ಕೋಲಾರ: ‘ರಾಜ್ಯ ಮಟ್ಟದ ಖೋಖೋ ತಂಡಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಶಿಬಿರ ಆಯೋಜಿಸಿದ್ದು, ಕ್ರೀಡಾಪಟುಗಳು ಉತ್ಸಾಹ ಹಾಗೂ ಶ್ರದ್ಧೆಯಿಂದ ಪಾಲ್ಗೊಂಡು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಿ’ ಎಂದು ಜಿಲ್ಲಾ ಖೋಖೋ -ಕಬಡ್ಡಿ ಸಂಸ್ಥೆ ಅಧ್ಯಕ್ಷ ಆರ್.ಶ್ರೀಧರ್ ಕಿವಿಮಾತು ಹೇಳಿದರು.
ರಾಜ್ಯ ಖೋಖೋ ಅಸೋಸಿಯೇಷನ್ ಹಾಗೂ ಜಿಲ್ಲಾ ಖೋಖೋ ಕಬಡ್ಡಿ ಸಂಸ್ಥೆ ಸಹಯೋಗದಲ್ಲಿ ರಾಜ್ಯ ಖೋಖೋ ತಂಡಕ್ಕೆ ನಡೆಯುತ್ತಿರುವ ಆಯ್ಕೆ ಶಿಬಿರಕ್ಕೆ ಇಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ‘ಶಿಬಿರಕ್ಕೆ 250 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ತಲಾ 25 ಬಾಲಕರು ಮತ್ತು ಬಾಲಕಿಯರನ್ನು ಪುನರಾಯ್ಕೆ ಮಾಡಿ ಸೆ.5ರಿಂದ 20ರವರೆಗೆ ತರಬೇತಿ ನೀಡಲಾಗುತ್ತದೆ’ ಎಂದರು.
‘ಜಿಲ್ಲಾ ಕೇಂದ್ರದ ಮಿನಿ ಕ್ರೀಡಾಂಗಣದಲ್ಲಿ ತರಬೇತಿ ನಡೆಯುತ್ತದೆ. ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಜಿಲ್ಲೆಯ ಗೌರವ ಹೆಚ್ಚಿಸಬೇಕು. ಜಿಲ್ಲೆಯು ಖೋಖೋ ಹಾಗೂ ಕಬಡ್ಡಿಯಲ್ಲಿ ಉತ್ತಮ ಕ್ರೀಡಾಪಟುಗಳನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗಳಿಗೆ ಆದ್ಯತೆ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಶಾಲೆಯಲ್ಲಿ ಶಿಕ್ಷಕರ ಹಾಗೂ ಮನೆಯಲ್ಲಿ ಪೋಷಕರ ಗುರಿ ಮಕ್ಕಳು ಉತ್ತಮ ಅಂಕ ಗಳಿಸುವುದು ಮಾತ್ರ ಆಗಿದೆ. ಕ್ರೀಡೆಗಳಿಂದಲೂ ವಿಶ್ವ ಮೆಚ್ಚುವ ಸಾಧಕರಾಗಬಹುದು ಎಂಬುದನ್ನು ಪೋಷಕರು ಮರೆತಿದ್ದಾರೆ. ಆಟದ ಮೈದಾನ 100 ಆಸ್ಪತ್ರೆಗಳಿಗೆ ಸಮ ಎಂಬ ಮಾತಿದೆ. ಆಟದ ಮೈದಾನವಿದ್ದರೆ ಆಸ್ಪತ್ರೆಗಳ ಅಗತ್ಯತೆ ಇರುವುದಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆಗಳು ಪೂರಕ’ ಎಂದರು.
‘ಕ್ರೀಡಾ ನಿಯಮಗಳಿಗೆ ಬದ್ಧರಾಗಿ ಪಾಲ್ಗೊಳ್ಳಿ. ನಿರಂತರ ಅಭ್ಯಾಸದಿಂದ ಮಾತ್ರ ಸಾಧನೆ ಸಾಧ್ಯ ಎಂಬ ಸತ್ಯ ಅರಿತು ರಾಜ್ಯ ತಂಡಕ್ಕೆ ಆಯ್ಕೆಯಾದವರು ಮುಂದಡಿ ಇಡಬೇಕು. ರಾಜ್ಯ ಖೋಖೋ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಲು ಮತ್ತು ಇಲ್ಲೇ ಶಿಬಿರ ನಡೆಸಲು ರಾಜ್ಯ ಅಸೋಸಿಯೇಷನ್ ಅವಕಾಶ ಕಲ್ಪಿಸಿದೆ. ಜಿಲ್ಲೆಯಿಂದ ಉತ್ತಮ ತಂಡ ಆಯ್ಕೆ ಮಾಡಿ ಕಳಿಸೋಣ’ ಎಂದು ತಿಳಿಸಿದರು.
ರಾಜ್ಯ ಖೋಖೋ ಅಸೋಸಿಯೇಷನ್ ಕಾರ್ಯದರ್ಶಿ ಮಲ್ಲಿಕಾರ್ಜುನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.