ADVERTISEMENT

ಕೋಲಾರ ಜಿಲ್ಲೆಯಲ್ಲಿ 680 ಹೆಕ್ಟೇರ್‌ ಬಿತ್ತನೆ: 95,448 ಹೆಕ್ಟೇರ್‌ ಬಿತ್ತನೆ ಗುರಿ

ಕೆ.ಓಂಕಾರ ಮೂರ್ತಿ
Published 29 ಜೂನ್ 2024, 6:04 IST
Last Updated 29 ಜೂನ್ 2024, 6:04 IST
ಕೋಲಾರ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು
ಕೋಲಾರ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು   

ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚುರುಕು ಪಡೆಯುತ್ತಿದ್ದು, ಈವರೆಗೆ 680 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ.

ಈ ವರ್ಷ ಇಲ್ಲಿಯವರೆಗೆ ಒಟ್ಟಾರೆಯಾಗಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಕಳೆದ ಏಳು ದಿನಗಳ ಅವಧಿಯಲ್ಲಿ ಸ್ವಲ್ಪ ಕಡಿಮೆಯಾಗಿದೆ. ಆದಾಗ್ಯೂ ಉತ್ತಮ ಮಳೆ ನಿರೀಕ್ಷೆಯಲ್ಲಿ ತೊಗರಿ ಹಾಗೂ ನೆಲಗಡಲೆ ಬಿತ್ತನೆ ಮುಂದುವರಿದಿದೆ. ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. 

ಜ.1ರಿಂದ ಜೂನ್‌ 27ರವರೆಗೆ ವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 18 ಸೆಂ.ಮೀ. (180 ಮಿ.ಮೀ) ಮಳೆ ಸುರಿಯಬೇಕಿತ್ತು. ಆದರೆ, 24.4 ಸೆಂ.ಮೀ ( 244 ಮಿ.ಮೀ) ಮಳೆ ಸುರಿದಿದೆ. ವಾಡಿಕೆಗಿಂತ ಶೇ 35ರಷ್ಟು ಅಧಿಕ ಮಳೆ ಆಗಿರುವುದು ರೈತರಲ್ಲಿ ಹುಮ್ಮಸ್ಸು ತುಂಬಿದೆ. ಹೀಗಾಗಿ, ಕೆಲವರು ಭೂಮಿ ಹದಗೊಳಿಸುವುದು, ಸಾಲು ಹೊಡೆಯುವುದು, ನಾಟಿ ಪ್ರಕ್ರಿಯೆ ನಡೆದಿದೆ.

ADVERTISEMENT

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿಂದ 95,448 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ರಾಗಿ ಬಿತ್ತನೆ ಗುರಿಯೇ 60,973 ಹೆಕ್ಟೇರ್‌ ಪ್ರದೇಶವಿದೆ. ರಾಗಿ ಬಿತ್ತನೆ ಜುಲೈ 15ರ ಬಳಿಕ ಆರಂಭವಾಗಿ ಆಗಸ್ಟ್‌ ಅಂತ್ಯದವರೆಗೆ ನಡೆಯುತ್ತದೆ. ನೆಲಗಡಲೆ ಬಿತ್ತನೆ ಗುರಿ 11,757 ಹೆಕ್ಟೇರ್‌ ಹಾಗೂ ತೊಗರಿ ಬಿತ್ತನೆ ಗುರಿ 4,500 ಹೆಕ್ಟೇರ್‌ ಇದೆ.

ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಸಿದ ರೈತರು

‘ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಇದೆ. ಅವಶ್ಯ ಹಾಗೂ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ದಾಸ್ತಾನು ಮಾಡಿ ವಿತರಿಸಲಾಗುವುದು. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರಾಗಿ ಬಿತ್ತನೆ ಆರಂಭಕ್ಕೆ ಇನ್ನೂ ಸಮಯ ಇದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಎಂ.ಆರ್‌.ಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಇತ್ತ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ರಾಗಿ ಬಿತ್ತನೆಗೂ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಟ್ರ್ಯಾಕ್ಟರ್‌ ಬಳಸಿ ಕೃಷಿ ಚಟುವಟಿಕೆ

ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಹಾಗೂ ಬರದಿಂದ ಸುಮಾರು 35,974 ಹೆಕ್ಟೇರ್‌ ಪ್ರದೇಶದಲ್ಲಿ ₹ 219.87 ಕೋಟಿ ಮೊತ್ತದಷ್ಟು ಬೆಳೆ ಹಾನಿ ಆಗಿತ್ತು.

2022–23ನೇ ಮುಂಗಾರು ಹಂಗಾಮಿನಲ್ಲಿ 1,02,590 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, 53,592 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು.

ಏಳು ದಿನಗಳಲ್ಲಿ ಮಳೆ ಕೊರತೆ: ಇದು ಬಿತ್ತನೆಯ ಕಾಲ. ಆದರೆ, ಏಳು ದಿನಗಳಲ್ಲೇ ಮಳೆ (ಜೂನ್‌ 21ರಿಂದ 27) ಜಿಲ್ಲೆಯಾದ್ಯಂತ ಕೈಕೊಟ್ಟಿರುವುದು ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. ಈ ಏಳು ದಿನಗಳಲ್ಲಿ 0.8 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 0.6 ಸೆಂ.ಮೀ ಮಳೆಯಾಗಿದೆ.

ಸುಮಾ
ಜಿಲ್ಲೆಯಲ್ಲಿ ಮಳೆ ಕೊರತೆ ಇಲ್ಲ. ಬಿತ್ತನೆ ಪ್ರಮಾಣ ಆಶಾದಾಯಕವಾಗಿದೆ. ತೊಗರಿ 300 ಹೆಕ್ಟೇರ್‌ನಲ್ಲಿ ಹಾಗೂ ನೆಲಗಡಲೆ 380 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ
ಎಂ.ಆರ್‌.ಸುಮಾ ಕೃಷಿ ಜಂಟಿ ನಿರ್ದೇಶಕಿ ಕೋಲಾರ
ಬೆಳೆ ವಿಮೆ ನೋಂದಣಿಗೆ ಗಡುವು
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಹೆಸರು ನೋಂದಾಯಿಸಲಾಗುತ್ತಿದೆ. ಜಿಲ್ಲೆಯ ಅಧಿಸೂಚಿತ ಬೆಳೆಗಳಾದ ಮಳೆಯಾಶ್ರಿತ ನೆಲಗಡಲೆ (ಶೇಂಗಾ) ಬೆಳೆಗೆ ಜುಲೈ 1ರ ವರೆಗೆ ಟೊಮೆಟೊ ಮಳೆಯಾಶ್ರಿತ ತೊಗರಿ ಮಳೆಯಾಶ್ರಿತ ಭತ್ತ ಬೆಳೆಗಳಿಗೆ ಜುಲೈ 31ರ ವರೆಗೆ ಹಾಗೂ ನೀರಾವರಿ ಹಾಗೂ ಮಳೆಯಾಶ್ರಿತ ರಾಗಿ ನೀರಾವರಿಯಾಶ್ರಿತ ಭತ್ತ ಮಳೆಯಾಶ್ರಿತ ಹುರಳಿ ಬೆಳೆಗಳಿಗೆ ಆಗಸ್ಟ್ 16 ಕೊನೆಯ ದಿನವಾಗಿರುತ್ತದೆ. ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ ನಾಟಿ ಮಾಡಲು ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.