ADVERTISEMENT

ಕೋಲಾರ: ಮಾಲೂರು ಮನೆಯಲ್ಲಿ ಕಾಶ್ಮೀರ ಸುಂದರಿ, ಕೃತಕ ವಾತಾವರಣದಲ್ಲಿ ಅರಳಿದ ಕೇಸರಿ!

ಕೆ.ಓಂಕಾರ ಮೂರ್ತಿ
Published 8 ಡಿಸೆಂಬರ್ 2023, 6:04 IST
Last Updated 8 ಡಿಸೆಂಬರ್ 2023, 6:04 IST
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಸಾವಯವ ರೈತ ಆರ್‌.ಲೋಕೇಶ್‌ ನಿವಾಸದಲ್ಲಿನ ಕೃತಕ ವಾತಾವರಣದಲ್ಲಿ ಬೆಳೆದಿರುವ ಕಾಶ್ಮೀರ ಕೇಸರಿ
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಸಾವಯವ ರೈತ ಆರ್‌.ಲೋಕೇಶ್‌ ನಿವಾಸದಲ್ಲಿನ ಕೃತಕ ವಾತಾವರಣದಲ್ಲಿ ಬೆಳೆದಿರುವ ಕಾಶ್ಮೀರ ಕೇಸರಿ   

ಕೋಲಾರ: ಕಾಶ್ಮೀರದ ತಂಪು ವಾತಾವರಣದಲ್ಲಿ ಮಾತ್ರ ಬೆಳೆಯುವ ಕೇಸರಿ ಇದೀಗ ಬಯಲುಸೀಮೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮನೆಯೊಂದರ ಹವಾನಿಯಂತ್ರಿತ ಕೊಠಡಿಯಲ್ಲಿ ಅರಳಿ ನಿಂತಿದೆ.

‘ಕೆಂಪು ಚಿನ್ನ’ ಎಂದು ಖ್ಯಾತಿ ಪಡೆದಿರುವ ಚಿನ್ನದಷ್ಟೇ ದುಬಾರಿಯಾದ ಕೇಸರಿಯನ್ನು ಆರ್‌.ಲೋಕೇಶ್‌ ಎಂಬುವರು ತಮ್ಮ ನಿವಾಸದಲ್ಲಿ ಕೃತಕ ವಾತಾವರಣ ಸೃಷ್ಟಿಸಿ ಬೆಳೆದಿದ್ದಾರೆ. 

ಸಾವಯವ ರೈತರಾಗಿ ಬದಲಾಗಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ಲೋಕೇಶ್‌ ಅವರು ಪ್ರಯೋಗಾಲಯದಂತಿರುವ 6x6 ಅಡಿ ವಿಸ್ತೀರ್ಣದ ಪುಟ್ಟ ಕೊಠಡಿಯಲ್ಲಿ ಏರೋಪೋನಿಕ್‌ ತಂತ್ರಜ್ಞಾನ ವಿಧಾನ ಬಳಸಿ ಕಾಶ್ಮೀರದ ರೀತಿಯಲ್ಲಿಯೇ ತಂಪಾದ ವಾತಾವರಣ ಸೃಷ್ಟಿಸಿದ್ದಾರೆ.

ADVERTISEMENT

ಕೃತಕ ಗಾಳಿ, ಆದ್ರತೆ ಹಾಗೂ ವಿದ್ಯುತ್‌ ದೀಪದ ಮಂದ ಬೆಳಕಿನ ನೆರವಿನಿಂದ ಕಾಶ್ಮೀರದಿಂದ ತಂದ ಕೇಸರಿ ಗಡ್ಡೆಯನ್ನು (ಕ್ರೋಮ್‌) ಕಂಟೇನರ್‌ನಲ್ಲಿ ಬೆಳೆದಿದ್ದಾರೆ. ಇಲ್ಲಿ ಮಣ್ಣು, ಗೊಬ್ಬರ, ನೀರು ಬಳಸಿಲ್ಲ!

ಕಾಶ್ಮೀರದ ಬೆಟ್ಟಗುಡ್ಡಗಳಲ್ಲಿ ಬೆಳೆದ ನೈಸರ್ಗಿಕ ಕೇಸರಿ ಹೂವುಗಳಂತೆಯೇ ಮಾಲೂರು ಮನೆಯಲ್ಲಿ ಕೇಸರಿ ಹೂವುಗಳು ಅರಳಿ ನಿಂತಿವೆ. ಮಾರಾಟಕ್ಕೆ ಸಿದ್ಧವಾಗಿದ್ದಾರೆ. 

ನಿತ್ಯ ಹಗಲಿನಲ್ಲಿ 12ರಿಂದ 17 ಡಿಗ್ರಿ ಹಾಗೂ ರಾತ್ರಿಯಲ್ಲಿ 8ರಿಂದ 10 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹಾಗೂ ಶೇ 80ಕ್ಕಿಂತ ಹೆಚ್ಚಿನ ತೇವಾಂಶ ಇರುವಂತೆ ವ್ಯವಸ್ಥೆ ಮಾಡಿದ್ದಾರೆ. ಕೃತಕ ಬೆಳಕಲ್ಲಿ ನಿತ್ಯ 16 ತಾಸು ಹಾಗೂ ಕತ್ತಲಲ್ಲಿ ಎಂಟು ತಾಸು ಇಡುತ್ತಾರೆ.

‘ಗೆಳೆಯರ ಮೂಲಕ ಕಾಶ್ಮೀರದಿಂದ ₹20 ಸಾವಿರ ನೀಡಿ 10 ಕೆ.ಜಿ ಕೇಸರಿ ಗಡ್ಡೆ (ಕ್ರೋಮ್‌) ತರಿಸಿ, ಬೆಳೆಸಿದ್ದೇನೆ. ನವೆಂಬರ್‌ 15ರಿಂದ ಡಿಸೆಂಬರ್‌ 15ರವರೆಗೆ ಮಾತ್ರ ಹೂವು ಬಿಡುತ್ತವೆ. ನಾನು ಬೆಳೆದಿರುವ ಹೂವಿನಲ್ಲಿ 20 ಗ್ರಾಂ ಕೇಸರಿ ಸಿಗಲಿದ್ದು, ₹10 ಸಾವಿರ ಸಿಗುತ್ತದೆ. ಆದರೆ, ಒಂದು ಸಲ ಖರೀದಿಸಿದ ಗಡ್ಡೆಯಿಂದ ಜೀವನ ಪರ್ಯಂತ ಕೇಸರಿ ಕೃಷಿ ಮಾಡಬಹುದು’ ಎಂದು ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಹೂವಿನ ಜೊತೆಗೆ ನಾಗರಹಾವಿನ ತಲೆಯಾಕಾರದಲ್ಲಿ ಮೂರು ಕೇಸರಿ ಎಳೆ ಇರುತ್ತವೆ. ಹೂವನ್ನು ಸುಗಂಧದ್ರವ್ಯ ಉತ್ಪಾದಿಸಲು ಬಳಸಬಹುದು. ಕೇಸರಿಯನ್ನು ಅಡುಗೆಯಿಂದ ಹಿಡಿದು ಔಷಧದವರೆಗೆ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಒಂದು ಗ್ರಾಂ ಕೇಸರಿ ಬೆಲೆ ₹500ರಿಂದ ₹1,500ರವರೆಗೆ ಇದೆ. ಕೆ.ಜಿಗೆ ₹5 ಲಕ್ಷದಿಂದ ₹15 ಲಕ್ಷದವರೆಗೆ ಬೆಲೆ ಇದೆ’ ಎಂದರು.

‘ದೇಶದಲ್ಲಿ ಕಡಿಮೆ ತಾಪಮಾನವಿರುವ ಜಮ್ಮು ಕಾಶ್ಮೀರದ ಪಂಪೋರ್‌ನಲ್ಲಿ ಮಾತ್ರ ಕೇಸರಿ ಕೃಷಿ ಮಾಡುತ್ತಾರೆ. ಇಡೀ ದೇಶದಲ್ಲಿ ಪ್ರತಿ ವರ್ಷ ಕೇವಲ 3.83 ಟನ್‌ ಮಾತ್ರ ಬೆಳೆಯುತ್ತಾರೆ. ಬೇಡಿಕೆ ಪೂರೈಸಲು ಸಾಧ್ಯವಾಗದೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ, ಆದಷ್ಟು ಕೃತಕ ವಾತಾವರಣದಲ್ಲಿ ಬೆಳೆದು ಪೂರೈಕೆ ಮಾಡುವ ಪ್ರಯತ್ನ ನಡೆಯುತ್ತಿವೆ’ ಎನ್ನುತ್ತಾರೆ.

‘ರೇಷ್ಮೆ ಬೆಳೆಯುವ ಕೊಠಡಿಯಲ್ಲೂ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಕೇಸರಿ ಬೆಳೆಯಬಹುದು. ಉತ್ಸಾಹಿ ರೈತರಿಗೆ ತರಬೇತಿ ನೀಡಲು ಸಿದ್ಧ’ ಎನ್ನುತ್ತಾರೆ ಲೋಕೇಶ್‌. 

ಕಾಶ್ಮೀರ ಕೇಸರಿ ಬೆಳೆದಿರುವ ಕೊಠಡಿಯಲ್ಲಿ ಆರ್‌.ಲೋಕೇಶ್‌
ಕೃತಕ ವಾತಾವರಣ ದಲ್ಲಿ ಬೆಳೆದಿರುವ ಕಾಶ್ಮೀರ ಕೇಸರಿ
ಕೃತಕ ವಾತಾವರಣದಲ್ಲಿ ಬೆಳೆದಿರುವ ಕಾಶ್ಮೀರ ಕೇಸರಿ

ಕೋವಿಡ್‌ ಕಾಲದಲ್ಲಿ ಕೃಷಿಕರಾದ ಸಾಫ್ಟ್‌ವೇರ್‌ ಎಂಜಿನಿಯರ್‌...

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಮಾಲೂರಿನ ಆರ್‌.ಲೋಕೇಶ್‌ ಬೆಂಗಳೂರಿನಲ್ಲಿ ಕಂಪ್ಯೂಟರ್‌ ತರಬೇತಿ ಸಂಸ್ಥೆ ಹೊಂದಿದ್ದರು. ಆದರೆ ಕೋವಿಡ್‌ ವೇಳೆ ಮುಚ್ಚಿದ ಕಾರಣ ಸಾವಯವ ಕೃಷಿಗೆ ಇಳಿದರು. ಮಾಲೂರಿನ ತಮ್ಮ ನಿವಾಸದಲ್ಲೇ ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ ಸ್ಥಾಪಿಸಿದರು. ಜೊತೆಗೆ ಸಂಪನ್ಮೂಲ ವ್ಯಕ್ತಿಯಾಗಿ ಸ್ಟಾರ್ಟ್‌ ಅಪ್‌ ತಂತ್ರಜ್ಞಾನ ಸಲಹೆಗಾರರಾಗಿ ಕೃಷಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮನೆಯಲ್ಲೇ ಕೃತಕ ವಾತಾವರಣ ಸೃಷ್ಟಿಸಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾನೇ ಮಾಡಿಕೊಡು ಕಡಿಮೆ ಖರ್ಚಿನಲ್ಲಿ ರೋಗ ಮುಕ್ತ ಗುಣಮಟ್ಟದ ದುಬಾರಿ ಬೆಲೆಯ ಕಾಶ್ಮೀರ ಕೇಸರಿ ಬೆಳೆಸಿದ್ದೇನೆ
-ಆರ್‌.ಲೋಕೇಶ್‌, ಸಾವಯವ ಕೃಷಿಕ ಮಾಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.