ಕೋಲಾರ: ‘ರೈತರ ಸಮಸ್ಯೆಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆ ಆಗಿರಲಿದೆ. ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರ ಸಮಸ್ಯೆ ಪರಿಹರಿಸಲು ಗಮನ ಹರಿಸುತ್ತೇನೆ. ಕ್ಷೇತ್ರದಲ್ಲಿ ಹತ್ತು ವರ್ಷಗಳಿಂದ ಸರಿಯಾಗಿ ಕೆಲಸ ನಡೆದಿಲ್ಲ’
–ಶ್ರೀನಿವಾಸಪುರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿರುವ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಮಾತಿದು. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿರುವ ಸಂದರ್ಶನ ಇಲ್ಲಿದೆ.
ಈ ಬಾರಿ ದೊರಕಿರುವುದು ಅನುಕಂಪದ ಗೆಲುವೇ?
ಖಂಡಿತ ಅನುಕಂಪದ ಗೆಲುವು ಅಲ್ಲ. 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಕ್ಷೇತ್ರದ ಜನರ ಸೇವೆ ಮಾಡಿದ್ದೇನೆ. ಅದಕ್ಕೆ ಅವರು ನೀಡಿದ ಪ್ರತಿಫಲವಿದು. ಇಡೀ ಕ್ಷೇತ್ರದ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.
ಹಿಂದಿನ ಶಾಸಕರ ಅವಧಿಯಲ್ಲಿ ಜಾರಿಯಾದ ಯೋಜನೆಗಳು ಪೂರ್ಣಗೊಂಡಿವೆಯೇ?
ಬಡ ಜನತೆಗೆ ಬಹಳಷ್ಟು ಅನ್ಯಾಯವಾಗಿದೆ. ಒಂದೂ ಕೊಳವೆಬಾವಿ ಕೊರೆಯಿಸಿಲ್ಲ. ಸರ್ಕಾರದಿಂದ ಬಂದ ಸಬ್ಸಿಡಿ, ಸಾಲ ವಾಪಸ್ ಹೋಗಿದೆ. ದರಖಾಸ್ತು ಸಭೆ ನಡೆಸಿಲ್ಲ. ಗೋಮಾಳವನ್ನು ಅರಣ್ಯ ಇಲಾಖೆಯ ಜಾಗವೆಂದು ತೋರಿಸಿದ್ದು, ಸಮಸ್ಯೆ ಆಗಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ದೊರೆತಿಲ್ಲ. ಈ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಿ ಸಾಗುವಳಿ ಚೀಟಿ ಕೊಡಿಸುವೆ, ಹಕ್ಕು ಪತ್ರ ವಿತರಿಸುವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆಬಾವಿ ಕೊರೆಯಿಸಿ ಕೊಡುವೆ.
ಕ್ಷೇತ್ರದಲ್ಲಿ ಗುರುತಿಸಿರುವ ಪ್ರಮುಖ ಸಮಸ್ಯೆಗಳಾವು?
ನೀರಿನ ಸಮಸ್ಯೆ ಇದೆ, ರಸ್ತೆಗಳು ಹದಗೆಟ್ಟಿವೆ. ಕೆ.ಸಿ ವ್ಯಾಲಿ ನೀರು ಹರಿಸಲು ಪೈಪ್ ಅಳವಡಿಸಲು ರಸ್ತೆ ಅಗೆದು ಬಿಡಲಾಗಿದೆ. ಅದರಿಂದ ಸಂಚಾರ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರ ಜಮೀನುಗಳ ಪಕ್ಕದಲ್ಲಿ ಪೈಪ್ ಅಳವಡಿಸಲು ನೆಲ ಅಗೆಯಲಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೇ 30ರೊಳಗೆ ಸರಿಪಡಿಸುವಂತೆ ಹೇಳಿದ್ದೇನೆ. ಕೆ.ಸಿ.ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಲು ಸರ್ಕಾರದ ಮೇಲೆ ಒತ್ತಡ ತರುವೆ.
ಕಚೇರಿಗಳಲ್ಲಿ ಕೆಲಸ ತ್ವರಿತಗೊಳಿಸಲು ಕೈಗೊಂಡಿರುವ ಕ್ರಮಗಳೇನು?
ತಾಲ್ಲೂಕು ಆಡಳಿತ ವ್ಯವಸ್ಥೆ ಸರಿಪಡಿಸಬೇಕಿದೆ. ಬಡವರ ಕೆಲಸ ನನೆಗುದಿಗೆ ಬೀಳದಂತೆ ಎಚ್ಚರ ವಹಿಸಲಾಗುವುದು. ಗ್ರಾಮೀಣ ಪ್ರದೇಶದ ರೈತರು ಹಾಗೂ ನಾಗರಿಕರನ್ನು ಸರ್ಕಾರಿ ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿವೆ. ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಪಕ್ಷಾತೀತವಾಗಿ ಫಲಾನುಭವಿಗಳಿಗೆ ತಲುಪಿಸಬೇಕು.
ಮಾವು ಬೆಳೆಗಾರರ ಸಮಸ್ಯೆಯ ಅರಿವು ಇದೆಯೇ?
ಮಾವು ಬೆಳೆಗಾರರ ಸಮಸ್ಯೆಗಳ ಅರಿವು ಇದೆ. ಈ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೂ ತರುತ್ತೇನೆ. ಮಳೆ ಹಾಗೂ ರೋಗಗಳಿಂದ ನಷ್ಟವಾಗಿದೆ. ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ರೈತರ ಯಾವುದೇ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುವೆ.
ಕ್ಷೇತ್ರದ ಜನರು ಇಟ್ಟಿರುವ ಬೇಡಿಕೆಗಳೇನು?
ಲಕ್ಷ್ಮಿಪುರ ಹಾಗೂ ಯಲ್ದೂರು ಗ್ರಾಮಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಬೇಡಿಕೆ ಇದೆ. ಕೆಲವರು ಬರೀ ಮಾತಿನಲ್ಲಿ ಮಾತ್ರ ಕ್ಷೇತ್ರವನ್ನು ‘ಗುಡಿಸಲು ಮುಕ್ತ’ವಾಗಿಸಿದ್ದಾರೆ. ಮನೆಗಳಿಗೆ ಬೇಡಿಕೆ ಇದ್ದು, ವಸತಿ ರಹಿತರೆಲ್ಲರಿಗೂ ಮನೆ ನಿರ್ಮಿಸಿಕೊಡಲು ಪ್ರಯತ್ನಿಸುವೆ. ಕೆಲ ಗ್ರಾಮಗಳ ಜನರು ಕುಡಿಯುವ ನೀರಿನ ಸಮಸ್ಯೆ ಹೇಳಿಕೊಂಡಿದ್ದು, ಆದ್ಯತೆ ನೀಡಿ ಪರಿಹರಿಸುವೆ.
ಕ್ಷೇತ್ರದಲ್ಲಿ ಶಾಂತಿ ಮೂಡಿಸಲು ಕೈಗೊಂಡಿರುವ ಕ್ರಮಗಳೇನು?
ಎಲ್ಲೂ ಜನರು ಗಲಾಟೆ ಮಾಡಿಕೊಳ್ಳಬಾರದು. ಶಾಂತಿ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ್ದೇನೆ. ಈಗಾಗಲೇ ಪ್ರತಿ ಹೋಬಳಿಗೂ ಭೇಟಿ ನೀಡುತ್ತಿದ್ದೇನೆ. ಪೊಲೀಸರ ಜೊತೆಯೂ ಮಾತನಾಡುವೆ.
ಇದು ನಿಮ್ಮ ಕೊನೆಯ ಚುನಾವಣೆಯೇ?
ಹಾಗೆಯೇ ಭಾವಿಸಿಕೊಂಡಿದ್ದೇನೆ. ಚುನಾವಣಾ ಪ್ರಚಾರದ ವೇಳೆಯೂ ಹೇಳಿದ್ದೆ. ಏನಾಗಲಿದೆ ಎಂಬುದನ್ನು ಮುಂದೆ ನೋಡೋಣ. ಮೊದಲು ಜನರ ನಿರೀಕ್ಷೆಗಳಿಗೆ ಸ್ಪಂದಿಸಬೇಕಿದೆ.
ಹಿಂದೆ ಹಾಳಾಗಿರುವುದನ್ನು ಸರಿಪಡಿಸಲು ನನಗೆ ಹೆಚ್ಚು ಸಮಯ ಬೇಕಿದೆ. ಪಕ್ಷಾತೀತವಾಗಿ ಅಭಿವೃದ್ಧಿಗೆ ಒತ್ತು ನೀಡುವೆ. ಕ್ಷೇತ್ರಕ್ಕೆ ವಿಶೇಷ ಅನುದಾನ ತರುವೆಜಿ.ಕೆ.ವೆಂಕಟಶಿವಾರೆಡ್ಡಿ ಶ್ರೀನಿವಾಸಪುರ ಶಾಸಕ ಜೆಡಿಎಸ್
ಶ್ರೀನಿವಾಸಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವೆಂಕಟಶಿವಾರೆಡ್ಡಿ 15 ವರ್ಷಗಳ ಬಳಿಕ ಆಯ್ಕೆಯಾಗಿದ್ದಾರೆ. ಕೊನೆಯ ಬಾರಿ 2008ರಲ್ಲಿ ಗೆದ್ದಿದ್ದರು. 1983ರಿಂದ ಈ ಕ್ಷೇತ್ರದಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಬಿಜೆಪಿಯಿಂದಲೂ ಕಣಕ್ಕಿಳಿದಿದ್ದರು. ಐದನೇ ಬಾರಿ ಶಾಸಕರಾಗಿರುವ ಅವರು ತಮ್ಮ 40 ವರ್ಷಗಳ ಎದುರಾಳಿ ಕಾಂಗ್ರೆಸ್‌ನ ಕೆ.ಆರ್.ರಮೇಶ್ ಕುಮಾರ್ ಅವರನ್ನು ಸೋಲಿಸಿದ್ದಾರೆ. ಇವರಿಬ್ಬರು ಪರಸ್ಪರ 10 ಬಾರಿ ಸೆಣಸಾಡಿದ್ದಾರೆ. ಜಿಲ್ಲೆಯಿಂದ ಈ ಬಾರಿ ಆಯ್ಕೆಯಾಗಿರುವ ಶಾಸಕರಲ್ಲಿ ವೆಂಕಟಶಿವಾರೆಡ್ಡಿ ಹಿರಿಯರು. ಅವರ ವಯಸ್ಸು 76. ಬಿಎಸ್ಸಿ ಎಲ್‌ಎಲ್‌ಬಿ ಓದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.