ಕೆಜಿಎಫ್: ರಕ್ತ ಕೊಡದಿದ್ದರೆ ಕೆಲಸ ಕೊಡುವುದಿಲ್ಲ ಎಂಬ ಭಯದಿಂದ ರಕ್ತದಾನ ಮಾಡಿದ ಕಾರ್ಮಿಕರೊಬ್ಬರು ನಂತರ ಸ್ವಯಂಪ್ರೇರಣೆಯಿಂದ 103 ಬಾರಿ ರಕ್ತದಾನ ಮಾಡಿದ್ದಾರೆ. ಬೆಮಲ್‌ನಿಂದ ಈಚೆಗೆ ನಿವೃತ್ತಿಯಾದ ಸುಡರ್ ಈ ಸಾಧನೆ ಮಾಡಿದವರು.
1982ರಲ್ಲಿ ಬೆಮಲ್ ಕಾರ್ಖಾನೆಯಲ್ಲಿ ಗುತ್ತಿಗೆ ನೌಕರನಾಗಿ ಸುಡರ್ ಕೆಲಸ ಮಾಡುತ್ತಿದ್ದರು. ರಾಬರ್ಟ್‌ಸನ್‌ಪೇಟೆಯಲ್ಲಿ ಆಗ ನಡೆದ ಅಪಘಾತದಲ್ಲಿ ತುರ್ತಾಗಿ ರಕ್ತದ ಅವಶ್ಯಕತೆ ಇತ್ತು. ಅಧಿಕಾರಿಗಳು ತಮ್ಮ ಬಳಿ ಕೆಲಸ ಮಾಡುತ್ತಿದ್ದ ಮೂವರು ಗುತ್ತಿಗೆ ನೌಕರರನ್ನು ರಕ್ತ ಕೊಟ್ಟು ಬನ್ನಿ ಎಂದು ಕಳಿಸಿದರು. ಮೂವರ ಪೈಕಿ ಇಬ್ಬರು ರಕ್ತ ನೀಡಲು ಭಯಪಟ್ಟರು. ರಕ್ತ ಕೊಡದಿದ್ದರೆ ಮರುದಿನ ಫಾಕ್ಟರಿಯಲ್ಲಿ ಕೆಲಸ ಕೊಡಲ್ಲ ಎಂಬ ಭಯಕ್ಕೆ ಸುಡರ್ ರಕ್ತ ನೀಡಿದರು. ಆ ರಕ್ತ ತುರ್ತು ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರ ಜೀವ ಉಳಿಸಿದ್ದು, ಮುಂದಿನ ದಿನಗಳಲ್ಲಿ ಸ್ವಯಂಪ್ರೇರಿತರಾಗಿ ರಕ್ತ ಕೊಡಲು ಮನಸ್ಸು ಮಾಡಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಇಲ್ಲವೇ ತುರ್ತು ಸಂದರ್ಭ ಇದ್ದರೆ, ಅವಧಿಗೂ ಮುನ್ನವೇ ರಕ್ತ ಕೊಟ್ಟ ಹಲವಾರು ಘಟನೆಗಳನ್ನು ಸುಡರ್ ಜ್ಞಾಪಿಸಿಕೊಳ್ಳುತ್ತಾರೆ. ಈಗ 61ನೇ ವರ್ಷಕ್ಕೆ ಕಾಲಿಟ್ಟಿರುವ ಅವರಿಗೆ ಇನ್ನು ಮುಂದೆ ರಕ್ತ ಕೊಡುವ ಆಸೆ ಇದ್ದರೂ, ವೈದ್ಯರು ಇನ್ನು ಸಾಕು ಎನ್ನುತ್ತಿದ್ದಾರೆ. ಆದರೆ ಕನಿಷ್ಠ 105 ಬಾರಿ ರಕ್ತದಾನ ಮಾಡಿದ ದಾಖಲೆ ನಿರ್ಮಿಸಬೇಕು ಎಂದು ಇನ್ನು ಎರಡು ಬಾರಿ ರಕ್ತ ಕೊಟ್ಟು ರಕ್ತದಾನವನ್ನು ನಿಲ್ಲಿಸಬೇಕು ಎಂದು ಬಯಸಿದ್ದೇನೆ ಎಂದು ಸುಡರ್ ಹೇಳುತ್ತಾರೆ.
ಕೆಜಿಎಫ್ ಮತ್ತು ಸುತ್ತಮುತ್ತಲಿನ ಎಲ್ಲೇ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದರೆ, ಮೊದಲು ಕರೆ ಬರುವುದೇ ಸುಡರ್ ಅವರಿಗೆ. ತಮ್ಮ ಗುಂಪಿನ ರಕ್ತದ ಜತೆಗೆ ಇತರ ಗುಂಪಿನ ರಕ್ತ ಹೊಂದಿರುವ ಪಟ್ಟಿಯನ್ನು ಅವರು ಹೊಂದಿದ್ದಾರೆ. ಅವರನ್ನು ರೋಗಿಗಳ ಬಳಿ ಕರೆದುಕೊಂಡು ಹೋಗಿ ರಕ್ತ ನೀಡಲು ಪ್ರೇರೇಪಿಸುತ್ತಾರೆ.
ಮನುಷ್ಯನಿಗೆ ರಕ್ತ ಎನ್ನುವುದು ಎಷ್ಟು ಮುಖ್ಯ ಎನ್ನುವುದು ರೋಗಿ ಜೀವನ್ಮರಣದ ಪರಿಸ್ಥಿತಿಯಲ್ಲಿದ್ದಾಗ ತಿಳಿದುಬರುತ್ತದೆ. ದುಡ್ಡಿದ್ದವರು ಎಲ್ಲಿಯಾದರೂ ರಕ್ತ ತರುತ್ತಾರೆ. ಆದರೆ ಬಡವರಿಗೆ ರಕ್ತ ಸಿಗಬೇಕಾದರೆ ಕಷ್ಟ. ಅಂತಹವರಿಗೆ ಆರ್ಥಿಕ ಸಹಾಯ ಕೂಡ ಮಾಡಿದ ಹಲವಾರು ಉದಾಹರಣೆಗಳು ಸುಡರ್ ಬಳಿ ಇದೆ.
ಅವರ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ, ಪ್ರಶಸ್ತಿಗಳನ್ನು ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.