ADVERTISEMENT

ಮುಳಬಾಗಿಲು: ಸ್ಪೀಡ್ ರಾಡಾರ್ ತಂತ್ರಜ್ಞಾನ ವ್ಯವಸ್ಥೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 13:44 IST
Last Updated 14 ಜೂನ್ 2024, 13:44 IST
ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಗೇಟಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸ್ಪೀಡ್ ರಾಡಾರ್ ತಂತ್ರಜ್ಞಾನ ವ್ಯವಸ್ಥೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಚಾಲನೆ ನೀಡಿದರು.
ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಗೇಟಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸ್ಪೀಡ್ ರಾಡಾರ್ ತಂತ್ರಜ್ಞಾನ ವ್ಯವಸ್ಥೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಚಾಲನೆ ನೀಡಿದರು.   

ಮುಳಬಾಗಿಲು: ರಸ್ತೆಗಳಲ್ಲಿ ವಾಹನಗಳ ವೇಗವನ್ನು ಮಾಪನ ಮಾಡಿ ಅಳೆಯುವ ಸ್ಪೀಡ್ ರಾಡಾರ್ ತಂತ್ರಜ್ಞಾನದ ವ್ಯವಸ್ಥೆಗೆ ತಾಲ್ಲೂಕಿನ ಹನುಮನಹಳ್ಳಿ ಗೇಟ್ ಬಳಿಯಲ್ಲಿ ಶುಕ್ರವಾರ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಚಾಲನೆ ನೀಡಿದರು.

ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು ಹಾಗೂ ಕೋಲಾರ ತಾಲ್ಲೂಕುಗಳ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳ ವೇಗವನ್ನು ತಿಳಿಸುವ ತಂತ್ರಜ್ಞಾನಕ್ಕೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ತಾಲ್ಲೂಕಿನ ಹನುಮನಹಳ್ಳಿ ಬಳಿಯಲ್ಲಿ ಸ್ವತಃ ಪ್ರಾಯೋಗಿಕವಾಗಿ ಸ್ಪೀಡ್ ರಾಡಾರ್ ಯಂತ್ರದ ಮೂಲಕ ವಾಹನಗಳ ವೇಗವನ್ನು ಅಳೆಯುವ ಮೂಲಕ ಚಾಲ‌ನೆ ನೀಡಿದರು.

ನಂತರ ಮಾತನಾಡಿದ ಎಸ್.ಪಿ, ವಾಹನಗಳ ವೇಗದ ಚಾಲನೆಯಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಈಗಾಗಲೇ ವಾರ್ಷಿಕ 200  ಅಪಘಾತಗಳಿಂದ ಸುಮಾರು 200 ಸಾವುಗಳು ನಡೆದಿದೆ. ಈ ಎಲ್ಲಾ ಘಟನೆಗಳನ್ನು ಮನಗಂಡು ಯಂತ್ರದ ಮೂಲಕ ವಾಹನಗಳು ಎಷ್ಟು ವೇಗದಲ್ಲಿ ಚಲಿಸುತ್ತಿವೆ ಎಂಬುದನ್ನು ಮನಗಂಡು ಗರಿಷ್ಠ 80 ಕಿಲೊಮೀಟರ್ ವೇಗದಲ್ಲಿ ಮಾತ್ರ ಸಂಚರಿಸುವಂತೆ ಮಾಡುವ ವ್ಯವಸ್ಥೆಯೇ ಸ್ಪೀಡ್ ರಾಡಾರ್ ನ ಉದ್ದೇಶವಾಗಿದೆ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ಹಾಗೂ ರಾಷ್ಟ್ರೀಯ ಹೆದ್ದಾರಿ 234 ಎಂಬ ಎರಡು ಹೆದ್ದಾರಿಗಳು ಹಾದು ಹೋಗಿದ್ದು ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ, ದೇವರಾಯ ಸಮುದ್ರ, ಕಾಂತರಾಜ ವೃತ್ತ, ಕೋಲಾರ ತಾಲ್ಲೂಕಿನ ಚುಂಚದೇನಹಳ್ಳಿ, ವಡಗೂರು ಮತ್ತಿತರರ ಕಡೆಗಳಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿವೆ.ಹೀಗಾಗಿ ವೇಗವನ್ನು ಕಡಿಮೆ ಮಾಡಿದರೆ ಸುಲುಭವಾಗಿ ಅಪಘಾತಗಳನ್ನು ಕಡಿಮೆ ಮಾಡಬಹುದಾಗಿದೆ. ಈ ಉದ್ದೇಶದಿಂದ ಇದೇ ಮೊದಲ ಬಾರಿಗೆ ಜಿಲ್ಲೆಯ ಆರು ಕಡೆಗಳಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾಗಳ ಯಂತ್ರಗಳನ್ನು ಅಳವಡಿಸಿ ಅತಿವೇಗದ ವಾಹನಗಳನ್ನು ಗುರ್ತಿಸಿ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಜಗದೀಶ್, ಮುಳಬಾಗಿಲು ಗ್ರೇಡ್ 2 ತಹಶೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ, ಡಿವೈಎಸ್ಪಿ ಡಿ.ಸಿ.ನಂದಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಕೆ.ಜಿ.ಸತೀಶ್, ಲೋಕೇಶ್, ನಗರ ಇನ್ ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ ಸ್ಪೆಕ್ಟರುಗಳಾದ ವಿಠಲ್ ವೈ.ತಳವಾರ್, ಎಲ್.ಮಮತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.