ADVERTISEMENT

ಮುಳಬಾಗಿಲು | ಸಂಚಾರ ದಟ್ಟಣೆ ನಿವಾರಣೆಗೆ ಕಠಿಣ ಕ್ರಮ: ನಿಯಮ ಉಲ್ಲಂಘಿಸಿದರೆ ದಂಡ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 6:07 IST
Last Updated 19 ಸೆಪ್ಟೆಂಬರ್ 2024, 6:07 IST
ಮುಳಬಾಗಿಲು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಟ್ರಾಫಿಕ್ ಸಿಗ್ನಲ್‌ ಅಳವಡಿಸಿರುವುದು
ಮುಳಬಾಗಿಲು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಟ್ರಾಫಿಕ್ ಸಿಗ್ನಲ್‌ ಅಳವಡಿಸಿರುವುದು   

ಮುಳಬಾಗಿಲು: ನಗರದ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ರಸ್ತೆಗೆ ಅಡ್ಡಲಾಗಿ ವಾಹನಗಳ ಓಡಾಟ, ರಸ್ತೆಗೆ ಅಡ್ಡಲಾಗಿ ಅಂಗಡಿಗಳನ್ನು ಇಟ್ಟುಕೊಳ್ಳುವುದು ಸೇರಿದಂತೆ ಇನ್ನಿತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಪೊಲೀಸರ ಈ ನಿಲುವಿಗೆ ನಗರಸಭೆಯೂ ಕೈಜೋಡಿಸಲು ಮುಂದಾಗಿದೆ. 

ವಾಹನ ದಟ್ಟಣೆ, ವಾಹನಗಳ ನಿಲುಗಡೆಗೆ ವ್ಯವಸ್ಥೆ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಿವಾರಿಸಬೇಕು ಎಂಬ ಶಾಸಕ ಸಮೃದ್ಧಿ ಮಂಜುನಾಥ್ ಸೂಚನೆ ನೀಡಿದ್ದಾರೆ. ಹೀಗಾಗಿ, ಸಂಚಾರ ದಟ್ಟಣೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಿವಾರಿಸಲು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಜಗದೀಶ್ ಮತ್ತು ಡಿವೈಎಸ್‌ಪಿ ಡಿ.ಸಿ. ನಂದಕುಮಾರ್ ತಂಡಗಳನ್ನು ರಚಿಸಿದ್ದಾರೆ. 

ಮೊದಲಿಗೆ ನಗರದ ಕೆಇಬಿ ವೃತ್ತ, ಟಿಎಪಿಸಿಎಂಎಸ್ ಮುಂಭಾಗ, ಬಜಾರು ರಸ್ತೆ, ಮುತ್ಯಾಲಪೇಟೆ ವೃತ್ತ, ಎಂ.ಸಿ.ರಸ್ತೆಗಳಲ್ಲಿ ಇದೇ ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಸಂಚಾರ ನಿಯಮಗಳ ಪಾಲನೆ ಕುರಿತು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಜಾಗೃತಿ ಮೂಡಿಸಿದ್ದಾರೆ. 

ADVERTISEMENT

‘ರಸ್ತೆಯ ಮಧ್ಯೆ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುವಂತೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿರುವ ಬೈಕ್‌ಗಳನ್ನು ಟೋಯಿಂಗ್ ವಾಹನಗಳಲ್ಲಿ (ಟೆಂಪೊಗಳಲ್ಲಿ ತುಂಬಿಸಿಕೊಂಡು) ಪೊಲೀಸರು ಠಾಣೆಗೆ ಕೊಂಡೊಯ್ಯುತ್ತಿದ್ದಾರೆ. ವಾಹನಗಳನ್ನು ಬಿಡಿಸಿಕೊಳ್ಳಲು ಬರುವ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕುವುದಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು. ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಬಾರದು ಎಂದು ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ’ ಎಂದು ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರಾಜಣ್ಣ ತಿಳಿಸಿದರು. 

ನಗರದ ಕೆಲವು ಆಯ್ದ ಸ್ಥಳಗಳು, ಅಂಗಡಿ ಮತ್ತು ಹೋಟೆಲ್‌ಗಳ ಮುಂಭಾಗದ ಇಂತಿಷ್ಟೇ ಜಾಗದಲ್ಲಿ ದ್ವಿಚಕ್ರಮ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ವಿವಿಧ ಕೆಲಸ–ಕಾರ್ಯಗಳಿಗಾಗಿ ಬರುತ್ತಿದ್ದ ಬೈಕ್ ಸವಾರರು ರಸ್ತೆಯ ಬದಿಗಳಲ್ಲಿ ಸುಸಜ್ಜಿತ ರೀತಿಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುತ್ತದ್ದಾರೆ ಎಂದು ತಿಳಿಸಿದರು. 

ಸಾಂಕೇತಿಕ ಸಿಗ್ನಲ್‌ಗಳು: ಈಗಾಗಲೇ ನಗರದಲ್ಲಿ ಸಾಂಕೇತಿಕವಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಎಚ್ಚರಿಕೆಯಾಗಿ ಅಂಟಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಸಂಚಾರ ನಿಯಮಗಳು ಜಾರಿಗೆ ಬರಲಿದ್ದು, ಸಂಚಾರ ಮತ್ತಷ್ಟು ಸುಗಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮುಳಬಾಗಿಲು ನಗರದ ರಸ್ತೆಯೊಂದರಲ್ಲಿ ವ್ಯವಸ್ಥಿತವಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದು 

ಪುರಸಭೆಯಾಗಿದ್ದ ಮುಳಬಾಗಿಲು

ಮೂರು ವರ್ಷಗಳ ಹಿಂದೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಆದರೆ ನಗರದಲ್ಲಿ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನಗಳ ಸಂಚಾರ, ಪಾದಚಾರಿ ಮಾರ್ಗಗಳನ್ನು ಕೆಲವು ವ್ಯಾಪಾರಿಗಳು ಆಕ್ರಮಿಸಿಕೊಂಡಿರುವುದು, ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವುದು ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿತ್ತು. ಇದರಿಂದ ವಾಹನಗಳು ಮತ್ತು ಜನರ ಓಡಾಟವೇ ದುಸ್ತರ ಎಂಬ ಸ್ಥಿತಿ ಇತ್ತು. ಈ ಸಂಬಂಧ ಅಧಿಕಾರಿಗಳು ಜನರಿಗೆ ತಿಳಿಹೇಳಿದರು. ಜೊತೆಗೆ ನಾನಾ ಯೋಜನೆಗಳನ್ನು ಹಮ್ಮಿಕೊಂಡು ಸಮಸ್ಯೆ ಇತ್ಯರ್ಥಪಡಿಸಲು ಯತ್ನಿಸಿದರು.

ನಗರದಲ್ಲಿಲ್ಲ ಸಾರ್ವಜನಿಕ ಶೌಚಾಲಯ:  ನಗರದಲ್ಲಿ ಶೌಚಾಲಯ ಸಮಸ್ಯೆಗಳನ್ನೂ ಪರಿಹರಿಸಬೇಕಾಗಿದೆ: ನಗರದಲ್ಲಿ ಟ್ರಾಫಿಕ್, ಜನ ದಟ್ಟಣೆ, ಅಂಗಡಿಗಳ ತೆರವು ಮಾಡುತ್ತಿರುವಂತೆ, ಎಲ್ಲೆಂದರಲ್ಲಿ ಮೂತ್ರಾಲಯ ಮಾಡುವುದನ್ನು ನಿಲ್ಲಿಸಿ ಸ್ವಚ್ಚತೆ ಕಾಪಾಡಲು ನಗರಸಭೆಯಿಂದ ಮುಚ್ಚಲಾಗಿರುವ ಎಲ್ಲಾ ಸಾರ್ವಜನಿಕ ಶೌಚಾಲಯಗಳ ಕಟ್ಟಡಗಳನ್ನೂ ತೆರೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ನಗರದಲ್ಲಿ ಸುಮಾರು ದಿನಗಳಿಂದ ವಾಹನಗಳ ದಟ್ಟಣೆ, ರಸ್ತೆ ಬದಿಗಳಲ್ಲಿ ಅಂಗಡಿ ಮುಂಗಟ್ಟುಗಳು ಮತ್ತಿತರ ಸಮಸ್ಯೆಗಳಿಂದ ನಗರದಲ್ಲಿ ಓಡಾಡಲು ಆಗದಂತಹ ಸ್ಥಿತಿ ಇತ್ತು. ಇದನ್ನು ಮನಗಂಡು ಪೊಲೀಸ್, ನಗರಸಭೆ ಹಾಗೂ ಜನ ಪ್ರತಿನಿಧಿಗಳ ನಿರ್ಧಾರದಿಂದ ಒಂದೊಂದು ಸಮಸ್ಯೆಗಳು ನಿಯಂತ್ರಣಕ್ಕೆ ಬರಲಿವೆ ಎಂದು ಪೊಲೀಸ್ ಹಾಗೂ ನಗರಸಭೆಯ ಅಧಿಕಾರಿಗಳು ತಿಳಿಸಿದರು.

ನಗರದಲ್ಲಿ ಏಕಾಏಕಿ ರಸ್ತೆಗಳ ಪಕ್ಕದ ಅಂಗಡಿಗಳನ್ನು ತೆರವು ಮಾಡಿತ್ತಿರುವುದರಿಂದ ಸಂಸಾರಗಳು ಇಕ್ಕಟ್ಟಿಗೆ ಸಿಲುಕಲಿವೆ.ಹೀಗಾಗಿ ರಸ್ತೆಗಳ ಬದಿಯ ಅಂಗಡಿಗಳಿಗೆ ಅಧಿಕಾರಿಗಳು ಸೂಕ್ತವಾದ ಸ್ಥಳಾವಕಾಶ ಒದಗಿಸಿದರೆ ನಮ್ಮ ಬದುಕು ನಡೆಯಲಿದೆ ಎಂದು ಹೆಸರು ಹೇಳಲು ಇಚ್ಚಿಸದ ಸಣ್ಣ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

ರಸ್ತೆ ಬದಿಯ ಅಂಗಡಿಗಳ ತೆರವು
ಎಂ.ಸಿ.ರಸ್ತೆ ಬಜಾರು ಬೀದಿ ಕೆಇಬಿ ವೃತ್ತ ಬಸ್ ನಿಲ್ದಾಣದ ರಸ್ತೆ ಟಿಎಪಿಸಿಎಂಎಸ್ ರಸ್ತೆಗಳ ಬದಿಗಳಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಮತ್ತು ವಹಿವಾಟುಗಳನ್ನು ನಡೆಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು ಮತ್ತು ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿತ್ತು.  ಈ ಸಮಸ್ಯೆಯನ್ನು ತಪ್ಪಿಸಲು ಪಾದಚಾರಿ ಮಾರ್ಗಗಳಲ್ಲಿ ಇಟ್ಟುಕೊಳ್ಳಲಾಗಿದ್ದ ತರಕಾರಿ ಹಣ್ಣು ವೀಳ್ಯದೆಲೆ ಹೂವು ಸುಣ್ಣದ ಕಲ್ಲು ಸೇರಿದಂತೆ ಇನ್ನಿತರ ವ್ಯಾಪಾರಿಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಇದರಿಂದಾಗಿ ರಸ್ತೆಗಳು ವಿಶಾಲವಾದಂತೆ ಕಂಡುಬರುತ್ತಿದೆ. ಆದರೆ ಅಂಗಡಿಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಸಣ್ಣಪುಟ್ಟ ವ್ಯಾಪಾರಿಗಳು ಚಿಂತಿತರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.