ADVERTISEMENT

ಶುಲ್ಕ ಗುದ್ದಾಟ: ಸಭೆಗೆ ಮನವಿ

ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗೆ ರೈತ ಸಂಘ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 15:45 IST
Last Updated 17 ಜೂನ್ 2021, 15:45 IST
ಖಾಸಗಿ ಶಾಲೆಗಳು ಹಾಗೂ ಪೋಷಕರ ನಡುವಿನ ಶುಲ್ಕ ಗುದ್ದಾಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಗುರುವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು
ಖಾಸಗಿ ಶಾಲೆಗಳು ಹಾಗೂ ಪೋಷಕರ ನಡುವಿನ ಶುಲ್ಕ ಗುದ್ದಾಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಗುರುವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು   

ಕೋಲಾರ: ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವಿನ ಶುಲ್ಕ ಗುದ್ದಾಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

‘ಕೋವಿಡ್‌ 1ನೇ ಹಾಗೂ 2ನೇ ಅಲೆಯ ಅಟ್ಟಹಾಸಕ್ಕೆ ಸತತ 2 ವರ್ಷಗಳಿಂದ ದೇಶದ ಆರ್ಥಿಕತೆ ಕುಸಿದು ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ. ಬೆಳೆದ ಬೆಳೆಗೆ ಬೆಲೆಯಿಲ್ಲದೆ ರೈತರ ಬದುಕು ಬರ್ಬರವಾಗಿದೆ. ಇಂತಹ ಸಂಕಷ್ಟದಲ್ಲಿ ಪೋಷಕರಿಗೆ ಮಕ್ಕಳ ಭವಿಷ್ಯದ ಚಿಂತೆ ಕಾಡುತ್ತಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಒಂದೆಡೆ ಜೀವನ ನಿರ್ವಹಣೆ ಮತ್ತೊಂದೆಡೆ ಮಕ್ಕಳ ಶಾಲಾ ಶುಲ್ಕ ಪಾವತಿಸಲಾಗದೆ ಸಂಕಷ್ಟದಲ್ಲಿರುವ ಪೋಷಕರು ಸರ್ಕಾರ ಮತ್ತು ಶಿಕ್ಷಣ ಸಚಿವರ ದ್ವಂದ್ವ ನೀತಿಯಿಂದ ಕಂಗಾಲಾಗಿದ್ದಾರೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳನ್ನೂ ಬಿಡದೆ ಇತ್ತ ಪೋಷಕರನ್ನೂ ಕಡೆಗಣಿಸಲಾಗದೆ ಸರ್ಕಾರ ಶುಲ್ಕ ಪಾವತಿ ವಿಚಾರದಲ್ಲಿ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಖಾಸಗಿ ಶಾಲೆಗಳು 2 ವರ್ಷಗಳಿಂದ ಶಾಲೆ ತೆರೆಯಲಾಗದೆ ಆನ್‌ಲೈನ್‌ ಮೂಲಕ ಶಿಕ್ಷಣ ನೀಡುತ್ತಿವೆ. ಶಾಲೆ ನಡೆಸಲು, ಶಿಕ್ಷಕರಿಗೆ ವೇತನ ಪಾವತಿಸಲು ಹಾಗೂ ಶಾಲಾ ಕಟ್ಟಡದ ಮೇಲಿನ ಸಾಲ ತೀರಿಸಲಾಗದೆ ಆಡಳಿತ ಮಂಡಳಿ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಪೋಷಕರು ಶೇ 100ರಷ್ಟು ಶುಲ್ಕ ಪಾವತಿಸಬೇಕೆಂದು ಶಾಲಾ ಆಡಳಿತ ಮಂಡಳಿಗಳು ಪಟ್ಟು ಹಿಡಿದಿರುವುದರಿಂದ ಮಕ್ಕಳ ಭವಿಷ್ಯದ ಮೇಲೆ ಕಾರ್ಮೋಡ ಕವಿದಿದೆ’ ಎಂದು ದೂರಿದರು.

ಇಲಾಖೆ ಮೌನ: ‘2021–22 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆ ತೆರೆಯಲು ಕ್ಷಣಗಣನೆ ಆರಂಭವಾಗಿದ್ದು, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಪಾವತಿಸದ ಮಕ್ಕಳಿಗೆ ಪಠ್ಯಪುಸ್ತಕ ನೀಡುತ್ತಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಶಿಕ್ಷಣ ಇಲಾಖೆ ಮೌನವಾಗಿದೆ’ ಎಂದು ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಹೇಳಿದರು.

‘ಜಿಲ್ಲಾಧಿಕಾರಿಗಳು ಪೋಷಕರು ಮತ್ತು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು, ಖಾಸಗಿ ಆಡಳಿತ ಮಂಡಳಿ ಹಾಗೂ ಪೋಷಕರ ಸಭೆ ನಡೆಸಿ ಶುಲ್ಕದ ಗೊಂದಲಕ್ಕೆ ತೆರೆ ಎಳೆಯಬೇಕು. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಕಾನೂನು ರೂಪಿಸಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ವಿ.ನಳಿನಿ, ಚಾಂದ್‌ಪಾಷಾ, ಕಿರಣ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.