ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಪೊರಕೆ ಕಡ್ಡಿ ಸಂಗ್ರಹ ಕಾರ್ಯ ಭರದಿಂದ ನಡೆಯುತ್ತಿದೆ. ರೈತ ಮಹಿಳೆಯರು ಕಾಡು, ಕಟವೆ ಸುತ್ತಿ ಮನೆಗೆ ಅಗತ್ಯವಾದ ಪೊರಕೆ ಕಡ್ಡಿ ಸಂಗ್ರಹಿಸಿ ಹೊತ್ತೊಯ್ಯುತ್ತಿದ್ದಾರೆ.
ಈ ಹಿಂದೆ ಮಳೆ ಕೊರತೆಯಿಂದ ಬಯಲಿನ ಮೇಲೆ ಪೊರಕೆ ಕಡ್ಡಿ ಬೆಳವಣಿಗೆ ಕುಂಠಿತಗೊಂಡಿತ್ತು. ಆದರೂ, ಸಿಕ್ಕಿದ ಕಡ್ಡಿಯನ್ನು ಕೊಯ್ದು ತಂದು ಪೊರಕೆ ಕಟ್ಟಿ ಬಳಸುತ್ತಿದ್ದರು. ಈ ಬಾರಿ ಸುರಿದ ಭಾರಿ ಮಳೆಗೆ ಎಲ್ಲೆಲ್ಲೂ ಪೊರಕೆ ಗುಮ್ಮಿಗಳು ಚಿಗುರೊಡೆದು ಬೆಳೆದು ನಿಂತಿವೆ. ಉತ್ತಮ ಗುಣಮಟ್ಟದ ಕಡ್ಡಿ ಸಿಗುತ್ತಿದೆ.
ಈಗ ಸುಗ್ಗಿ ಮುಗಿದಿದೆ. ರೈತ ಮಹಿಳೆಯರು ಬೆಳಿಗ್ಗೆ ಬಯಲಿನ ಮೇಲೆ ಹಸಿ ಹುಲ್ಲು ಒರೆದು ತಂದು, ಊಟ ಮಾಡಿದ ಬಳಿಕ ಗುಂಪು ಗುಂಪಾಗಿ ಪೊರಕೆ ಕಡ್ಡಿ ಸಂಗ್ರಹಕ್ಕೆ ಹೋಗುತ್ತಾರೆ. ಕೆಲವರು ಪುರುಷರ ನೆರವು ಪಡೆದು ಬೈಕ್ ಮೇಲೆ ದೂರದ ಪ್ರದೇಶಗಳಿಗೆ ಹೋಗಿ ಕಡ್ಡಿ ಕೊಯ್ದು ತರುತ್ತಿದ್ದಾರೆ. ಹಾಗೆ ತಂದು ಹಸಿ ಕಡ್ಡಿಯನ್ನು ಬಿಸಿಲಿಗೆ ಹಾಕಿ ಒಣಗಿಸಬೇಕು. ನಂತರ ತೆನೆ ಯಿಂದ ಊಗು ಉದುರಿಸಿ ಕಡ್ಡಿಯ ಎತ್ತ ರಕ್ಕೆ ಅನುಗುಣವಾಗಿ ಕಟ್ಟು ಕಟ್ಟುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಊಗು ಪೊರಕೆ ಬಳಕೆಯೇ ಇದೆ. ಹಾಗಾಗಿ ಪ್ರತಿವರ್ಷ ಬೇಡಿಕೆ ಇರುತ್ತದೆ. ಮನೆ, ಕೊಟ್ಟಿಗೆ, ಹೊಂಗೆ ಹೂ, ಸುರುಗು ಗುಡಿಸಲು ಈ ಪೊರಕೆ ಬಳಸಲಾಗುತ್ತಿದೆ. ಗ್ರಾಮೀಣ ಮಹಿಳೆಯರು ಪೊರಕೆಗೆ ಪ್ರಾಧಾನ್ಯ ನೀಡುತ್ತಾರೆ.
ಸ್ವಚ್ಛತೆ ದೃಷ್ಟಿಯಲ್ಲಿ ಪೊರಕೆಯಲ್ಲಿ ದೇವರನ್ನು ಕಾಣುತ್ತಾರೆ. ಮಂಗಳವಾರ, ಶುಕ್ರವಾರ ಹೊಸ ಪೊರಕೆ ತೆಗೆಯುವುದಿಲ್ಲ. ಪೊರಕೆ ಅಗತ್ಯ ಎನಿಸಿದಾಗ ಈ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ಹೊರೆಯಿಂದ ಬಿಡಿ ಪೊರಕೆ ತೆಗೆದುಕೊಳ್ಳುವುದು ರೂಢಿ.
ಬೇರೆ ಬೇರೆ ತೆನೆ ಪೊರಕೆಗಳ ಭರಾಟೆ ನಡುವೆಯೂ ಊಗು ಪೊರಕೆ ಮಹತ್ವ ಕಳೆದುಕೊಂಡಿಲ್ಲ. ಹಿಡಿ ಗಾತ್ರದ ಪೊರಕೆ ₹ 25 ರಿಂದ ₹ 30 ರಂತೆ ಮಾರಾಟವಾಗುತ್ತಿದೆ. ರೈತರು ಮನೆ ಬಳಕೆಗೆ ಬೇಕಾಗುವಷ್ಟು ಪೊರಕೆ ಉಳಿಸಿಕೊಂಡು, ಉಳಿದ ಪೊರಕೆಗಳನ್ನು ಮಾರಾಟ ಮಾಡಿ ನಾಲ್ಕು ಕಾಸು ಸಂಪಾದಿಸಿಕೊಳ್ಳುತ್ತಾರೆ. ಕೆಲವರು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ಪೊರಕೆ ಖರೀದಿಸಿ ದೊಡ್ಡ ನಗರಗಳ ಮಾರುಕಟ್ಟೆಗೆ ಕಳುಹಿಸಿಕೊಡುತ್ತಾರೆ.
‘ಹಿಂದೆ ವಿಶಾಲವಾದ ಮಾವಿನ ತೋಟಗಳಲ್ಲಿ ಪೊರಕೆ ಕಡ್ಡಿ ಯಥೇಚ್ಛವಾಗಿ ಸಿಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಮಾವಿನ ತೋಟಗಳಲ್ಲಿ ಟ್ರ್ಯಾಕ್ಟರ್ ಉಳುಮೆ ಪ್ರಾರಂಭವಾದ ಮೇಲೆ ಪೊರಕೆ ಗುಮ್ಮಿಗಳು ನಾಶವಾದವು. ಈಗ ಕಡ್ಡಿಗಾಗಿ ಕಾಡುಮೇಡು ಸುತ್ತಬೇಕಾಗಿದೆ. ಸಂಗ್ರಹ ಕಷ್ಟದ ಕಸುಬಾಗಿ ಪರಿಣಮಿಸಿದೆ’ ಎಂದು ಪನಸಮಾಕನಹಳ್ಳಿಯ ವೆಂಕಟಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.