ಕೋಲಾರ: ಬರಪೀಡಿತ ಜಿಲ್ಲೆಯಲ್ಲಿ ಅನ್ನದಾತರಿಗೆ ವರದಾನವಾಗಿರುವ ಕೃಷಿ ಹೊಂಡಗಳಲ್ಲಿ ಸುರಕ್ಷತೆ ಮರೀಚಿಕೆಯಾಗಿದ್ದು, ಕೃಷಿ ಹೊಂಡಗಳು ಜನ ಹಾಗೂ ಜಾನುವಾರುಗಳ ಪಾಲಿಗೆ ಮೃತ್ಯುಕೂಪವಾಗಿವೆ.
ವರುಣ ದೇವನ ಕೃಪೆಯಿಂದಾಗಿ ಈ ಬಾರಿ ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದ್ದು, ಕೆರೆ ಕುಂಟೆಗಳು ಭರ್ತಿಯಾಗಿವೆ. ಮತ್ತೊಂದೆಡೆ ಕೃಷಿ ಹೊಂಡಗಳು ತುಂಬಿದ್ದು, ರೈತ ಕುಲ ಸದ್ಯಕ್ಕೆ ನಿರಾಳವಾಗಿದೆ. ಜನವರಿಯಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ ಪ್ರಮಾಣ 570 ಮಿಲಿ ಮೀಟರ್. ಪ್ರಸಕ್ತ ವರ್ಷ ಈ ಅವಧಿಯಲ್ಲಿ 786 ಮಿ.ಮೀ ಮಳೆಯಾಗಿದೆ.
ರಾಜ್ಯ ಸರ್ಕಾರ ಮಳೆಯಾಶ್ರಿತ ರೈತರ ಅನುಕೂಲಕ್ಕಾಗಿ 2014–15ರಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿತು. ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ, ರೈತರ ಮತ್ತು ಕೃಷಿ ಕಾರ್ಮಿಕರ ಆದಾಯ ಹೆಚ್ಚಿಸುವುದು ಕೃಷಿ ಭಾಗ್ಯ ಯೋಜನೆಯ ಮೂಲ ಉದ್ದೇಶ. ಈ ಯೋಜನೆಯಡಿ ಜಿಲ್ಲೆಯ ರೈತರು ಸಹಾಯಧನ ಪಡೆದು ಈವರೆಗೆ 14,420 ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ನದಿ, ಜಲಾಶಯ, ಕಾಲುವೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ಕೃಷಿ ಚಟುವಟಕೆಗಳಿಗೆ ಸಂಪೂರ್ಣವಾಗಿ ಮಳೆಯನ್ನೇ ನೆಚ್ಚಿಕೊಂಡಿರುವ ರೈತರ ಪಾಲಿಗೆ ಕೃಷಿ ಹೊಂಡಗಳು ನಿಜಕ್ಕೂ ಅಕ್ಷಯ ಪಾತ್ರೆಯಾಗಿವೆ. ಮುಖ್ಯವಾಗಿ ತೋಟಗಾರಿಕೆ ಬೆಳೆ ಮಾಡುವ ರೈತರು ಕೃಷಿ ಹೊಂಡಗಳನ್ನು ಹೆಚ್ಚಾಗಿ ಆಶ್ರಯಿಸಿದ್ದಾರೆ.
ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, 1,800 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವುದು ಕಷ್ಟವಾಗಿದೆ. ವರ್ಷದಿಂದ ವರ್ಷಕ್ಕೆ ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತುತ್ತಿದ್ದು, ಕೊಳವೆ ಬಾವಿ ನೆಚ್ಚಿಕೊಂಡು ಕೃಷಿ ಮಾಡುವುದು ರೈತರಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ರೈತರು ಮಳೆಗಾಲದಲ್ಲಿ ಕೃಷಿ ಹೊಂಡಗಳಲ್ಲಿ ಮಳೆ ನೀರು ಸಂಗ್ರಹಿಸಿಕೊಂಡು ವರ್ಷವಿಡೀ ಬೆಳೆ ಬೆಳೆಯುತ್ತಿದ್ದಾರೆ.
ನಿಯಮವೇನು?: ಸರ್ಕಾರದ ನಿಯಮದ ಪ್ರಕಾರ ರೈತರು ಕೃಷಿ ಹೊಂಡಗಳಲ್ಲಿ ಸುರಕ್ಷತಾ ಮಾರ್ಗಸೂಚಿ ಅನುಸರಿಸಬೇಕು. ಮುಖ್ಯವಾಗಿ ಕೃಷಿ ಹೊಂಡಗಳ ಸುತ್ತಲೂ ತಂತಿ ಬೇಲಿ ಹಾಕುವುದು ಅಥವಾ ಪರದೆ ಕಟ್ಟುವುದು ಕಡ್ಡಾಯ. ಯೋಜನೆಯ ಆರಂಭದಲ್ಲಿ ತಂತಿ ಬೇಲಿ ಅಳವಡಿಕೆ ಅಥವಾ ಪರದೆ ಹಾಕುವುದಕ್ಕೂ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ನಂತರದ ವರ್ಷಗಳಲ್ಲಿ ಸಹಾಯಧನ ಸ್ಥಗಿತಗೊಳಿಸಲಾಯಿತು.
ತಂತಿ ಬೇಲಿ ಅಳವಡಿಸಿದ ಕೃಷಿ ಹೊಂಡಗಳಿಗೆ ಮಾತ್ರ ಸಹಾಯಧನ ಬಿಡುಗಡೆ ಮಾಡಬೇಕೆಂದು ಸರ್ಕಾರ ನಿಯಮ ರೂಪಿಸಿತ್ತು. ಆದರೆ, ಕೃಷಿ ಇಲಾಖೆ ಅಧಿಕಾರಿಗಳು ಸುರಕ್ಷತಾ ಕ್ರಮ ಪಾಲಿಸದ ರೈತರಿಗೂ ತರಾತುರಿಯಲ್ಲಿ ಸಹಾಯಧನ ಮಂಜೂರು ಮಾಡಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದಲೇ ಈಗ ಅನಾಹುತ ಸಂಭವಿಸುತ್ತಿವೆ.
ಬದಲಾಗದ ರೈತರು: ಜಿಲ್ಲೆಯಲ್ಲಿ 2,949 ಕೃಷಿ ಹೊಂಡಗಳಿಗೆ ಮಾತ್ರ ತಂತಿ ಬೇಲಿ ಅಳವಡಿಸಲಾಗಿದೆ. ಉಳಿದ 11,471 ಕೃಷಿ ಹೊಂಡಗಳಿಗೆ ತಂತಿ ಬೇಲಿಯಿಲ್ಲ. ರೈತರಿಗೆ ವರವಾಗಿರುವ ಕೃಷಿ ಹೊಂಡಗಳು ಜನರ ಜೀವಕ್ಕೆ ಕಂಟಕವಾಗುತ್ತಿವೆ.
ಬೇಸಿಗೆಯಲ್ಲಿ ಈಜಾಡಲು ಹೋಗಿ, ಗೌರಿ–ಗಣೇಶ ಹಬ್ಬದ ಸಂದರ್ಭದಲ್ಲಿ ಮೂರ್ತಿ ವಿಸರ್ಜನೆ ಮಾಡಲು ಹೋಗಿ, ಕೈ ಕಾಲು ತೊಳೆದುಕೊಳ್ಳುವಾಗ, ನೀರು ತುಂಬಿಸಿಕೊಳ್ಳುವಾಗ ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಡುವುದು ಸಾಮಾನ್ಯವಾಗಿದೆ. ಹಲವು ವೇಳೆ ಕೃಷಿ ಹೊಂಡದ ಮಾಲೀಕರ ಮಕ್ಕಳೇ ಹೊಂಡದಲ್ಲಿ ಮೃತಪಟ್ಟಿರುವ ಪ್ರಕರಣಗಳು ನಡೆದಿವೆ.
ಪ್ರತಿ ಬಾರಿ ಸಾವು ಸಂಭವಿಸಿದಾಗ ನೆಪಕ್ಕೆ ಸ್ಥಳ ಪರಿಶೀಲನೆಯ ಶಾಸ್ತ್ರ ಮುಗಿಸುವ ಅಧಿಕಾರಿಗಳು ಸುರಕ್ಷತಾ ಕ್ರಮ ಪಾಲಿಸದ ಕೃಷಿ ಹೊಂಡಗಳ ಮಾಲೀಕರ ವಿರುದ್ಧ ಶಿಸ್ತುಕ್ರಮದ ಚಾಟಿ ಬೀಸುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಸುರಕ್ಷತಾ ಕ್ರಮಗಳ ವಿವರ ಒಳಗೊಂಡ ಕರಪತ್ರ ಮುದ್ರಿಸಿ ಗ್ರಾಮಗಳಲ್ಲಿ ಹಂಚುತ್ತಾರೆ. ಗೌರಿ–ಗಣೇಶ ಹಬ್ಬದ ಸಂದರ್ಭದಲ್ಲಿ ಜಾಗೃತಿಯ ಕರಪತ್ರ ಹೊರಡಿಸುತ್ತಾರೆ. ಆದರೂ ರೈತರ ಧೋರಣೆ ಬದಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.