ADVERTISEMENT

ಶಿವಕುಮಾರ ಸ್ವಾಮೀಜಿ ಮಹಾನ್‌ ಮಾನವತಾವಾದಿ: ಶಂಕರಪ್ಪ

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 16:06 IST
Last Updated 1 ಏಪ್ರಿಲ್ 2022, 16:06 IST
ವಿವೇಕಾನಂದ ಮಿತ್ರ ಬಳಗದ ವತಿಯಿಂದ ಕೋಲಾರದಲ್ಲಿ ಶುಕ್ರವಾರ ಶಿವಕುಮಾರ ಸ್ವಾಮೀಜಿಯವರ ಜಯಂತ್ಯುತ್ಸವ ಆಚರಿಸಲಾಯಿತು
ವಿವೇಕಾನಂದ ಮಿತ್ರ ಬಳಗದ ವತಿಯಿಂದ ಕೋಲಾರದಲ್ಲಿ ಶುಕ್ರವಾರ ಶಿವಕುಮಾರ ಸ್ವಾಮೀಜಿಯವರ ಜಯಂತ್ಯುತ್ಸವ ಆಚರಿಸಲಾಯಿತು   

ಕೋಲಾರ: ‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯು ಇಡೀ ಜೀವತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟರು. ಶ್ರೀಗಳು ಜಾತಿ, ಧರ್ಮ ಬೇಧ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿದರು. ಅನ್ನ, ವಸತಿ, ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದರು’ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಸ್ಮರಿಸಿದರು.

ವಿವೇಕನಂದ ಮಿತ್ರ ಬಳಗವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಯವರ 115 ಜಯಂತ್ಯುತ್ಸವದಲ್ಲಿ ಮಾತನಾಡಿ, ‘ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವ ಭಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಮಾದರಿ’ ಎಂದು ಬಣ್ಣಿಸಿದರು.

‘ಶಿವಕುಮಾರ ಸ್ವಾಮೀಜಿಯು 7 ದಶಕಕ್ಕೂ ಹೆಚ್ಚು ಕಾಲ ಸಮಾಜದಲ್ಲಿ ಬಡವರು, ದೀನ ದಲಿತರಿಗೆ ಅಕ್ಷರ, ಆಶ್ರಯ, ಅನ್ನ ನೀಡಿದರು. 12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ, ದಾಸೋಹದ ವೈಭವವನ್ನು ಸಿದ್ಧಗಂಗಾ ಮಠದಲ್ಲಿ ಮತ್ತೆ ನೋಡುವ ಭಾಗ್ಯ ಕರುಣಿಸಿದರು. ಸ್ವಾಮೀಜಿ ದಾರ್ಶನಿಕರು’ ಎಂದು ಹೇಳಿದರು.

ADVERTISEMENT

‘ಸ್ವಾಮೀಜಿಯು ಧರ್ಮ, ಜಾತಿ, ವರ್ಣ ಭೇದವಿಲ್ಲದೆ ಲಕ್ಷಾಂತರ ಮಂದಿಗೆ ಶಿಕ್ಷಣ ನೀಡುವ ಮೂಲಕ ಜ್ಞಾನದ ಬೆಳಕು ತೋರಿದರು. ಕೊನೆಯ ಉಸಿರಿರುವವರೆಗೂ ತಮ್ಮ ಬದುಕನ್ನು ಸಮಾಜ ಸೇವೆಗೆ ಮುಡುಪಾಗಿಟ್ಟ ಅವರು ಮಹಾನ್‌ ಮಾನವತಾವಾದಿ. ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದ ಬಹುತೇಕ ಮಂದಿ ಉನ್ನತ ಸ್ಥಾನಗಳಲಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಅಪರೂಪದ ತಪಸ್ವಿ: ‘ಸ್ವಾಮೀಜಿಯು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಜಾತ್ಯಾತೀತ ತತ್ವ ಮೈಗೂಡಿಸಿಕೊಂಡಿದ್ದ ಶ್ರೀಗಳು ನಿಜಕ್ಕೂ ಪವಾಡ ಪುರುಷರು. ಬಸವಣ್ಣರ ತತ್ವಾದರ್ಶ ಕಾರ್ಯರೂಪಕ್ಕೆ ತಂದ ಅಪರೂಪದ ತಪಸ್ವಿ’ ಎಂದು ಗೃಹರಕ್ಷಕ ದಳದ ನಿವೃತ್ತ ಕಮಾಂಡೆಂಟ್ ಮರಿಸ್ವಾಮಿ ಅಭಿಪ್ರಾಯಪಟ್ಟರು.

‘ಸಿದ್ಧಗಂಗಾ ಶ್ರೀಗಳು ಜಾತ್ಯಾತೀತವಾಗಿ ಬಡ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹದ ಸೌಲಭ್ಯ ಕಲ್ಪಿಸುವ ಮೂಲಕ ಸಿದ್ಧಗಂಗಾ ಕ್ಷೇತ್ರವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಪರಿವರ್ತಿಸಿ ಸಮಾಜಕ್ಕೆ ಮಾದರಿಯಾದರು. ನಗರದ ಇಟಿಸಿಎಂ ಆಸ್ಪತ್ರೆ ಪಕ್ಕದ ಜೋಡಿ ರಸ್ತೆಗೆ ಶಿವಕುಮಾರ ಸ್ವಾಮೀಜಿ ರಸ್ತೆಯೆಂದು ನಾಮಕರಣ ಮಾಡಬೇಕು. ಜತೆಗೆ ಅವರ ಪುತ್ಥಳಿ ಸ್ಥಾಪಿಸಬೇಕು’ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮನವಿ ಮಾಡಿದರು.

ನಗರಸಭೆ ಸದಸ್ಯ ಪ್ರಸಾದ್‌ಬಾಬು, ನಿವೃತ್ತ ಪ್ರಾಂಶುಪಾಲ ರುದ್ರೇಶ್, ಮುಖಂಡರಾದ ಬಿ.ಎಂ.ಚೆನ್ನಪ್ಪ, ಬಿ.ಸುರೇಶ್, ಸಚ್ಚಿದಾನಂದ, ಬಿ.ಉಮೇಶ್, ಜಯದೇವ್, ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.