ಕೋಲಾರ: ‘ಆಧುನಿಕ ಯುಗದಲ್ಲಿ ಪಟ್ಟಣಗಳಿಗಿಂತ ಗ್ರಾಮೀಣ ಬದುಕು ಲೇಸು. ಸುಖಕರ ಜೀವನಕ್ಕೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಗ್ರಾಮಗಳು ಹೆಚ್ಚು ಸಹಕಾರಿ’ ಎಂದು ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸಿ.ಎನ್.ಚಂದ್ರಪ್ಪ ಅಭಿಪ್ರಾಯಪಟ್ಟರು.
ಇಲ್ಲಿ ಭಾನುವಾರ ನಡೆದ ‘ಓದುಗ ಕೇಳುಗ ನಮ್ಮ ನಡೆ’ ತಿಂಗಳ ಕಾರ್ಯಕ್ರಮದಲ್ಲಿ ಸಾಹಿತಿ ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿ ಕುರಿತು ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಗರ ಜೀವನ ಸಂಕೀರ್ಣವಾಗಿದೆ. ಜಂಜಡದ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಶಿವರಾಮ ಕಾರಂತರ ಬಹುಮುಖ ಪ್ರತಿಭೆಯ ಅನಾವರಣ ಅದ್ಭುತವಾಗಿದೆ. ಅವರ ವೈಯುಕ್ತಿಕ ಜೀವನದ ಏಳುಬೀಳುಗಳ ಮುಖಮುಖಿಯ ಅನಾವರಣ ಕಾಣಬಹುದು. ಪ್ರತಿಯೊಬ್ಬರು ಶಿವರಾಮ ಕಾರಂತರ ಕೃತಿಗಳನ್ನು ಓದಿ ಅವರ ವಿಚಾರಧಾರೆ ಮೈಗೂಡಿಸಿಕೊಳ್ಳಬೇಕು. ಯುವಕ ಯುವತಿಯರು, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಮನುಕುಲ ಆಧುನಿಕತೆಯ ಓಟದಲ್ಲಿ ಅವನತಿಯ ಕಡೆಗೆ ಸಾಗುತ್ತಿದೆ. ಮನುಷ್ಯನ ಸ್ವಾರ್ಥಕ್ಕೆ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ’ ಎಂದು ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥ ಎಸ್.ಮುರಳೀಧರ ಬೇಸರ ವ್ಯಕ್ತಪಡಿಸಿದರು.
‘ಪ್ರತಿಯೊಬ್ಬರೂ ನಾಯಕರಾಗಿ ಹೊರಹೊಮ್ಮುವ ಪ್ರಯತ್ನದಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುವ ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳಲ್ಲಿ ಪುಸ್ತಕ ಪ್ರೇಮ ಬೆಳೆಸಬೇಕು. ಮೌಖಿಕ ಆಸೆ- ಆಮಿಷಕ್ಕೆ ಮರುಳಾಗಿ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗಬಾರದು. ಮಕ್ಕಳ ಬಾಲ್ಯ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿ ಆದರ್ಶಪ್ರಾಯರಾಗಿ ಮಾಡಬೇಕು’ ಎಂದರು.
ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್, ನಿಕಟಪೂರ್ವ ಅಧ್ಯಕ್ಷ ಜೆ.ಜೆ.ನಾಗರಾಜ್, ಸಾಹಿತಿಗಳಾದ ಕೆ.ಎನ್.ಪರಮೇಶ್ವರನ್, ನಾರಾಯಣಸ್ವಾಮಿ, ಹ.ಮಾ.ರಾಮಚಂದ್ರ, ಸುಬ್ಬರಾಯಪ್ಪ, ನಾ.ವೆಂಕಿ, ನರಸಿಂಹಮೂರ್ತಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.