ADVERTISEMENT

ಶ್ರೀನಿವಾಸಪುರ: ಸೋರುತಿಹುದು ಶಾಲಾ ಮಾಳಿಗಿ!

ಶ್ರೀನಿವಾಸಪುರ: ಸರ್ಕಾರಕ್ಕೂ ಬೇಡವಾಯಿತೇ ಸರ್ಕಾರಿ ಶಾಲೆಗಳು?

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 6:15 IST
Last Updated 24 ಜೂನ್ 2024, 6:15 IST
ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗಳಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ದುಸ್ಥಿತಿ
ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗಳಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ದುಸ್ಥಿತಿ   

ಶ್ರೀನಿವಾಸಪುರ: ಸುಣ್ಣ ಬಣ್ಣ ಕಾಣದೇ ಶಿಥಿಲಾವಸ್ಥೆಗೆ ತಲುಪಿರುವ ಗೋಡೆಗಳು, ಮುರಿದು ಬಿದ್ದ ಸಜ್ಜೆ, ಅಲ್ಲಲ್ಲಿ ಕಿತ್ತು ಬಂದಿರುವ ಚಾವಣಿ, ಪಾಚಿ ಹಿಡಿದಿರುವ ಮೇಲ್ಭಾಗ. ಕಟ್ಟಡದ ಸಿಮೆಂಟ್‌ ಯಾವಾಗ ಉದುರಿ ಬೀಳುವುದೋ ಎಂಬ ಆತಂಕದಲ್ಲೇ ಪಾಠ ಕೇಳುವ ಮಕ್ಕಳು…

ತಾಲ್ಲೂಕಿನ ಕೆಲ ಸರ್ಕಾರಿ ಶಾಲೆಗಳ ಕಟ್ಟಡದ ಶೋಚನೀಯ ಸ್ಥಿತಿ ಇದು. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರಲ್ಲ ಎನ್ನುತ್ತಾರೆ. ಇತ್ತ ಯಾವುದೇ ಸೌಲಭ್ಯವಿಲ್ಲದೆ ಬಿರುಕು ಬಿಟ್ಟ ಕಟ್ಟಡಗಳು, ಶಿಥಿಲಗೊಂಡಿರುವ ಚಾವಣಿ, ದುರಸ್ತಿಗೆ ಕಾದಿರುವ ಶಾಲಾ ಕಟ್ಟಡಗಳು ಭಯ ತರಿಸಿವೆ. ಇಂಥ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೆಮುಂದೆ ನೋಡುವ ಪರಿಸ್ಥಿತಿ ಇದೆ.

ಶಾಲಾ ಕಟ್ಟಡ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಪದೇಪದೇ ಒತ್ತಾಯಿಸುತ್ತಲೇ ಇದ್ದರೂ ಕೇಳುವವರು ಮಾತ್ರ ಇಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ಮುಂದೆ ಏನೋ ಹೇಗೋ ಎಂಬ ಆತಂಕ ಮನೆಮಾಡಿದೆ. ಶಿಕ್ಷಣದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಕನಿಷ್ಠ ಶಾಲಾ ದುರಸ್ತಿಗೆ ಗಮನ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗಳಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ ಹೇಳತೀರದು. ಈ ಶಾಲೆಯಲ್ಲಿ 44 ಮಕ್ಕಳು ಓದುತ್ತಿದ್ದು, ಮೂವರು ಶಿಕ್ಷಕರಿದ್ದಾರೆ. ಆರು ಕೊಠಡಿಗಳಿದ್ದು, ಎರಡು ಮಾತ್ರ ಸುಸ್ಥಿತಿಯಲ್ಲಿವೆ. ಇನ್ನು ನಾಲ್ಕು ಕೊಠಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ರಾಯಲ್ಪಾಡು ಸೇರಿದಂತೆ ಇನ್ನು ಹಲವೆಡೆ ಶಾಲಾ ಕಟ್ಟಡಗಳು ಮಳೆ ಬಂದರೆ ಸೋರುತ್ತವೆ.

ಡಿಡಿಪಿಐ ಕೃಷ್ಣಮೂರ್ತಿ ಅವರು ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಶಾಲಾ ಕಟ್ಟಡ ಪಟ್ಟಿ ಸಿದ್ಧಪಡಿಸಿ, ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ.

ವಿಧಾನಸಭಾ ಕ್ಷೇತ್ರದ (ಸಾಮಾನ್ಯ) ಅನುದಾನದಡಿ ಶ್ರೀನಿವಾಸಪುರ ತಾಲ್ಲೂಕಿನ 19 ಶಾಲೆಗಳ 22 ಕೊಠಡಿಗಳ ದುರಸ್ತಿಗೆ ₹ 54.22 ಲಕ್ಷ ಅನುದಾನಕ್ಕೆ ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 109 ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗಳು, 198 ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ 25 ಪ್ರೌಢಶಾಲೆಗಳು ಇವೆ. ನೂರಕ್ಕೂ ಅಧಿಕ ಶಾಲೆಗಳ ಕಟ್ಟಡಗಳು ದುರಸ್ತಿಗೆ ಕಾದಿವೆ.

ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿದ್ದಾಗ ಬಂಗವಾದಿ ಗ್ರಾಮದ ಸರ್ಕಾರಿ ಶಾಲೆಯ ಕೆಲ ಮಕ್ಕಳು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ದೂರು ನೀಡಿದ್ದರು.

ಸರ್ಕಾರಿ ಶಾಲಾ ಕಟ್ಟಡದ ಚಾವಣಿಯ ಸಿಮೆಂಟ್‌ ಪ್ಲಾಸ್ಟರ್‌ ಕಿತ್ತುಬಂದಿದ್ದು ಭಯದಲ್ಲೇ ಪಾಠ ಕೇಳುತ್ತಿರುವ ಮಕ್ಕಳು
ಶ್ರೀನಿವಾಸಪುರ ತಾಲ್ಲೂಕಿನ ಪೆಗಳಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.