ಬಂಗಾರಪೇಟೆ: ಜೀವನದ ಅತ್ಯಮೂಲ್ಯ ಘಟ್ಟ ಎಂದರೆ ಅದು ವಿದ್ಯಾರ್ಥಿ ಜೀವನ. ಅತ್ಯುತ್ತಮ ವಿದ್ಯಾರ್ಥಿಯಾಗಲು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ವೆಂಕಟೇಶಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೂದಿಕೋಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಹತ್ತನೇ ತರಗತಿ ಫಲಿತಾಂಶ ಕಡಿಮೆಯಾಗಿದ್ದು, ಫಲಿತಾಂಶವನ್ನು ಹೆಚ್ಚು ಮಾಡುವ ಸಲುವಾಗಿ ತಹಶೀಲ್ದಾರ್ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಅದರಂತೆ ಪ್ರತಿಯೊಂದು ಶಾಲೆಯನ್ನು ಒಬ್ಬ ತಾಲ್ಲೂಕು ಮಟ್ಟದ ಅಧಿಕಾರಿ ದತ್ತು ಪಡೆದು, ಶಾಲೆಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ಶೇ 100ರಷ್ಟು ಫಲಿತಾಂಶ ತರಲು ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್ ವೆಂಕಟೇಶಪ್ಪ ಬೂದಿಕೋಟೆಯ ಕೆಪಿಎಸ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲಾ ಸೌಕರ್ಯಗಳನ್ನು ನೀಡುವುದರ ಜೊತೆಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಒದಗಿಸಲಾಗುತ್ತಿದೆ. ಇವುಗಳ ಪ್ರಯೋಜನ ಪಡೆದು ಮಕ್ಕಳು ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಬೇಕು ಎಂದರು. ಕೆಪಿಎಸ್ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವ್ಯಾಸಾಂಗ ಮಾಡುತ್ತಿರುವ ಕಾರಣ ವಾರಕ್ಕೊಮ್ಮೆ ತಾವೇ ಪಾಠ ಮಾಡುವುದಾಗಿ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.