ADVERTISEMENT

ಬಸ್ ಸೇವೆ ಕಲ್ಪಿಸಲು ಎಸ್ಎಫ್ಐ ಮನವಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:36 IST
Last Updated 18 ಅಕ್ಟೋಬರ್ 2024, 14:36 IST
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮಾಂತರ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೇವೆ ಒದಗಿಸುವಂತೆ ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ಎಸ್ಎಫ್ಐ ಮನವಿ ಸಲ್ಲಿಸಿತು 
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮಾಂತರ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೇವೆ ಒದಗಿಸುವಂತೆ ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ಎಸ್ಎಫ್ಐ ಮನವಿ ಸಲ್ಲಿಸಿತು    

ಮುಳಬಾಗಿಲು: ಗ್ರಾಮಾಂತರ ಪ್ರದೇಶಗಳಿಂದ ನಗರ ಪ್ರದೇಶಗಳಲ್ಲಿರುವ ಶಾಲಾ–ಕಾಲೇಜುಗಳಿಗೆ ಹೋಗಿ ಬರಲು  ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಭಾರತ ವಿದ್ಯಾರ್ಥಿ ಒಕ್ಕೂಟವು (ಎಸ್ಎಫ್ಐ) ಮುಳಬಾಗಿಲು ಘಟಕದ ನಿಯಂತ್ರಣಾಧಿಕಾರಿ ಗಂಗಾಧರರೆಡ್ಡಿ ಮೂಲಕ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತು. 

ಎಸ್ಎಫ್ಐ ತಾಲ್ಲೂಕು ಕಾರ್ಯದರ್ಶಿ ಸುದರ್ಶನ್ ಮಾತನಾಡಿ, ಹಲವಾರು ವರ್ಷಗಳಿಂದ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಹೋರಾಟಗಳನ್ನು ನಡೆಸಲಾಗಿದೆ. ಆದರೆ, ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಇಂದಿಗೂ ಬಸ್ ಸೌಲಭ್ಯ ಇಲ್ಲ. ಕೆಲವು ಪ್ರದೇಶಗಳಿಗೆ ಬಸ್‌ಗಳಿದ್ದರೂ, ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಪಾಸ್‌ಗಳಿದ್ದರೂ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ದೇವರಾಯ ಸಮುದ್ರ ಐಟಿಐ ಕಾಲೇಜು ಮಾರ್ಗದಲ್ಲಿ ಹೋಗುವ ಬಸ್‌ಗಳು ಕಾಲೇಜುಗಳ ಬಳಿ ನಿಲ್ಲಿಸುತ್ತಿಲ್ಲ. ಕೊರೊನಾ ಲಾಕ್‌ಡೌನ್ ಮುಂಚೆ ತಾಯಲೂರು ಮುಖಾಂತರ ಯಳಚೇಪಲ್ಲಿ ಗ್ರಾಮ ಹಾಗೂ ಗುಮ್ಲಾಪುರ ಮಾರ್ಗದಿಂದ ಮೇಲ್ ತಾಯಲೂರು ಗ್ರಾಮಗಳಿಗೆ ಬಸ್ಸಿನ ಸೌಲಭ್ಯವಿತ್ತು. ಆದರೆ ಈಗ ಆ ಮಾರ್ಗದಲ್ಲಿ ಬಸ್‌ಗಳು ಓಡಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ. ಈ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ, ನಗರದ ಬಸ್ ಘಟಕದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. 

ADVERTISEMENT

ಎಸ್ಎಫ್ಐ ತಾಲ್ಲೂಕು ಅಧ್ಯಕ್ಷೆ ಅರ್ಚನ, ಸುಭಾಷ್, ಯಶ್, ಅಜಯ್ ಕುಮಾರ್, ವಾಸುದೇವ ರಾವ್, ತರುಣ್ ರಾವ್, ಮುನಿಯಪ್ಪ, ಪವಿತ್ರ ಬಾಯಿ, ಮಂಜುನಾಥರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.