ADVERTISEMENT

ರಾಜ್ಯದ ದಲಿತ ಚಳವಳಿ ದೇಶಕ್ಕೆ ಮಾದರಿ

ನೆನಪಿನ ಬುತ್ತಿ ತೆರೆದಿಟ್ಟ ಕವಿ ಸಿದ್ದಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 15:34 IST
Last Updated 17 ಆಗಸ್ಟ್ 2019, 15:34 IST
ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಸಿದ್ದಲಿಂಗಯ್ಯ ಮಾತನಾಡಿದರು.
ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಸಿದ್ದಲಿಂಗಯ್ಯ ಮಾತನಾಡಿದರು.   

ಕೋಲಾರ: ‘ದಲಿತ ಸಾಹಿತಿಗಳಿಗೆ ಈಗ ಸನ್ಮಾನ ಸಿಗುತ್ತಿವೆ. ಆದರೆ, ಹಿಂದೆ ಪ್ರಾಣ ಒತ್ತೆಯಿಟ್ಟು ದಲಿತ ಹೋರಾಟ ಮಾಡಬೇಕಾದ ಕಾಲವಿತ್ತು’ ಎಂದು ಕವಿ ಸಿದ್ದಲಿಂಗಯ್ಯ ದಲಿತ ಚಳವಳಿಯ ನೆನಪಿನ ಬುತ್ತಿ ತೆರೆದಿಟ್ಟರು.

ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ದಶಕಗಳ ಹಿಂದಿನ ಹೋರಾಟದಲ್ಲಿ ಕೋಲಾರ ಜಿಲ್ಲೆಯಲ್ಲೇ ತಾವು ಹೇಗೆಲ್ಲಾ ಗಲಾಟೆ ಮತ್ತು ಮೂರ್ನಾಲ್ಕು ಬಾರಿ ಕೊಲೆ ಪ್ರಯತ್ನ ಎದುರಿಸಿದ್ದನ್ನು ಸ್ಮರಿಸಿಕೊಂಡರು.

ಸಮ್ಮೇಳನ ಆರಂಭವಾಗುವ ಹೊತ್ತಿಗೆ ತುಂತುರು ಮಳೆ ಬೀಳುತ್ತಿರುವುದನ್ನು ಗಮನಿಸಿ, ‘ಸಮ್ಮೇಳನದಲ್ಲಿ ದಲಿತ ಸಾಹಿತ್ಯದ ಸುರಿಮಳೆ ಆಗುತ್ತಿದೆ’ ಎಂದು ಸಂದರ್ಭೋಚಿತವಾಗಿ ನಗೆಚಟಾಕಿ ಸಿಡಿಸಿದರು.

ADVERTISEMENT

‘ದಲಿತ ಸಾಹಿತ್ಯ ಸಮ್ಮೇಳನವು ಚಾರಿತ್ರಿಕ ದಾಖಲೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಕಾರಣಕರ್ತರು. ಅವರ ಪ್ರಯತ್ನದಿಂದಲೇ ಅಂಬೇಡ್ಕರ್‌ರ ಸಾಹಿತ್ಯ 22 ಸಂಪುಟಗಳಲ್ಲಿ ಏಕಕಾಲಕ್ಕೆ ಪ್ರಕಟಗೊಂಡು ಇಂದಿಗೂ ಕಡಿಮೆ ಬೆಲೆಯಲ್ಲಿ ಓದುಗರಿಗೆ ಲಭ್ಯವಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದಲಿತ ಚಳವಳಿಗೆ ಬೂಸಾ ಚಳವಳಿ ಮೂಲವಾದರೆ, ದಲಿತ ಸಾಹಿತ್ಯಕ್ಕೆ ದಲಿತ ಚಳವಳಿ ಕಾರಣವಾಯಿತು. ಬೂಸಾ ಚಳವಳಿ ಸಂದರ್ಭದಲ್ಲಿ ಭದ್ರಾವತಿಯಲ್ಲಿ ಬಿ.ಕೃಷ್ಣಪ್ಪರ ನೇತೃತ್ವದಲ್ಲಿ ದಲಿತ ಲೇಖಕ ಕಲಾವಿದರ ಸಂಘಟನೆ ಆರಂಭವಾಯಿತು. ಬೂಸಾ ಚಳವಳಿಗೆ ಕಾರಣರಾಗಿದ್ದ ಬಿ.ಬಸವಲಿಂಗಪ್ಪ ಅವರೇ ಈ ಸಂಘಟನೆಗೆ ಚಾಲನೆ ನೀಡಿದ್ದರು. ಮುಂದೆ ದಲೇಕ ಸಂಘಟನೆ ದಲಿತ ಚಳವಳಿಯಾಗಿ ಮಾರ್ಪಟ್ಟಿತ್ತು’ ಎಂದು ವಿವರಿಸಿದರು.

ಸ್ಪಷ್ಟ ವ್ಯತ್ಯಾಸವಿದೆ: ‘ಮಹಾರಾಷ್ಟ್ರ ಮತ್ತು ದೇಶದ ಇತರೆಡೆ ಆರಂಭವಾಗಿರುವ ದಲಿತ ಚಳವಳಿಗೂ ಕರ್ನಾಟಕದಲ್ಲಿ ಆರಂಭವಾದ ದಲಿತ ಚಳವಳಿಗೂ ಸ್ಪಷ್ಟವಾದ ವ್ಯತ್ಯಾಸವಿದೆ. ಇತರೆಡೆ ದಲಿತ ಚಳವಳಿಯು ದಲಿತರನ್ನಷ್ಟೇ ಒಳಗೊಂಡರೆ, ಕರ್ನಾಟಕದಲ್ಲಿ ಪ್ರಗತಿಪರರೆಲ್ಲರನ್ನು ಒಳಗೊಂಡು ದಲಿತ ಚಳವಳಿಯಾಗಿ ರೂಪುಗೊಂಡಿತು. ಈ ಕಾರಣಕ್ಕಾಗಿ ಕರ್ನಾಟಕದ ದಲಿತ ಚಳವಳಿಯು ಜಾತಿವಾದಿ ಚಳವಳಿಯಾಗಿರಲಿಲ್ಲ. ಹೀಗಾಗಿ ಈ ಚಳವಳಿ ಇಡೀ ದೇಶಕ್ಕೆ ಮಾದರಿಯಾಗಿತ್ತು’ ಎಂದರು.

‘ದಲಿತರ ಮುಖದಲ್ಲಿ ನಗುವಿದ್ದರೂ ಅಂತರಾಳದಲ್ಲಿ ಅಪಾರ ನೋವಿದೆ. ಈ ವೇದನೆ ಕಟ್ಟಿಕೊಡುವುದೇ ದಲಿತ ಸಾಹಿತ್ಯವಾಗಿದ್ದು, ಇದೀಗ ದಲಿತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸ್ವಾಗತಾರ್ಹ. ದಲಿತರಿಗೆ ಸ್ವಾಭಿಮಾನ ಬರಬೇಕು. ಇತರರು ಗೌರವ ಕೊಡುವಂತೆ ದಲಿತರು ಬದುಕಬೇಕು. ಇದಕ್ಕೆ ಈ ಸಮ್ಮೇಳನ ಸ್ಫೂರ್ತಿಯಾಗಲಿ. ದಲಿತ ಚಳವಳಿ ದುರ್ಬಲವಾಗಿದ್ದು, ಹಂಚಿ ಹೋಗಿರುವ ಸಂಘಟನೆಗಳು ಒಂದೇ ವೇದಿಕೆಗೆ ಬರಬೇಕು’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.