ADVERTISEMENT

ಬಿಜೆಪಿಯ ಕೆಲ ಶಾಸಕರು ಬೆಳಗಾವಿ ಅಧಿವೇಶನಕ್ಕೆ ಬರುವುದೇ ಅನುಮಾನ: ಕೊತ್ತೂರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 12:56 IST
Last Updated 1 ಡಿಸೆಂಬರ್ 2023, 12:56 IST
   

ಕೋಲಾರ: ‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಹಿಡಿತದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಉತ್ತಮ ಆಡಳಿತ ನಡೆಸಲು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಲ್ಲವೇ? ನಾವೂ ಅವರ ಹಿಡಿತದಲ್ಲಿ ಇದ್ದೇವೆ. ಆದರೆ, ಸರ್ಕಾರ ಡಿ.ಕೆ.ಶಿವಕುಮಾರ್‌ ಕೈಗೊಂಬೆಯಾಗಿದೆ ಎಂಬುದು ತಪ್ಪು. ಯಾವ ಸಚಿವರ ಖಾತೆಗಳಿಗೂ ಅವರು ತಲೆಹಾಕುತ್ತಿಲ್ಲ’ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಸಮರ್ಥಿಸಿಕೊಂಡರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಷ್ಟೇ ದೊಡ್ಡ ಮನುಷ್ಯರು ಆಗಿರಲಿ; ನಾನು ನೇರವಾಗಿ ಮಾತನಾಡುತ್ತೇನೆ. ಏನಾದರೂ ತಪ್ಪು ನಡೆದರೆ ಮೊದಲು ಮಾತನಾಡುವವನು ನಾನೇ. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್‌ ನನಗೇನೂ ಕಿರೀಟ ತೊಡಿಸುವುದಿಲ್ಲ. ನನ್ನನ್ನು ಗೆಲ್ಲಿಸುವವರು, ಕಿರೀಟ ತೊಡಿಸುವವರು ಕೋಲಾರ ಹಾಗೂ ಮುಳಬಾಗಿಲು ಜನ. ಆದರೆ, ಈಗ ಅವರೇನೂ ತಪ್ಪು ಮಾಡಿಲ್ಲ’ ಎಂದರು.

‘ಕಾಂಗ್ರೆಸ್‌ ಸರ್ಕಾರ ಬೀಳುವ ಕನಸನ್ನು ಬಿಜೆಪಿ ಮುಖಂಡರು ಕಾಣುತ್ತಿದ್ದಾರೆ. ನಮಗೂ ಹಿಂದೆ ಏಟು ಬಿದ್ದ ಅನುಭವ ಇದೆ. ಹೀಗಾಗಿ, ಎಚ್ಚರಿಕೆಯಿಂದ ಇದ್ದೇವೆ. ಆದರೆ, ಬಿಜೆಪಿಯಲ್ಲೇ ಕಿತ್ತಾಟ ಶುರುವಾಗಿದ್ದು, ಅವರಲ್ಲಿ ಕೆಲವರು ಬೆಳಗಾವಿ ಅಧಿವೇಶನಕ್ಕೆ ಬರುವುದೇ ಅನುಮಾನ’ ಎಂದು ಹೇಳಿದರು.

ADVERTISEMENT

‘ಮದುವೆಯಾಗಿ ಮಗು ಹುಟ್ಟಲು ಒಂಬತ್ತು ತಿಂಗಳು ಕಾಯಬೇಕಾಗುತ್ತದೆ. ಕಾಂಗ್ರೆಸ್‌ ಸರ್ಕಾರ ಬಂದು ಕೇವಲ ಆರು ತಿಂಗಳಾಗಿದೆ. ಮುಂದಿನ ಬಜೆಟ್‌ವರೆಗೆ ಎಲ್ಲರೂ ತಾಳ್ಮೆಯಿಂದ ಕಾಯಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.