ADVERTISEMENT

ಮಹಿಳಾ ತಹಶೀಲ್ದಾರ್‌ಗೆ ಎಷ್ಟು ಗಂಡಂದಿರು ಎಂದು ಕೇಳಿದ ಆರ್‌ಟಿಐ ಕಾರ್ಯಕರ್ತ ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 13:34 IST
Last Updated 2 ಅಕ್ಟೋಬರ್ 2022, 13:34 IST
ಮಾಹಿತಿ ಕೋರಿ ಜಿಲ್ಲಾಧಿಕಾರಿಗೆ ಆರ್‌ಟಿಐ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿ
ಮಾಹಿತಿ ಕೋರಿ ಜಿಲ್ಲಾಧಿಕಾರಿಗೆ ಆರ್‌ಟಿಐ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿ    

ಕೋಲಾರ: ಮಹಿಳಾ ತಹಶೀಲ್ದಾರ್‌ಗೆ ಎಷ್ಟು ಮದುವೆಗಳಾಗಿವೆ? ಎಷ್ಟು ಗಂಡಂದಿರನ್ನು ಬಿಟ್ಟಿದ್ದಾರೆ? ವಿಚ್ಚೇದನಾ ನೀಡಿದಾರೆಯೇ ಎಂಬೆಲ್ಲಾ ವೈಯಕ್ತಿಕ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಆರ್‌ಟಿಐ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ಮಂಡಿಕಲ್‌ ನಾಗರಾಜ್‌ ಬಂಧಿತ ವ್ಯಕ್ತಿ. ಮಹಿಳಾ ತಹಶೀಲ್ದಾರ್‌ ನೀಡಿದ ದೂರಿನ ಮೇಲೆ ವಿಚಾರಣೆ ನಡೆಸಿದ ಮುಳಬಾಗಿಲು ಪೊಲೀಸರು, ಆರ್‌ಟಿಐ ಕಾರ್ಯಕರ್ತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಎಷ್ಟು ವಿವಾಹಗಳಾಗಿವೆ, ಎಷ್ಟು ಗಂಡಂದಿರು? ಅವರು ಯಾವ ಕೆಲಸ ಮಾಡುತ್ತಾರೆ? ಮದುವೆಯ ‌ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಕೊಡಿ... ಎಂಬೆಲ್ಲಾ ಮಾಹಿತಿಯನ್ನು ನೀಡಬೇಕೆಂದು ಕೋರಿ ಜಿಲ್ಲಾಧಿಕಾರಿಗೆ ಆರ್‌ಟಿಐ ಕಾರ್ಯಕರ್ತ ಅರ್ಜಿ ಸಲ್ಲಿಸಿದ್ದಾನೆ. ಮಾಹಿತಿ ಹಕ್ಕು ಕಾಯ್ದೆ ದುರುಪಯೋಗಪಡಿಸಿಕೊಂಡು ಸರ್ಕಾರಿ ನೌಕರಳಾದ ನನ್ನ ವೈಯಕ್ತಿಕ ಮಾಹಿತಿ ಕೋರಿ ತೇಜೋವಧೆ ಮಾಡುತ್ತಿದ್ದಾನೆ. ನನ್ನ ಕಚೇರಿಗೂ ಬಂದು ಮಾಹಿತಿ ನೀಡುವಂತೆ ಒತ್ತಡ ಹಾಕಿದ್ದಾನೆ. ಅನಾಥ ಆಶ್ರಮ ತೆರೆಯಲು 45 ಎಕರೆ ಜಮೀನು ಮಂಜೂರು ಮಾಡುವಂತೆ ಕೇಳಿದಾಗ ಪರಿಶೀಲಿಸುವುದಾಗಿ ಹೇಳಿದೆ. ಆದರೆ, ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾನೆ’ ಎಂಬುದಾಗಿ ಠಾಣೆಗೆ ಮಹಿಳಾ ತಹಶೀಲ್ದಾರ್‌ ದೂರು ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.