಿನಹೊಳೆ ಕಾಮಗಾರಿಗೆ ಹಣ ನೀಡಲು ಈ ಸರ್ಕಾರಕ್ಕೆ ಮನಸ್ಸು ಬರುತ್ತಿಲ್ಲ’ ಎಂದು ಟೀಕಿಸಿದರು.
‘ಮೋದಿ ಅವರೇ ನೀವು ಈ ದೇಶದ ಪ್ರಧಾನಿ. ಜನರ ಕಷ್ಟ ಅರಿಯಬೇಕು. ಚೆನ್ನಾಗಿ ಭಾಷಣ ಮಾಡಿದರೆ ಸಾಲದು. ಭಾಷಣದಿಂದ ಜನರ ಕಷ್ಟ ಬಗೆಹರಿಯುವುದಿಲ್ಲ. ಗೊಬ್ಬರದ ಬೆಲೆ ಶೇ 80ರಷ್ಟು ಏರಿಕೆಯಾಗಿದೆ. ಏರಿಕೆಗೆ ಕಾರಣವೇನು ಎಂಬುದನ್ನು ಜನತೆಗೆ ತಿಳಿಸಬೇಕು’ ಎಂದು ಹೇಳಿದರು.
ಸೀತೆ, ದ್ರೌಪದಿ ಬದುಕಿದ ದೇಶ ಇದು. ಮಹಿಳೆಯರ ಸದೃಢತೆಗೆ ಏನಾದರೂ ಮಾಡಬೇಕು. ಶ್ರೀರಾಮ, ಹನುಮಂತನನ್ನು ಜಹಗೀರು ಪಡೆದ ರೀತಿಯಲ್ಲಿ ವರ್ತಿಸುವ ಬಿಜೆಪಿಯು, ಆಡಳಿತವೆಂದರೆ ಕೇಸರಿ ಬಾವುಟ ಕಟ್ಟುವುದಲ್ಲ ಎಂಬುದನ್ನು ಅರಿಯಬೇಕು ಎಂದರು.
ಸಹಕಾರ ಸಂಘಗಳ ಮೂಲಕವೇ ದೇಶದ ಆರ್ಥಿಕ ಸ್ವರೂಪ ಬದಲಿಸಬೇಕು. ಬಡವರಿಗೆ ಸಹಾಯ ಸಿಗುವುದಾದರೆ ಸಹಕಾರ ರಂಗದಿಂದ ಮಾತ್ರ. ಇಂತಹ ಸಂಸ್ಥೆಗಳನ್ನು ಸರ್ಕಾರ ನಂಬುತ್ತಿಲ್ಲ. ವಿವಿಧ ಇಲಾಖೆಗಳು ₹ 4 ಸಾವಿರ ಕೋಟಿಯನ್ನು ಟೋಪಿ ಹಾಕಿಸಿಕೊಳ್ಳುವ ವಾಣಿಜ್ಯ ಬ್ಯಾಂಕುಗಳಲ್ಲಿ ಇಟ್ಟಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.