ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಕಾಲಿಟ್ಟರೆ ಪಾಳು ಬಿದ್ದಿರುವ ಗ್ರಾಮದ ನೆನಪಾಗುತ್ತದೆ. ಮೂಲ ಸೌಕರ್ಯದಿಂದ ವಂಚಿತವಾದ ಊರು ಹೇಗಿರುತ್ತದೆ ಎಂಬುದಕ್ಕೆ ಈ ಹಳ್ಳಿ ಮಾದರಿಯಾಗಿದೆ.
ಸಿಮೆಂಟ್ ಕಾಣದ ರಸ್ತೆಗಳು, ಸ್ವಚ್ಛತೆ ಕಾಣದ ಚರಂಡಿ, ಮುರಿದುಬಿದ್ದ ಮೋರಿ, ಕೊಳೆತು ನಾರುತ್ತಿರುವ ಕುಂಟೆ, ದುರ್ನಾತ ಬೀರುವ ಕಸದ ರಾಶಿ, ಅವೈಜ್ಞಾನಿಕ ನೀರು ಪೂರೈಕೆ ಇದು ತಾಲ್ಲೂಕು ಕೇಂದ್ರಕ್ಕೆ ಕೂಗಳತೆ ದೂರದಲ್ಲಿರುವ ಪನಸಮಾಕನಹಳ್ಳಿಯ ಸ್ಥಿತಿ.
ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿದೆ. ಕೆಲವು ವರ್ಷಗಳ ಹಿಂದೆ ಈ ಗ್ರಾಮವನ್ನು ಶ್ರೀನಿವಾಸಪುರ ಪುರಸಭೆಗೆ ಸೇರಿಸಿಕೊಳ್ಳುವ ಉದ್ದೇಶದಿಂದ ಅನಧಿಕೃತವಾಗಿ ರಸ್ತೆಗಳನ್ನು ಅಗೆದು ಒಳಚರಂಡಿ ನಿರ್ಮಿಸಲಾಯಿತು. ನೀರು ಹರಿಸಲು ಪೈಪ್ ಅಳವಡಿಸಲಾಯಿತು.
ಆದರೆ, ಶ್ರೀನಿವಾಸಪುರ ಸಮೀಪದ ನಾಲ್ಕು ಗ್ರಾಮಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಯಿತು. ಪನಸಮಾಕನಹಳ್ಳಿ ಮಾತ್ರ ಆ ಪ್ರಕ್ರಿಯೆಯಿಂದ ಹೊರಗುಳಿಯಿತು. ಇದರಿಂದ ಗ್ರಾಮದ ರಸ್ತೆಗಳು ಹಾಳಾಗಿದ್ದು, ಬಿಟ್ಟರೆ ಯಾವುದೇ ಪ್ರಯೋಜನವಾಗಲಿಲ್ಲ. ಪಟ್ಟಣದ ನೀರು ಗ್ರಾಮಕ್ಕೆ ಹರಿಯಲಿಲ್ಲ. ಒಳಚರಂಡಿ ಬಳಕೆಯಾಗಲಿಲ್ಲ. ಈಗ ಗ್ರಾಮಸ್ಥರು ಹಳ್ಳ ಬಿದ್ದಿರುವ ರಸ್ತೆಗಳಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚರಂಡಿಗಳಲ್ಲಿ ಬೆಳೆದಿರುವ ಗಿಡಗಂಟಿ ನೀರು ಸರಾಗವಾಗಿ ಹರಿಯದಂತೆ ತಡೆಯುತ್ತಿದೆ. ಕಸ ಕಡ್ಡಿ ತುಂಬಿರುವ ಚರಂಡಿ ಸ್ವಚ್ಛಗೊಳಿಸುವ ವ್ಯವಸ್ಥೆಗೆ ಗ್ರಹಣ ಹಿಡಿದಿದೆ. ಶಿಥಿಲಗೊಂಡಿರುವ ಮೋರಿಗಳು ವಾಹನ ಸಂಚಾರಕ್ಕೆ ಅಡ್ಡಿಯಾಗಿವೆ. ಜನವಸತಿ ಸಮೀಪದ ಪುರಾತನ ಕುಂಟೆಯಲ್ಲಿ ಪಾಚಿ ಬೆಳೆದಿದ್ದು, ಕೊಳೆತು ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಅಭಿವೃದ್ಧಿ ಕೇಂದ್ರದಂತಿರುವ ಈ ಕುಂಟೆ ನಾಗರಿಕರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟುಮಾಡಿದೆ. ಅವೈಜ್ಞಾನಿಕ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಗ್ರಾಮಸ್ಥರಿಗೆ ತಲೆನೋವು ತಂದಿದೆ. ದೂರದ ಮನೆಗಳಿಗೆ ಗಡಿಗೆಗಳಲ್ಲಿ ನೀರು ಹೊತ್ತೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.
ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕನಸಾಗಿಯೇ ಉಳಿದಿದೆ. ಮಳೆಯಾದರೆ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಗ್ರಾಮಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದೇ ಗ್ರಾಮದ ನಾಗರತ್ನಮ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದಾರೆ. ಅದರೂ ಗ್ರಾಮದ ಪರಿಸ್ಥಿತಿ ಬದಲಾಗಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಸೌಲಭ್ಯ ಒದಗಿಸಲಿ
ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕೊಳೆತು ನಾರುತ್ತಿರುವ ಕುಂಟೆ ಹಾಗೂ ಚರಂಡಿ ಸ್ವಚ್ಛಗೊಳಿಸಬೇಕು. ಜನರನ್ನು ಸೊಳ್ಳೆ ಕಾಟ ಮತ್ತು ನೊಣಗಳಿಂದ ಪಾರು ಮಾಡಿ ಗ್ರಾಮಕ್ಕೆ ಪೂರಕವಾದ ಎಲ್ಲಾ ಸೌಲಭ್ಯ ಒದಗಿಸಬೇಕು. ಕಲ್ಪಿಸಬೇಕು. ಮುನಿನಾರಾಯಣ ಗ್ರಾಮಸ್ಥ ಪೂರಕ ಯೋಜನೆ ಜಾರಿಗೊಳಿಸಿ ಪನಸಮಾಕನಹಳ್ಳಿ ತಾಲ್ಲೂಕು ಕೇಂದ್ರದ ಕೂಗಳತೆ ದೂರದಲ್ಲಿದ್ದರೂ ಪ್ರಗತಿ ಕಂಡಿಲ್ಲ. ಅದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಜನ ಪ್ರತಿನಿಧಿಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಬೇಕು. ಗ್ರಾಮದ ಅಭಿವೃದ್ಧಿಗೆ ಪೂರಕ ಯೋಜನೆ ಜಾರಿಗೊಳಿಸಬೇಕು. ನಿಶಾಂತ್ ಕುಮಾರ್ ಗ್ರಾಮಸ್ಥ ಸಮಸ್ಯೆ ಬಗೆಹರಿಸುವಂತೆ ಒತ್ತಡ ಹೇರಲಾಗುವುದು ಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ. ಮೂಲಭೂತ ಸೌಲಭ್ಯಗಳಿಗೆ ಮೊದಲು ಆದ್ಯತೆ ನೀಡಬೇಕಾಗಿದೆ. ಸಮಸ್ಯೆ ನಿವಾರಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಗ್ರಾಮದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಲಾಗಿದೆ. ಶೀಘ್ರವಾಗಿ ಸಮಸ್ಯೆ ನಿವಾರಿಸುವಂತೆ ಒತ್ತಡ ಹೇರಲಾಗುವುದು. ನಾಗರತ್ನಮ್ಮ ಉಪಾಧ್ಯಕ್ಷೆ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.