ಕೋಲಾರ: ಕೋಲಾರ ವಿಭಾಗದ ಉಪವಿಭಾಗಾಧಿಕಾರಿಯ ವಸತಿ ಗೃಹ ಸ್ವಚ್ಛಗೊಳಿಸಲು ಗ್ರಾಮ ಸಹಾಯಕರನ್ನು ನಿಯೋಜಿಸಲು ಕೋಲಾರ ತಾಲ್ಲೂಕು ತಹಶೀಲ್ದಾರ್ ಹೊರಡಿಸಿದ್ದಾರೆ ಎನ್ನಲಾದ ಆದೇಶ ಪತ್ರ ವಿವಾದಕ್ಕೆ ಕಾರಣವಾಗಿದೆ.
‘ಈ ಪತ್ರ ತಾವು ಬರೆದಿದ್ದಲ್ಲ. ಬದಲಾಗಿ ಯಾರೋ ನನ್ನ ಸಹಿ ಹಾಕಿ ನಕಲಿ ಆದೇಶ ಪತ್ರ ಸೃಷ್ಟಿಸಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವೆ’ ಎಂದು ತಹಶೀಲ್ದಾರ್ ಹರ್ಷವರ್ಧನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪತ್ರದಲ್ಲೇನಿದೆ: ಉಪವಿಭಾಗಾಧಿಕಾರಿ ಅವರ ಮೌಖಿಕ ಆದೇಶದ ಮೇರೆಗೆ ಅವರ ವಸತಿ ಗೃಹವನ್ನು ಸ್ವಚ್ಛಗೊಳಿಸಲು ತಾಲ್ಲೂಕಿನ ಎಲ್ಲಾ ಗ್ರಾಮ ಸಹಾಯಕರು ಜುಲೈ 11ರಂದು ಬೆಳಿಗ್ಗೆ 9 ಗಂಟೆಗೆ ತಪ್ಪದೇ ಹಾಜರಾಗಬೇಕು ಎಂದು ಪತ್ರದಲ್ಲಿದೆ. ಅಲ್ಲದೇ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ರಾಜೇಂದ್ರಪ್ರಸಾದ್ ಅವರು ಮೇಲುಸ್ತುವಾರಿ ವಹಿಸಿಕೊಂಡು ತಪ್ಪದೇ ಎಲ್ಲಾ ಗ್ರಾಮ ಸಹಾಯಕರು ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ‘ನಾನು ಯಾವುದೇ ಮೌಖಿಕ ಆದೇಶ ನೀಡಿಲ್ಲ. ಜುಲೈ 9 ಹಾಗೂ 10ರಂದು ನಾನು ರಜೆಯಲ್ಲಿ ಹೊರಗಡೆ ಹೋಗಿದ್ದೆ. ಈ ಸಂಬಂಧ ತಹಶೀಲ್ದಾರ್‌ಗೆ ಷೋಕಾಸ್ ನೋಟಿಸ್ ನೀಡಿದ್ದೇನೆ. ಈ ರೀತಿ ಯಾರು ಸೃಷ್ಟಿ ಮಾಡಿದ್ದಾರೋ ಗೊತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.