ADVERTISEMENT

ಕೋಲಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2; ಪ್ರಥಮ ಭಾಷೆಗೆ 244 ಮಂದಿ ಗೈರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 13:01 IST
Last Updated 14 ಜೂನ್ 2024, 13:01 IST
ಕೋಲಾರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೇಂದ್ರದಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಬರೆಯಲು ಸಿದ್ಧವಾಗಿದ್ದ ವಿದ್ಯಾರ್ಥಿಗಳು
ಕೋಲಾರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೇಂದ್ರದಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಬರೆಯಲು ಸಿದ್ಧವಾಗಿದ್ದ ವಿದ್ಯಾರ್ಥಿಗಳು   

ಕೋಲಾರ: ಜಿಲ್ಲೆಯ 17 ಕೇಂದ್ರಗಳಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು, ಮೊದಲ ದಿನವೇ 383 ವಿದ್ಯಾರ್ಥಿಗಳು ಗೈರಾಗಿದ್ದರು.

385 ಪ್ರೌಢಶಾಲೆಗಳ ಒಟ್ಟು 3,328 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಆ ಪೈಕಿ 2,945 ಮಂದಿ ಪರೀಕ್ಷೆ ಬರೆದರು.

‘ಮೊದಲ ದಿನ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಯಶಸ್ವಿಯಾಗಿ ಪರೀಕ್ಷೆ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1ರಲ್ಲಿ ಅನುತ್ತೀರ್ಣರಾದವರು, ಅಂಕಗಳ ಹೆಚ್ಚಳಕ್ಕೆ ಇಚ್ಛಿಸಿರುವವರು ಈಗ ಪರೀಕ್ಷೆ ತೆಗೆದುಕೊಂಡಿದ್ದಾರೆ’ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.

ADVERTISEMENT

ಬಂಗಾರಪೇಟೆ ತಾಲ್ಲೂಕಿನ 3 ಕೇಂದ್ರಗಳಲ್ಲಿ ಪ್ರಥಮ ಭಾಷೆಗೆ 672 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 85 ಮಂದಿ ಗೈರಾಗಿದ್ದರು. ಕೆಜಿಎಫ್ ತಾಲ್ಲೂಕಿನ 3 ಕೇಂದ್ರಗಳಲ್ಲಿ 767 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 57 ಮಂದಿ ಬಂದಿರಲಿಲ್ಲ. ಕೋಲಾರದ 5 ಕೇಂದ್ರಗಳಲ್ಲಿ 682 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, 79 ಮಂದಿ ಗೈರಾಗಿದ್ದರು. ಮಾಲೂರಿನ 2 ಕೇಂದ್ರಗಳಲ್ಲಿ 515 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, 69 ಮಂದಿ ಬಂದಿರಲಿಲ್ಲ. ಮುಳಬಾಗಿಲಿನ 3 ಕೇಂದ್ರಗಳಲ್ಲಿ 498 ಮಂದಿ ನೋಂದಾಯಿಸಿದ್ದು, 70 ಮಂದಿ ಗೈರಾಗಿದ್ದರು. ಶ್ರೀನಿವಾಸಪುರ ತಾಲ್ಲೂಕಿನ 1 ಕೇಂದ್ರದಲ್ಲಿ 174 ಮಂದಿ ನೋಂದಾಯಿಸಿದ್ದು, 23 ಮಂದಿ ಗೈರಾಗಿದ್ದರು.

ಎಲ್ಲಾ ಕೊಠಡಿಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆಗೆ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳು ಅಲ್ಲದೇ, ಮೇಲಧಿಕಾರಿಗಳು ಕಚೇರಿಗಳಿಂದಲೇ ಪರೀಕ್ಷೆ ಮೇಲೆ ನಿಗಾ ಇಟ್ಟಿದ್ದರು.

ಶಾಲಾ ಶಿಕ್ಷಣ ಇಲಾಖೆ ಅಭಿವೃದ್ದಿ ಉಪನಿರ್ದೇಶಕ ಹಾಗೂ ಡಯಟ್ ಪ್ರಾಂಶುಪಾಲ ಕೆ.ಎನ್. ಜಯಣ್ಣ ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಬೆಳಗ್ಗೆ 9.50ರಿಂದಲೇ ವಿದ್ಯಾರ್ಥಿಗಳಿಗೆ ಕೇಂದ್ರಕ್ಕೆ ಪ್ರವೇಶ ನೀಡಲಾಗಿದೆ’ ಎಂದರು.

ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ಸಗೀರಾ ಅಂಜುಂ, ಡಿವೈಪಿಸಿಗಳಾದ ಚಂದ್ರಕಲಾ, ಮಂಜುಳಾ, ಎವೈಪಿಸಿ ಮೋಹನ್‍ಬಾಬು, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವದನ, ಶಂಕರೇಗೌಡ, ಕೃಷ್ಣಪ್ಪ, ವೆಂಕಟೇಶಬಾಬು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲಾ ಕೇಂದ್ರಗಳಲ್ಲೂ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಿದ್ದು, ಎಲ್ಲೂ ಸಮಸ್ಯೆಗಳು ಕಂಡು ಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.