ಕೋಲಾರ: ಕೋವಿಡ್ ಬಳಿಕ ರಾಜ್ಯದಲ್ಲಿ ವಸತಿ ಶಾಲೆಗೆ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ಪೂರೈಕೆ ಆಗದೇ ಹದಿಹರೆಯದ ಹೆಣ್ಣುಮಕ್ಕಳು ಪರದಾಡುತ್ತಿದ್ದಾರೆ. ಇದಲ್ಲದೇ, 2023–24ನೇ ಸಾಲಿನಲ್ಲಿ ಈವರೆಗೆ ‘ಶುಚಿ ಸಂಭ್ರಮ ಕಿಟ್’ ಪೂರೈಕೆ ಆಗಿಲ್ಲ.
ಋತುಸ್ರಾವದ ದಿನಗಳಲ್ಲಿ ತೊಂದರೆಯಾಗಬಾರದು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಆರೋಗ್ಯ ಇಲಾಖೆಯಿಂದ ‘ಶುಚಿ’ ಯೋಜನೆಯಡಿಯಲ್ಲಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಲಾಗುತ್ತಿತ್ತು. ಆದರೆ, ಮೂರು ವರ್ಷಗಳಿಂದ ನಿಂತು ಹೋಗಿದೆ.
ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ನಡೆಸುತ್ತಿರುವ 26 ವಸತಿ ಶಾಲೆಗಳಿವೆ. ಸಮಾಜ ಕಲ್ಯಾಣ ಇಲಾಖೆ ಸುಪರ್ದಿಯ 68 ಹಾಸ್ಟೆಲ್‌ಗಳಿವೆ. ಈ ಹಾಸ್ಟೆಲ್‌ಗಳ ವಿದ್ಯಾರ್ಥಿನಿಯರಿಗೂ ಲಭಿಸುತ್ತಿಲ್ಲ.
ಸ್ಯಾನಿಟರಿ ಪ್ಯಾಡ್ ಸ್ಥಗಿತದಿಂದ ಉಂಟಾಗಿರುವ ಸಮಸ್ಯೆಯನ್ನು ಮಾಲೂರು ತಾಲ್ಲೂಕಿನ ಯಲುವಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆಣ್ಣು ಮಕ್ಕಳು ‘ಪ್ರಜಾವಾಣಿ’ ಜೊತೆ ಹೇಳಿಕೊಂಡರು.
‘ವಸತಿ ಶಾಲೆ ಸುತ್ತಮುತ್ತ ಅಂಗಡಿಯೂ ಇಲ್ಲ. ಅಡುಗೆ ಸಹಾಯಕರಿಗೆ, ಶಾಲೆಗೆ ಭೇಟಿ ನೀಡುವ ನಮ್ಮ ಪೋಷಕರು ಅಥವಾ ಸಹಪಾಠಿಗಳ ಪೋಷಕರಿಗೆ ಹೇಳಿ ದೂರದ ಅಂಗಡಿಗಳಿಂದ ಸ್ಯಾನಿಟರಿ ಪ್ಯಾಡ್ ತರಿಸಿಕೊಳ್ಳುತ್ತಿದ್ದೇವೆ. ಶಿಕ್ಷಕರು ಹಾಗೂ ವಾರ್ಡನ್ ಬಳಿ ತನ್ನಿ ಎಂದು ಹೇಳಲು ಮುಜುಗರವಾಗುತ್ತದೆ. ದಯವಿಟ್ಟು ಇಲ್ಲೇ ಸಿಗುವಂತೆ ಮಾಡಿ ಸರ್’ ಎಂದು ವಿದ್ಯಾರ್ಥಿನಿಯರು ಬೇಡಿಕೊಂಡರು.
ಈ ವಸತಿ ನಿಲಯದಲ್ಲಿ 6ರಿಂದ 10ನೇ ತರಗತಿವರೆಗೆ 243 ಮಕ್ಕಳು ಇದ್ದಾರೆ. ಅವರಲ್ಲಿ 91 ಬಾಲಕಿಯರು ಸೇರಿದ್ದಾರೆ. ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವೂ ಕೆಟ್ಟು ಹೋಗಿದೆ. ಹೀಗಾಗಿ, ಬಳಸಿದ ಪ್ಯಾಡ್‌ಗಳನ್ನು ಕಸದ ಬಕೆಟ್‌ಗೆ ಹಾಕುತ್ತಿದ್ದಾರೆ.
ಸ್ಯಾನಿಟರಿ ಪ್ಯಾಡ್ ಖರೀದಿಗೆ ಕ್ರೈಸ್‌ನಿಂದಲೂ ಈಗ ಅನುದಾನ ಸಿಗುತ್ತಿಲ್ಲ. ಒಂದು ವಸತಿ ಶಾಲೆಯಲ್ಲಿ ಮಾತ್ರ ಪ್ರಾಂಶುಪಾಲರು ಬಾಲಕಿಯರ ಮೇಲಿನ ಮುತುವರ್ಜಿಯಿಂದ ಬೇರೆ ಅನುದಾನವನ್ನು ಉಳಿಸಿ ಸ್ಯಾನಿಟರಿ ಪ್ಯಾಡ್ ತಂದುಕೊಡುತ್ತಿದ್ದಾರೆ.
‘ಶುಚಿ ಸಂಭ್ರಮ ಕಿಟ್’ ಯೋಜನೆಯಡಿ ಬಾಲಕ, ಬಾಲಕಿಯರಿಗೆ ನೀಡುತ್ತಿದ್ದ ಮೈ ಸೋಪು, ಬಟ್ಟೆ ಸೋಪು, ಬ್ರಷ್, ಟೂತ್ ಪೇಸ್ಟ್, ಪೌಡರ್, ಕೊಬ್ಬರಿ ಎಣ್ಣೆ ಸೌಲಭ್ಯ ಕಳೆದ 9 ತಿಂಗಳಿಂದ ಲಭಿಸಿಲ್ಲ.
ವಸತಿ ಶಾಲೆಯಲ್ಲಿರುವವರು ಸೇರಿದಂತೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸುವಂತೆ ಈಚೆಗೆ ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿತ್ತು.
ಜಿಲ್ಲೆಯಲ್ಲಿ 26 ವಸತಿ ಶಾಲೆಗಳು ರಾಜ್ಯದ ಇನ್ನಿತರ ವಸತಿ ಶಾಲೆಗಳಿಗೂ ಪೂರೈಕೆ ಇಲ್ಲ ಕೆಟ್ಟು ಹೋಗಿರುವ ಪ್ಯಾಡ್ ಸುಡುವ ಯಂತ್ರ
ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ಪೂರೈಕೆ 3 ವರ್ಷಗಳಿಂದ ಸ್ಥಗಿತಗೊಂಡಿದೆ. ಪುನರಾರಂಭಿಸಲು ಪ್ರಕ್ರಿಯೆ ನಡೆಯುತ್ತಿದೆ. ಪ್ಯಾಡ್ ಸುಡುವ ಯಂತ್ರವನ್ನು ದುರಸ್ತಿ ಮಾಡಿಸಲಾಗುವುದುಪದ್ಮಾ ಬಸವಂತಪ್ಪ ಜಿಲ್ಲಾ ಪಂಚಾಯಿತಿ ಸಿಇಒ
ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ಪೂರೈಕೆ ಆಗದೆ ಬಾಲಕಿಯರಿಗೆ ಬಹಳ ತೊಂದರೆ ಆಗಿದೆ. ನಮ್ಮೊಂದಿಗೆ ಮುಜುಗರದಿಂದಲೇ ಸಮಸ್ಯೆ ಹೇಳಿಕೊಂಡರುಚೌಡಪ್ಪ ಅಧ್ಯಕ್ಷ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.