ADVERTISEMENT

ಎಸ್‍ಎಫ್‌ಸಿಎಸ್‌: ಆನ್‌ಲೈನ್‌ ವಹಿವಾಟು ಆರಂಭಿಸಿ

​ಪ್ರಜಾವಾಣಿ ವಾರ್ತೆ
Published 21 ಮೇ 2020, 12:26 IST
Last Updated 21 ಮೇ 2020, 12:26 IST
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಗುರುವಾರ ಎಸ್‍ಎಫ್‌ಸಿಎಸ್‌, ಫ್ಯಾಕ್ಸ್ ಸೊಸೈಟಿ ಸಿಇಒಗಳು ಹಾಗೂ ಗಣಕಯಂತ್ರ ಸಹಾಯಕರ ಸಭೆ ನಡೆಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಗುರುವಾರ ಎಸ್‍ಎಫ್‌ಸಿಎಸ್‌, ಫ್ಯಾಕ್ಸ್ ಸೊಸೈಟಿ ಸಿಇಒಗಳು ಹಾಗೂ ಗಣಕಯಂತ್ರ ಸಹಾಯಕರ ಸಭೆ ನಡೆಸಿದರು.   

ಕೋಲಾರ: ‘ತಾಲ್ಲೂಕಿನ ಎಲ್ಲಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಗಳಲ್ಲಿ (ಎಸ್‍ಎಫ್‌ಸಿಎಸ್‌) ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಜೂನ್‌ 1ರಿಂದ ಆನ್‌ಲೈನ್ ವಹಿವಾಟು ಆರಂಭಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಎಸ್‍ಎಫ್‌ಸಿಎಸ್‌, ಫ್ಯಾಕ್ಸ್ ಸೊಸೈಟಿ ಸಿಇಒಗಳು ಹಾಗೂ ಗಣಕಯಂತ್ರ ಸಹಾಯಕರ ಸಭೆಯಲ್ಲಿ ಮಾತನಾಡಿ, ‘ಎಸ್‌ಎಫ್‌ಸಿಎಸ್‌ಗಳಲ್ಲಿ ಏ.1ರಿಂದಲೇ ಆನ್‌ಲೈನ್‌ ವಹಿವಾಟು ಆರಂಭಿಸಲು ನಿರ್ಧರಿಸಲಾಗಿತ್ತು ಆದರೆ, ಲಾಕ್‌ಡೌನ್‌ನಿಂದಾಗಿ ತಡವಾಯಿತು’ ಎಂದರು.

‘ಆನ್‌ಲೈನ್‌ ವಹಿವಾಟು ಆರಂಭವಾದರೆ ಭ್ರಷ್ಟತೆಗೆ ಕಡಿವಾಣ ಬೀಳುತ್ತದೆ. ಪಾರದರ್ಶಕತೆ ಬಲಗೊಳ್ಳುವುದರಿಂದ ರೈತರು, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳಲ್ಲಿ ಸೊಸೈಟಿಗಳ ಬಗ್ಗೆ ನಂಬಿಕೆ ಹೆಚ್ಚಲಿದೆ. ಸಾಲ ಮರುಪಾವತಿ, ಠೇವಣಿ ಇಡುವಿಕೆಯಲ್ಲೂ ನಂಬಿಕೆ ಮೂಡುತ್ತದೆ. ಸೊಸೈಟಿಗಳು ಆರ್ಥಿಕವಾಗಿ ಮತ್ತಷ್ಟು ಬಲಗೊಳ್ಳಲು ಸಹಾಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಗ್ರಾಹಕರ ಹಣ ಪಾವತಿಗೆ ಸ್ಥಳದಲ್ಲೇ ಸ್ವೀಕೃತಿ ಸಿಗುವುದರಿಂದ ಹೊಂದಾಣಿಕ ವ್ಯವಹಾರಕ್ಕೆ ಅವಕಾಶ ಸಿಗುವುದಿಲ್ಲ. ಸೊಸೈಟಿಗಳು ಬ್ಯಾಂಕ್‌ಗಳಂತೆ ಆರ್ಥಿಕವಾಗಿ ನೆಲೆ ಕಂಡುಕೊಳ್ಳಲಿವೆ. ಸೊಸೈಟಿ ಸಿಇಒಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪ್ರಾಮಾಣಿಕವಾಗಿದ್ದರೆ ಯಾರಿಗೂ ಹೆದರುವ ಅಗತ್ಯವಿಲ್ಲ. ಗಣಕೀಕರಣ ಮತ್ತು ಆನ್‌ಲೈನ್ ವಹಿವಾಟಿಗೆ ಬ್ಯಾಂಕ್‌ ಎಲ್ಲಾ ನೆರವು ನೀಡುತ್ತದೆ’ ಎಂದು ತಿಳಿಸಿದರು.

ಆರೋಗ್ಯ ವಿಮೆ: ‘ಬ್ಯಾಂಕ್‌ನಿಂದ ಸೊಸೈಟಿ ಸಿಇಒಗಳಿಗೆ ಈಗಾಗಲೇ ಆರೋಗ್ಯ ವಿಮೆ ಮಾಡಿಸಲಾಗಿದೆ. ಸಿಬ್ಬಂದಿಯು ಸೊಸೈಟಿಗೆ ಬರುವ ಗ್ರಾಹಕರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ಬ್ಯಾಂಕ್‌ಗಿಂತ ಸೊಸೈಟಿ ಸಿಬ್ಬಂದಿಯು ನೇರವಾಗಿ ಫಲಾನುಭವಿಗಳ ಜತೆ ಸಂಪರ್ಕ ಹೊಂದಿರುವುದರಿಂದ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸೊಸೈಟಿಗಳು ಕೇವಲ ಸಾಲ ನೀಡುವುದಕ್ಕೆ ಸೀಮಿತವಾಗದೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಗಮನ ಹರಿಸಬೇಕು. ತಾಲ್ಲೂಕಿನ ಸೊಸೈಟಿಗಳು ರಾಜ್ಯಕ್ಕೆ ಮಾದರಿಯಾಗಬೇಕು’ ಎಂದು ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.