ADVERTISEMENT

ಬೇತಮಂಗಲ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸ್ಥಳ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 14:26 IST
Last Updated 18 ಸೆಪ್ಟೆಂಬರ್ 2024, 14:26 IST
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಅಕ್ರಂಪಾಷಾ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಕೆ.ನಾಗವೇಣಿ ಹಾಜರಿದ್ದರು
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಅಕ್ರಂಪಾಷಾ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಕೆ.ನಾಗವೇಣಿ ಹಾಜರಿದ್ದರು   

ಕೆಜಿಎಫ್‌: ಬೇತಮಂಗಲ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಿ, ಹೊಸದಾಗಿ ಠಾಣೆ ನಿರ್ಮಿಸಲು ಸ್ಥಳ ಗುರುತಿಸುವಂತೆ ಕಂದಾಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ ಸೂಚಿಸಿದರು.

ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

ಬೇತಮಂಗಲದಲ್ಲಿರುವ ಪೊಲೀಸ್ ಠಾಣೆ ಗ್ರಾಮದ ಮಧ್ಯದಲ್ಲಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ. ಈ ಮೊದಲು ಗುರುತಿಸಿದ ಜಾಗದ ಕುರಿತು ಕೆಲವು ತಕರಾರುಗಳಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಪೊಲೀಸ್ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಅವರು ಇಚ್ಛಿಸುವ ಕಡೆ ಠಾಣೆ ನಿರ್ಮಾಣಕ್ಕೆ ಜಾಗ ಗುರುತಿಸಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದೆ.

ADVERTISEMENT

ಸುಂದರಪಾಳ್ಯದಲ್ಲಿರುವ ಪೊಲೀಸ್ ಜಾಗ ಒತ್ತುವರಿ ಬಗ್ಗೆಯೂ ಚರ್ಚೆ ನಡೆಯಿತು. ಸರ್ಕಾರಿ ಗೋಮಾಳ ಜಾಗವನ್ನು ಸರ್ವೆ ಮಾಡಿ ಆ್ಯಪ್‌ನಲ್ಲಿ ದಾಖಲಿಸುವ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು. ನಂತರ ತಹಶೀಲ್ದಾರ್ ಕಚೇರಿಯ ದಾಖಲೆ ಕೊಠಡಿಗೆ ತೆರಳಿ, ಪರಿಶೀಲಿಸಿದರು. ಎಲ್ಲ ದಾಖಲೆಗಳು ಶೀಘ್ರವೇ ಡಿಜಿಟಲೀಕರಣವಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾರ್ಮಿಕ ಇಲಾಖೆ ಕಚೇರಿಗೆ ತೆರಳಿ, ಸರ್ಕಾರದಿಂದ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿ ವೀಕ್ಷಿಸಿದರು.

ನಗರಸಭೆಯಿಂದ ನಿರ್ವಹಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಯಾಚರಣೆ ಕುರಿತು ಸಹ ಮಾಹಿತಿ ಪಡೆದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ತಹಶೀಲ್ದಾರ್ ಕೆ.ನಾಗವೇಣಿ, ಪೌರಾಯುಕ್ತ ಪವನ್‌ಕುಮಾರ್‌, ಇನ್‌ಸ್ಪೆಕ್ಟರ್ ನವೀನ್‌, ಕಂದಾಯ ಇನ್‌ಸ್ಪೆಕ್ಟರ್ ಚಂದ್ರಮೋಹನ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.