ಕೋಲಾರ: ‘ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಸೇರಿದಂತೆ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಭರವಸೆ ನೀಡಿದರು.
ಇಲ್ಲಿ ಶನಿವಾರ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಮಾತನಾಡಿ, ‘ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ₹ 2.50 ಕೋಟಿ ಅಗತ್ಯವಿದೆ. ಕ್ರೀಡಾಪಟುಗಳ ಅಭ್ಯಾಸಕ್ಕೆ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಲು ₹ 50 ಲಕ್ಷ ಬೇಕಿದೆ. ಟ್ರ್ಯಾಕ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುತ್ತೇನೆ’ ಎಂದರು.
‘ಭದ್ರತೆ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಸಿ.ಸಿ ಕ್ಯಾಮೆರಾ ಅಳವಡಿಸಲಾಗುವುದು. ಜಿಲ್ಲಾಡಳಿತದ ಬಳಿ ಸದ್ಯ 16 ಸಿ.ಸಿ ಕ್ಯಾಮೆರಾಗಳಿದ್ದು, ಅವುಗಳನ್ನು ಕ್ರೀಡಾಂಗಣಕ್ಕೆ ಬಳಸಿಕೊಳ್ಳಬಹುದು. ಕ್ರೀಡಾಂಗಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಅವರಿಗೆ ಸೂಚಿಸಿದರು.
‘ಅಂಗವಿಕಲರಿಗೆ ಶೌಚಾಲಯ ವ್ಯವಸ್ಥೆ, ಕ್ರೀಡಾಂಗಣಕ್ಕೆ ರೋಲಿಂಗ್ ಶಟರ್ ವ್ಯವಸ್ಥೆ ಕಲ್ಪಿಸಿಲು ಶಾಸಕರ ನಿಧಿಯಿಂದ ಅನುದಾನ ಮಂಜೂರು ಮಾಡುತ್ತೇವೆ. ಕ್ರೀಡಾಂಗಣದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಬಲ ಬದಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದರೆ ಕ್ರೀಡಾಂಗಣ ನಿರ್ವಹಣೆಗೆ ಆದಾಯ ಬರುತ್ತದೆ. ಮಳಿಗೆ ನಿರ್ಮಾಣಕ್ಕೆ ಅಂದಾಜು ವೆಚ್ಚಪಟ್ಟಿ ಸಿದ್ಧಪಡಿಸಿ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
‘ಕ್ರಿಕೆಟ್ ಆಟಗಾರರಿಂದ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಇತರ ಕ್ರೀಡಾಪಟುಗಳಿಗೆ, ವಾಯುವಿಹಾರ ಮಾಡುವವರಿಗೆ ಸಮಸ್ಯೆಯಾಗುತ್ತಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎಲ್.ದೇವಿಕಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕ್ರಿಕೆಟ್ ಆಟಗಾರರಿಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ರವರೆಗೆ ಸಮಯಾವಕಾಶ ನಿಗದಿಪಡಿಸಿ. ಸರ್ಕಾರಿ ಕಾರ್ಯಕ್ರಮ ಹೊರತುಪಡಿಸಿ ಖಾಸಗಿಯವರಿಗೆ ಕ್ರೀಡಾಂಗಣವನ್ನು ಬಾಡಿಗೆಗೆ ಕೊಡಲು ಕಡ್ಡಾಯಾಗಿ ಕ್ರೀಡಾ ಸಮಿತಿಯ ಅನುಮತಿ ಪಡೆಯಿರಿ. ಜತೆಗೆ ಕಾರ್ಯಕ್ರಮ ಆಯೋಜಕರಿಂದ ಮುಂಗಡವಾಗಿ ₹ 10 ಸಾವಿರ ಶುಲ್ಕ ಪಡೆಯಿರಿ. ಕ್ರೀಡಾಂಗಣ ಹಾಳು ಮಾಡಿದರೆ ಆ ಹಣ ಮುಟ್ಟುಗೋಲು ಹಾಕಿಕೊಳ್ಳಿ’ ಎಂದು ಸೂಚಿಸಿದರು.
ವಿದ್ಯುತ್ ದೀಪ ಅಳವಡಿಸಿ: ‘ನಗರಸಭೆ ವತಿಯಿಂದ ಕ್ರೀಡಾಂಗಣದ ಒಳ ಭಾಗದಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. ಜಿಲ್ಲಾ ಕ್ರೀಡಾಂಗಣ ಮತ್ತು ಒಳ ಕ್ರೀಡಾಂಗಣದ ಶೌಚಾಲಯಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಬೇಕು. ಜಿಲ್ಲಾ ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್ ಅಕ್ಕಪಕ್ಕದ ಜಾಗದಲ್ಲಿ ಖೋಖೋ, ಕಬಡ್ಡಿ ಹಾಗೂ ವಾಲಿಬಾಲ್ ಅಂಕಣ ನಿರ್ಮಾಣಕ್ಕೆ ₹ 3 ಲಕ್ಷ ಅಂದಾಜು ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ’ ಎಂದು ಹೇಳಿದರು.
‘ಒಳಾಂಗಣ ಕ್ರೀಡಾಂಗಣದ ಮರದ ನೆಲಹಾಸು ದುರಸ್ತಿಗೆ ಬಳಕೆದಾರರ ಬಳಿ ಹಣ ಸಂಗ್ರಹಿಸಬೇಕು. ಜತೆಗೆ ಜಿಮ್ ಶುಲ್ಕ ಪರಿಷ್ಕರಿಸಬೇಕು. ಸ್ವಚ್ಛತೆ ಕಾರ್ಯ ಮತ್ತು ಭದ್ರತಾ ವ್ಯವಸ್ಥೆಗೆ ಗೌರವಧನದ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಿ’ ಎಂದು ತಿಳಿಸಿದರು.
₹ 10 ಲಕ್ಷ ಉಳಿಕೆ: ‘ಇಲಾಖೆಯ ₹ 65 ಲಕ್ಷ ಅನುದಾನದಲ್ಲಿ ಮುಳಬಾಗಿಲು ಮತ್ತು ಶ್ರೀನಿವಾಸಪುರ ಕ್ರೀಡಾಂಗಣ ಅಭಿವೃದ್ಧಿಗೆ ತಲಾ ₹ 5 ಲಕ್ಷ ಖರ್ಚು ಮಾಡಲಾಗಿದೆ. ₹ 20 ಲಕ್ಷ ವೆಚ್ಚದಲ್ಲಿ ಒಳ ಕ್ರೀಡಾಂಗಣದ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಸಿಬ್ಬಂದಿ ವೇತನಕ್ಕೆ ₹ 20 ಲಕ್ಷ ನೀಡಿದ್ದು, ₹ 10 ಲಕ್ಷ ಮಾತ್ರ ಉಳಿದಿದೆ’ ಎಂದು ದೇವಿಕಾ ಮಾಹಿತಿ ನೀಡಿದರು.
ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಜಯದೇವ್, ಜಗನ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶ್ವತ್ಥ್, ಕ್ರೀಡಾಪಟು ಮಾರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.