ADVERTISEMENT

ದೇಗುಲಕ್ಕೆ ಮಕ್ಕಳಿಂದ ಹಣ ಸಂಗ್ರಹ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿರುವ ದೇವಸ್ಥಾನ
ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿರುವ ದೇವಸ್ಥಾನ   

ಕೋಲಾರ: ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೃತ್ಯಗಳು ಬಗೆದಷ್ಟು ಹೊರಬರುತ್ತಿದ್ದು, ಆವರಣದಲ್ಲಿ ದೇಗುಲ ನಿರ್ಮಿಸಲು ಮಕ್ಕಳಿಂದ ಪ್ರಾಂಶುಪಾಲರು ಹಾಗೂ ಶಿಕ್ಷಕರು ಬಲವಂತವಾಗಿ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ.

ವಿದ್ಯಾರ್ಥಿಗಳನ್ನು ಬೆದರಿಸಿ ಪ್ರತಿ ವಿದ್ಯಾರ್ಥಿಯಿಂದ ₹500 ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಮಾಲೂರು ತಾಲ್ಲೂಕಿನ ಸಹಾಯಕ ನಿರ್ದೇಶಕ ವಿ.ಶಿವಕುಮಾರ್‌ ನೀಡಿದ ದೂರಿನ ಮೇಲೆ ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲೂ ಈ ಅಂಶ ಇದೆ.

ವಸತಿ ನಿಲಯದಲ್ಲಿ 6ರಿಂದ 10ನೇ ತರಗತಿಯ ಸುಮಾರು 240 ಮಕ್ಕಳು ಇದ್ದಾರೆ. ಬಹುತೇಕ ಮಕ್ಕಳಿಂದ ಹಣ ಸಂಗ್ರಹಿಸಲಾಗಿದೆ. ಕೆಲವರು ಹಣ ನೀಡಿಲ್ಲ. ಈಗಾಗಲೇ ದೇವಸ್ಥಾನ ಹಾಗೂ ಪೋಷಕರು ತಂಗಲು ಶೆಡ್‌ ನಿರ್ಮಿಸಲಾಗಿದೆ.

ADVERTISEMENT

‘ದೇಗುಲ ನಿರ್ಮಾಣಕ್ಕೆ ಹಣ ನೀಡುವಂತೆ ಪ್ರಾರ್ಥನೆ ವೇಳೆ ಮಕ್ಕಳಿಗೆ ಸೂಚಿಸಿದ್ದಾರೆ. ಆ ಸೂಚನೆಯಂತೆ ಶಿಕ್ಷಕರು ಹಣ ವಸೂಲಿ ಮಾಡಿದ್ದರು. ದೇಗುಲ ನಿರ್ಮಿಸಿದ್ದು, ಆದರೆ, ಒಳಗೆ ದೇವರನ್ನು ಇಟ್ಟಿಲ್ಲ. ಬಾಕಿ ಹಣ ಶಿಕ್ಷಕರೊಬ್ಬರ ಬಳಿ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದೇಗುಲ ಹಾಗೂ ಪೋಷಕರು ತಂಗುವ ಶೆಡ್‌ ನಿರ್ಮಾಣಕ್ಕೆ ಹಣ ನೀಡಿರುವುದಾಗಿ ಪೋಷಕರೊಬ್ಬರು ಹೇಳಿಕೊಂಡಿರುವ ವಿಡಿಯೊ ಕೂಡ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮಕ್ಕಳಿಂದ ಮಲ ಗುಂಡಿ ಸ್ವಚ್ಛಗೊಳಿಸಿರುವ ಕೃತ್ಯದ ಸಂಬಂಧ ಈಗಾಗಲೇ ಪ್ರಾಂಶುಪಾಲೆ ಭಾರತಮ್ಮ, ಪ್ರಭಾರ ವಾರ್ಡನ್‌ ಮಂಜುನಾಥ್‌, ಅತಿಥಿ ಶಿಕ್ಷಕ ಅಭಿಷೇಕ್‌, ಸಹ ಶಿಕ್ಷಕ ಮುನಿಯಪ್ಪ, ಸ್ವಚ್ಛತಾ ಸಿಬ್ಬಂದಿ ಕಲಾವತಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ಅನುಮತಿ ಇಲ್ಲದೇ ಮಕ್ಕಳ ವಿಡಿಯೋ ತೆಗೆದು ಹಂಚಿಕೊಂಡಿರುವುದಕ್ಕೆ ಮುನಿಯಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಭಾರತಮ್ಮ ಹಾಗೂ ಮುನಿಯಪ್ಪ ಅವರನ್ನು ಬಂಧಿಸಿದ್ದು, ಇನ್ನುಳಿದವರು ತಲೆಮರೆಸಿಕೊಂಡಿದ್ದಾರೆ.

ಮಾಲೂರು ತಾಲ್ಲೂಕಿನ ಯಲುವಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ಪ್ರತಿಭಟನನಿರತ ಮಕ್ಕಳನ್ನು ಸಚಿವ ವಿ.ನಾರಾಯಣಸ್ವಾಮಿ ಸಮಾಧಾನಪಡಿಸಿದರು
ವಸತಿ ಶಾಲೆಯ ದಾಖಲೆಗಳನ್ನು ಭಾನುವಾರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಸಂಸದ ಎಸ್‌.ಮುನಿಸ್ವಾಮಿ ಪರಿಶೀಲನೆ ನಡೆಸಿದರು

ಸಮಸ್ಯೆ ಆಲಿಸದ ಕೇಂದ್ರ ಸಚಿವ: ಮಕ್ಕಳ ಆಕ್ರೋಶ

ವಸತಿ ಶಾಲೆಗೆ ಭೇಟಿ ನೀಡಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಮ್ಮ ಮನವಿ ಆಲಿಸದಿರುವುದನ್ನು ಖಂಡಿಸಿ ಮಕ್ಕಳು ಪ್ರತಿಭಟನೆ ನಡೆಸಿದರು. ಚಿತ್ರಕಲಾ ಸಹ ಶಿಕ್ಷಕ ಮುನಿಯಪ್ಪ ಅವರನ್ನು ಬಂಧಿಸಿರುವುದನ್ನೂ ವಿದ್ಯಾರ್ಥಿಗಳು ಖಂಡಿಸಿದ್ದಾರೆ. ಸಚಿವರನ್ನು ಶಾಲೆಯ ಆವರಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಮುಖ್ಯ ಗೇಟ್‌ ಹಾಕಿ ಘೋಷಣೆ ಕೂಗಿದರು. ಶಾಲೆಯಲ್ಲಿ ನಡೆದಿರುವ ಘಟನೆಗಳ ವಿಡಿಯೊ ಹಂಚಿಕೊಂಡ ಆರೋಪದ ಮೇಲೆ ಮುನಿಯಪ್ಪ ಅವರ ಮೇಲೆ ದಾಖಲಿಸಿರುವ ಪ್ರಕರಣವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ ಮಕ್ಕಳು ಉಪವಾಸದ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಬಂದು ಮನವೊಲಿಸಿ ಗೇಟ್‌ ತೆಗೆಸಿದರು. ಇದಾದ ಬಳಿಕ ಸಚಿವರು ಮಕ್ಕಳನ್ನು ಮಾತನಾಡಿಸಿ ಸಮಸ್ಯೆ ಆಲಿಸಿದರು. 

ಬೀಗ ಒಡೆದು ದಾಖಲೆ ಪರಿಶೀಲನೆ

ವಸತಿ ಶಾಲೆಗೆ ಅಧಿಕಾರಿಗಳ ಭೇಟಿ ಬಗ್ಗೆ ಮಾಹಿತಿ ಪಡೆಯಲು ದಾಖಲೆ ಪುಸ್ತಕ ಕೊಡಿ ಎಂದು ಸಚಿವ ಎ.ನಾರಾಯಣಸ್ವಾಮಿ ಹಾಗೂ ಸಂಸದ ಎಸ್‌.ಮುನಿಸ್ವಾಮಿ ಕೇಳಿದರು. ಆಗ ಅಧಿಕಾರಿಗಳು ಪ್ರಾಂಶುಪಾಲರ ಕೊಠಡಿಯ ಕಪಾಟಿನ ಬೀಗ ಒಡೆದು ದಾಖಲೆ ಒದಗಿಸಿದರು.  

ಕಮಿಷನ್‌ ವಿಚಾರದಲ್ಲಿ ಗುಂಪುಗಾರಿಕೆ?

ವಸತಿ ಶಾಲೆಯಲ್ಲಿ ಪ್ರಾಂಶುಪಾಲರು ವಾರ್ಡನ್‌ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ನಡುವೆ ಕಮಿಷನ್ ಹಂಚಿಕೆ ವಿಚಾರದಲ್ಲಿ ಗುಂಪುಗಾರಿಕೆ ವೈಮನಸ್ಸು ಉಂಟಾಗಿದೆ. ಅದರಿಂದಾಗಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಸುದ್ದಿ ಹೊರಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ.

ಶಾಲೆಗೆ ಪೂರೈಕೆ ಆಗುವ ಆಹಾರ ಪದಾರ್ಥಗಳಲ್ಲಿ ಕಮಿಷನ್‌ ವ್ಯವಹಾರ ನಡೆಯುತ್ತಿದೆ. 240 ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಲೀಟರ್‌ ಹಾಲು ಖರೀದಿಸಲಾಗುತ್ತಿದೆ. 20 ಲೀಟರ್‌ ಹಾಲು ಖರೀದಿಸಲಾಗುತ್ತಿದೆ ಎಂದು ನಕಲಿ ಬಿಲ್‌ ಮಾಡಲಾಗುತ್ತಿದೆ. ವಾರದ ಬದಲು 15 ದಿನಗಳಿಗೊಮ್ಮೆ ಮಾಸಾಂಹಾರ ಕೊಡಲಾಗುತ್ತಿದೆ. ಕೊಳೆತ ಮೊಟ್ಟೆ ಕೊಡುತ್ತಿದ್ದಾರೆ. ಸಾಂಬಾರಿನಲ್ಲಿ ತರಕಾರಿಯೇ ಇರುವುದಿಲ್ಲ ಎಂದು ಮಕ್ಕಳು ಮತ್ತು ಪೋಷಕರು ದೂರಿದ್ದಾರೆ.

ತಿಂಗಳ ಹಿಂದೆ ವಸತಿ ಶಾಲೆಯ ನಿರ್ವಹಣೆಗೆಂದು ನೀಡಿದ್ದ ₹25 ಸಾವಿರ ಎಲ್ಲಿ ಹೋಯಿತು ಎಂಬ ಪ್ರಶ್ನೆಯೂ ಎದ್ದಿದೆ. ಹಣ ಬಿಡುಗಡೆ ಮಾಡಿರುವುದನ್ನು ಉಸ್ತುವಾರಿ ಸಚಿವ ಬೈರತಿ ಸುರೇಶ್‌ ತಿಳಿಸಿದರು. ‘₹25 ಸಾವಿರ ಮಂಜೂರಾಗಿದ್ದರೂ ಅದನ್ನು ಬಳಸದೆ ಮಕ್ಕಳಿಂದ‌ ಸ್ವಚ್ಛತಾ ಕೆಲಸ ಮಾಡಿಸಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಬೈರತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.