ಕೋಲಾರ: ಜಿಲ್ಲೆಯಲ್ಲಿ 21ನೇ ಜಾನುವಾರುಗಳ ಗಣತಿಗೆ ವೇಗ ಲಭಿಸಿದ್ದು, ಸಿಬ್ಬಂದಿ ಮನೆಮನೆಗೆ ಹೋಗಿ ದನ, ಎತ್ತು, ಎಮ್ಮೆ, ಕುರಿ, ಮೇಕೆ, ಕತ್ತೆ, ಹಂದಿ, ನಾಯಿ, ಕುದುರೆ, ಬಾತುಕೋಳಿ, ಮೊಲಗಳ ಎಣಿಕೆಯಲ್ಲಿ ತೊಡಗಿದ್ದಾರೆ.
ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಅನುದಾನದಲ್ಲಿ ಗಣತಿ ನಡೆಸಲಾಗುತ್ತಿದ್ದು, ಮೊಬೈಲ್ ಆ್ಯಪ್‌ನಲ್ಲಿ ದತ್ತಾಂಶ ಸಂಗ್ರಹ ಮಾಡಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ಜಾನುವಾರುಗಳ ಸಂಪೂರ್ಣ ಚಿತ್ರಣ ಸಿಗಲಿದೆ. ಇದಕ್ಕಾಗಿ ಕೇಂದ್ರ ಪಶು ಇಲಾಖೆಯು ‘ಲೈವ್‌ಸ್ಟಾಕ್ ಸೆನ್ಸಸ್’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಮೂಲಕ ಈ ಬಾರಿ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಹಿಂದೆಲ್ಲಾ ನೋಟ್ ಪುಸ್ತಕದಲ್ಲಿ ನಮೂದಿಸುತ್ತಿದ್ದರಿಂದ ವ್ಯತ್ಯಾಸವಾಗುತಿತ್ತು.
ಜಾನುವಾರುಗಳ ಲಿಂಗ, ವಯಸ್ಸು, ಆರೋಗ್ಯದ ಸ್ಥಿತಿಗತಿ, ಯಾವ ತಳಿ, ಸಾಕುತ್ತಿರುವ ರೈತ ಕುಟುಂಬಗಳ ವಿವರವನ್ನು ಆ್ಯಪ್‌ನಲ್ಲೇ ದಾಖಲಿಸಲಾಗುತ್ತಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಯಲಿದ್ದು, ಈ ಹಿಂದೆ 2019ರಲ್ಲಿ 20ನೇ ಗಣತಿ ನಡೆದಿತ್ತು.
‘ಅ.25ರಂದು ಜಾನುವಾರು ಗಣತಿ ಆರಂಭವಾಗಿದ್ದು, ಫೆ.25ರವರೆಗೆ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿದ್ದು, ಪಶುಪಾಲನಾ ವಲಯದ ಯೋಜನೆ ಹಾಗೂ ನೀತಿ ರೂಪಿಸಲು ಜಾನುವಾರು ಅಂಕಿಅಂಶಗಳು ಸಹಾಯವಾಗುತ್ತದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ (ಆಡಳಿತ) ಡಾ.ಗಂಗಾ ತುಳಸಿ ರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಜಾನುವಾರು ಗಣತಿಗೆ ಚಾಲನೆ ನೀಡಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಮನೆಮನೆಗೆ ಹೋಗಿ ಜಾನುವಾರುಗಳ ದತ್ತಾಂಶ ಸಂಗ್ರಹಿಸುತ್ತಿದ್ದಾರೆ. ನಮ್ಮ ಎಲ್ಲಾ ಸಹಾಯಕ ನಿರ್ದೇಶಕರು, ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ’ ಎಂದರು.
ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 2,27,058 ಮನೆಗಳು ಹಾಗೂ ನಗರ ಪ್ರದೇಶದಲ್ಲಿ 1,06,290 ಮನೆಗಳಿವೆ. ಸಿಬ್ಬಂದಿ ಕೊರತೆ ನಡುವೆಯೂ 73 ಮಂದಿ ಗಣತಿದಾರರು ಗಣತಿಯಲ್ಲಿ ತೊಡಗಿದ್ದಾರೆ. 15 ಮೇಲ್ವಿಚಾರಕರು ಉಸ್ತುವಾರಿ ಹೊತ್ತಿದ್ದಾರೆ, ಇಬ್ಬರು ನೋಡಲ್ ಅಧಿಕಾರಿಗಳಿದ್ದು, ಡಾ.ಜಿ.ಟಿ.ರಾಮಯ್ಯ ಅವರು ಜಿಲ್ಲಾ ನೋಡಲ್ ಅಧಿಕಾರಿಯಾಗಿದ್ದಾರೆ.
ಡಿಜಿಟಲ್ ಗಣತಿ ಆಗಿರುವ ಕಾರಣ ಬೇಕಾಬಿಟ್ಟಿ ಮಾಹಿತಿ ಕೊಡುವಂತಿಲ್ಲ. ಗಣತಿಯಲ್ಲಿ ತೊಡಗಿರುವ 73 ಗಣತಿದಾರರಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹಧನವೂ ಸಿಗಲಿದೆ.
ಜಿಲ್ಲೆಯಲ್ಲಿ 2019ರಲ್ಲಿ ಗಣತಿ ನಡೆದಾಗ 86 ಲಕ್ಷ ಕೋಳಿಗಳು ಸೇರಿದಂತೆ ಒಟ್ಟು 94.54 ಲಕ್ಷ ಜಾನುವಾರುಗಳಿದ್ದವು.
ಬಿಡಾಡಿ ದನಗಳು ಬೀದಿ ನಾಯಿಗಳ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ. ದೇವಾಲಯಗಳಲ್ಲಿರುವ ಆನೆ ಜಾನುವಾರುಗಳ ದತ್ತಾಂಶವನ್ನೂ ಸಂಗ್ರಹಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದುಡಾ.ಜಿ.ಟಿ.ರಾಮಯ್ಯ ಉಪನಿರ್ದೇಶಕ ಪಶುಪಾಲನಾ ಇಲಾಖೆ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.