ಕೋಲಾರ: ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೈಗೆತ್ತಿಕೊಂಡಿರುವ ಬಂಗಾರಪೇಟೆಯಿಂದ ಬೇತಮಂಗಲ ಮೂಲಕ ವಿಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಬೇಕು’ ಎಂದು ಕೆಜಿಎಫ್ ಶಾಸಕಿ ಎಂ.ರೂಪಕಲಾ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಶಿವಶಂಕರ್ ಅವರಿಗೆ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಇಲ್ಲಿ ಸೋಮವಾರ ಡಿಸಿಎಫ್‌ರನ್ನು ಭೇಟಿಯಾದ ಶಾಸಕರು, ‘ಬೇತಮಂಗಲ ಮಾರ್ಗವಾಗಿ ವಿಕೋಟೆಗೆ ಹೋಗುವ ರಸ್ತೆ ಅಭಿವೃದ್ಧಿಯ ಉಳಿಕೆ ಕಾಮಗಾರಿಗೆ ಮರು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಿಸಬೇಕಿದೆ’ ಎಂದರು.
‘ಬಾಕಿ ಇರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಬೇಕಿದೆ, ಈ ಕಾರ್ಯ ಶೀಘ್ರವಾಗಿ ಮುಗಿದರೆ ಮಾತ್ರ ಮಳೆಗಾಲಕ್ಕೆ ಮುನ್ನ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯ’ ಎಂದು ಹೇಳಿದರು.
‘ಇದು ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿನ ಅತಿ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಸಾರ್ವಜನಿಕರು ಓಡಾಡಲು, ರೈತರು ತೋಟಗಾರಿಕೆ ಉತ್ಪನ್ನಗಳು, ರೇಷ್ಮೆ ಗೂಡನ್ನು ಮಾರುಕಟ್ಟೆಗೆ ಸಾಗಿಸಲು ಈ ರಸ್ತೆ ಕಾಮಗಾರಿ ಅತಿ ಮುಖ್ಯವಾಗಿದ್ದು, ಶೀಘ್ರವಾಗಿ ಮುಗಿಸುವ ಮೂಲಕ ಜನರ ಸೇವೆಗೆ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ತಿಳಿಸಿದರು.
392 ಮರ ತೆರವು: ‘ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಈ ರಸ್ತೆ ಇಕ್ಕೆಲಗಳಲ್ಲಿ ಸುಮಾರು 392 ಮರ ತೆರವುಗೊಳಿಸಬೇಕಿದ್ದು, ನಿಯಮಾವಳಿ ಪ್ರಕಾರ ಕಾಮಗಾರಿಯ ಹೊಣೆ ಹೊತ್ತ ಇಲಾಖೆಯವರು ಹಣ ಠೇವಣಿ ಮಾಡಿದರೆ ಅರಣ್ಯ ಇಲಾಖೆಯವರು ಟೆಂಡರ್ ಕರೆದು ಮರ ಕಟಾವು ಮಾಡಬೇಕು. ಆದರೆ, ಎಲ್ಲಾ ಪ್ರಕ್ರಿಯೆ ಮುಗಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ’ ಎಂದರು.
‘ಕಾಮಗಾರಿ ವಿಳಂಬವಾಗುವ ಕಾರಣ ಮರು ಅರಣ್ಯೀಕರಣ ಠೇವಣಿ ಪಡೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ಮರಗಳನ್ನು ತೆರವುಗೊಳಿಸಲು ಅನುಮತಿ ಕೊಡಬೇಕು. ಮರಗಳ ಹರಾಜು ಮತ್ತಿತರ ಪ್ರಕ್ರಿಯೆಯನ್ನು ಆದಷ್ಟು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಕೋರಿದರು.
‘ಮರಗಳನ್ನು ತೆರವುಗೊಳಿಸುವವರೆಗೆ ತುಂಬಾ ಹಾಳಾಗಿರುವ ಕಡೆ ಜನರು ಸುಗಮವಾಗಿ ಓಡಾಡುವಂತಾಗಲು ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ’ ಎಂದು ಗುತ್ತಿಗಾರರಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಎಂಜಿನಿಯರ್ ಮಲ್ಲಿಕಾರ್ಜುನ, ಗುತ್ತಿಗೆದಾರ ಭಾಸ್ಕರ್ ನಾಯ್ಡು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.