ADVERTISEMENT

ಅರ್ಧಕ್ಕೆ ನಿಂತ ಕಾಮಗಾರಿ: ಜನರಿಗೆ ಕಿರಿಕಿರಿ

ಜಿಲ್ಲಾಡಳಿತ–ಖಾಸಗಿ ಆಸ್ಪತ್ರೆ ನಡುವೆ ಜಾಗದ ವಿವಾದ: ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 15:36 IST
Last Updated 2 ಮಾರ್ಚ್ 2021, 15:36 IST
ಕೋಲಾರ ಬಂಗಾರಪೇಟೆ ರಸ್ತೆಯ ಗೌರವ್ ಆಸ್ಪತ್ರೆ ಮುಂಭಾಗ ಡಾಂಬರೀಕರಣ ಮಾಡದೆ ಬಿಟ್ಟಿರುವುದು.
ಕೋಲಾರ ಬಂಗಾರಪೇಟೆ ರಸ್ತೆಯ ಗೌರವ್ ಆಸ್ಪತ್ರೆ ಮುಂಭಾಗ ಡಾಂಬರೀಕರಣ ಮಾಡದೆ ಬಿಟ್ಟಿರುವುದು.   

ಕೋಲಾರ: ಗಂಡ–ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಜಿಲ್ಲಾಡಳಿತ ಹಾಗೂ ಖಾಸಗಿ ಆಸ್ಪತ್ರೆ ನಡುವಿನ ವಿವಾದಕ್ಕೆ ನಗರದ ಬಂಗಾರಪೇಟೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ನಗರವಾಸಿಗಳು ಬವಣೆಪಡುವಂತಾಗಿದೆ.

ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳ ಅಗಲೀಕರಣ ಯೋಜನೆ ಕೈಗೆತ್ತಿಕೊಂಡಿರುವ ಜಿಲ್ಲಾಡಳಿತವು ರಸ್ತೆ ಅಕ್ಕಪಕ್ಕದ ಕಟ್ಟಡಗಳ ತೆರವು ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಿರುವ ಆರೋಪ ಕೇಳಿಬಂದಿದ್ದು, ಅಧಿಕಾರಿಗಳ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಜಿಲ್ಲಾಡಳಿತವು ನಗರದ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶಕ್ಕೆ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗೆ ಮತ್ತು ಬಂಗಾರಪೇಟೆ ವೃತ್ತದಿಂದ ಕ್ಲಾಕ್‌ಟವರ್‌ವರೆಗೆ ರಸ್ತೆ ಅಗಲೀಕರಣ ಮಾಡುತ್ತಿದೆ. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧಿಕಾರಿಗಳು ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಇಕ್ಕೆಲದಲ್ಲಿ ಅಂಗಡಿಗಳು, ಮರಗಳು, ವಾಣಿಜ್ಯ ಕಟ್ಟಡಗಳು, ಮನೆಗಳನ್ನು ತೆರವುಗೊಳಿಸಿದ್ದಾರೆ.

ADVERTISEMENT

ಈಗಾಗಲೇ ಬಂಗಾರಪೇಟೆ ರಸ್ತೆ ಅಗಲೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಕಾಲೇಜು ವೃತ್ತದ ಬಳಿಯ ಗೌರವ್‌ ಆರ್ಥೋಪೆಡಿಕ್‌ ಮತ್ತು ಸರ್ಜಿಕಲ್‌ ಆಸ್ಪತ್ರೆ ಕಟ್ಟಡ ತೆರವುಗೊಳಿಸುವ ವಿಚಾರವಾಗಿ ವಿವಾದ ಸೃಷ್ಟಿಯಾಗಿದೆ.

ತಾರತಮ್ಯ: ಪಿಡಬ್ಲ್ಯೂಡಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ರಸ್ತೆ ವಿಭಜಕ (ಡಿವೈಡರ್‌) ನಿರ್ಮಾಣ ಮತ್ತು ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡಿರುವುದು ವಿವಾದಕ್ಕೆ ಮೂಲ ಕಾರಣವಾಗಿದೆ.

ಬಡ ಜನರ ಕಟ್ಟಡಗಳನ್ನು ಏಕಾಏಕಿ ತೆರವುಗೊಳಿಸಿದ ಅಧಿಕಾರಿಗಳು ಸ್ಥಿತಿವಂತರ ಕಟ್ಟಡಗಳ ತೆರವಿಗೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಾಲೇಜು ವೃತ್ತದ ಬಳಿ ಸರ್ವಜ್ಞ ಉದ್ಯಾನದ ಕಡೆಗೆ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ರಸ್ತೆ ವಿಭಜಕ ನಿರ್ಮಾಣದಲ್ಲಿ ವ್ಯತ್ಯಾಸ ಮಾಡಿ ತಮ್ಮ ಕಟ್ಟಡದ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಗಲೀಕರಣ ಮಾಡಲು ಹೊರಟಿದ್ದಾರೆ ಎಂಬುದು ಗೌರವ್‌ ಆಸ್ಪತ್ರೆ ಮಾಲೀಕ ಡಾ.ಕೆ.ಎನ್.ದೇವರಾಜ್‌ರ ಆರೋಪವಾಗಿದೆ.

ದೂಳಿನ ಆರ್ಭಟ: ಪ್ರಮುಖ ವಾಣಿಜ್ಯ ಸ್ಥಳವಾದ ಬಂಗಾರಪೇಟೆ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಜನರ ಓಡಾಟ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ರಸ್ತೆ ಅಗಲೀಕರಣಕ್ಕೆ ಗೌರವ್ ಆಸ್ಪತ್ರೆಯ ಜಾಗ ಬಿಟ್ಟುಕೊಡುವಂತೆ ಜಿಲ್ಲಾಡಳಿತ ಕೋರಿತ್ತು. ಇದಕ್ಕೆ ಒಪ್ಪದ ದೇವರಾಜ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಲಯ ಪರಿಸ್ಪರ ಒಡಂಬಡಿಕೆ ಅಥವಾ ಭೂಸ್ವಾಧೀನ ಪ್ರಕ್ರಿಯೆ ನಿಯಮಾವಳಿ ಪಾಲನೆ ಮೂಲಕ ರಸ್ತೆ ಅಗಲೀಕರಣಕ್ಕೆ ಜಾಗ ಪಡೆಯುವಂತೆ ಆದೇಶಿಸಿ ತಡೆಯಾಜ್ಞೆ ನೀಡಿದೆ.

ತಡೆಯಾಜ್ಞೆ ಕಾರಣಕ್ಕೆ ಗೌರವ್‌ ಆಸ್ಪತ್ರೆ ಮುಂಭಾಗದಲ್ಲಿ ಕಾಲೇಜು ವೃತ್ತದವರೆಗೆ ಸುಮಾರು 50 ಅಡಿಯಷ್ಟು ರಸ್ತೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸರ್ವಜ್ಞ ಉದ್ಯಾನದ ಕಡೆ ಡಾಂಬರೀಕರಣ ಮಾಡಿರುವ ಅಧಿಕಾರಿಗಳು ಆಸ್ಪತ್ರೆ ಕಡೆಯ ರಸ್ತೆಗೆ ಡಾಂಬರು ಹಾಕಿಲ್ಲ. ಇದರಿಂದ ದೂಳಿನ ಆರ್ಭಟ ಹೆಚ್ಚಿದ್ದು, ಜನರು ದೂಳಿನಿಂದ ರಕ್ಷಣೆ ಪಡೆಯಲು ಕರವಸ್ತ್ರಗಳ ಮೊರೆ ಹೋಗಿದ್ದಾರೆ.

ಜಿಲ್ಲಾಡಳಿತದ ಒತ್ತಡ: ‘ಈ ಹಿಂದೆ 2009ರಲ್ಲಿ ರಸ್ತೆ ಅಗಲೀಕರಣಕ್ಕೆ ಯಾವುದೇ ಪರಿಹಾರ ಪಡೆಯದೆ 9/35 ಅಡಿ ಜಾಗ ಬಿಟ್ಟುಕೊಟ್ಟಿದ್ದೆವು. ಈಗ ಮತ್ತೆ 14/35 ಅಡಿ ಜಾಗ ಬಿಡುವಂತೆ ಜಿಲ್ಲಾಡಳಿತ ಒತ್ತಡ ಹೇರಿದೆ. ಸರ್ವಜ್ಞ ಉದ್ಯಾನದ ಮುಂಭಾಗದ ಸರ್ಕಾರಿ ಜಾಗವನ್ನು ರಸ್ತೆಗೆ ಬಳಸಿಕೊಳ್ಳಬಹುದು. ಆದರೆ, ಅಧಿಕಾರಿಗಳು ನಮ್ಮ ಆಸ್ಪತ್ರೆ ಕಡೆಗೆ ಹೆಚ್ಚು ರಸ್ತೆ ನಿರ್ಮಿಸಲು ಹೊರಟಿದ್ದಾರೆ’ ಎಂದು ದೇವರಾಜ್‌ ದೂರಿದ್ದಾರೆ.

ರಸ್ತೆ ಅಗಲೀಕರಣಕ್ಕಾಗಿ ಗೌರವ್‌ ಆಸ್ಪತ್ರೆ ಕಟ್ಟಡ ತೆರವಿಗೆ ನೋಟಿಸ್‌ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಆಸ್ಪತ್ರೆ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವಿಗೆ ಕಾನೂನು ಹೋರಾಟ ಮುಂದುವರಿಸಿದ್ದೇವೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತವು ಜಾಗದ ವಿವಾದ ಬಗೆಹರಿಸಿ ರಸ್ತೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.