ADVERTISEMENT

ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯ: ನಿರ್ದೇಶಕ ಮಂಜುನಾಥ್ ಅಭಿಪ್ರಾಯ

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 14:23 IST
Last Updated 19 ಮಾರ್ಚ್ 2021, 14:23 IST
ಕೋಲಾರ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ರೈತ ಆಸಕ್ತ ಗುಂಪುಗಳ ರಚನೆ ಕುರಿತ ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿದರು.
ಕೋಲಾರ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ರೈತ ಆಸಕ್ತ ಗುಂಪುಗಳ ರಚನೆ ಕುರಿತ ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿದರು.   

ಕೋಲಾರ: ‘ಬೇಸಿಗೆ ಕಾರಣಕ್ಕೆ ಉಷ್ಣಾಂಶ ಹೆಚ್ಚಾಗುವುದರಿಂದ ದ್ವಿತಳಿ ರೇಷ್ಮೆ ಹುಳುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ರೈತರು ಹುಳು ಸಾಕಾಣಿಕಾ ಮನೆಯಲ್ಲಿ ತೇವಾಂಶ ಕಾಪಾಡಬೇಕು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಸಲಹೆ ನೀಡಿದರು.

ರೇಷ್ಮೆ ಇಲಾಖೆ, ತಾಂತ್ರಿಕ ಸೇವಾ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ಉತ್ಪಾದಕ ಸಂಸ್ಥೆಯ ರೈತ ಆಸಕ್ತ ಗುಂಪುಗಳ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಚೀನಾ ರೇಷ್ಮೆ ಆಮದು ತಡೆ ಜತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕವಾಗಿ ರೇಷ್ಮೆ ಕೃಷಿ ನಿರ್ವಹಣೆ ಮಾಡಲು ರೈತರು ತಾಂತ್ರಿಕ ಅರಿವು ಪಡೆಯಬೇಕು. ನೂಲು ಬಿಚ್ಚಾಣಿಕೆದಾರರು ಗುಣಮಟ್ಟದ ಕೊರತೆಯ ನೆಪ ಮಾಡಿಕೊಂಡು ಚೀನಾ ರೇಷ್ಮೆಗೆ ಬೇಡಿಕೆಯೊಡ್ಡುತ್ತಾರೆ. ರೈತರು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಿದರೆ ಚೀನಾ ರೇಷ್ಮೆ ಆಮದು ನಿಲ್ಲುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ. ರೇಷ್ಮೆ ಇಲಾಖೆಯಲ್ಲಿ ಹಲವು ಯೋಜನೆಗಳಿದ್ದು, ರೈತರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಹಿಪ್ಪುನೇರಳೆ ಬೆಳೆಯಬೇಕು. ವಿದೇಶಿ ಪೈಪೋಟಿಗೆ ಅನುಗುಣವಾಗಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಬೇಕು’ ಎಂದು ಸೂಚಿಸಿದರು.

ಉತ್ತಮ ಭವಿಷ್ಯ: ‘ಚೀನಾ ರೇಷ್ಮೆ ಆಮದಿನಿಂದ ದೇಶದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ರೈತರು ಗುಣಮಟ್ಟದ ರೇಷ್ಮೆ ಉತ್ಪಾದಿಸಿದರೆ ನೂಲು ಬಿಚ್ಚಾಣಿಕೆದಾರರು ಸ್ವದೇಶಿ ನೂಲು ಖರೀದಿಸುತ್ತಾರೆ. ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯವಿದೆ. ದ್ವಿತಳಿ ಮತ್ತು ಹೈಬ್ರೀಡ್‌ ರೇಷ್ಮೆ ಹುಳು ತಳಿ ಬಳಸಿಕೊಂಡು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಬೇಕು. ಭವಿಷ್ಯದಲ್ಲಿ ಭಾರತದ ರೇಷ್ಮೆಗೆ ಬೇಡಿಕೆ ಹೆಚ್ಚಲಿದೆ. ರೈತರು ನರೇಗಾದಡಿ ಹಿಪ್ಪುನೇರಳೆ ತೋಟದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಗುಣಮಟ್ಟದ ಹಿಪ್ಪುನೇರಳೆ ಬೆಳೆಯಲು ಗಮನ ಹರಿಸಬೇಕು’ ಎಂದರು.

ಉತ್ಪಾದಕ ಸಂಸ್ಥೆ: ‘ಕೇಂದ್ರ ಸರ್ಕಾರದ ಯೋಜನೆಯಡಿ ರಾಜ್ಯ ಸರ್ಕಾರವು ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸುವ ಪ್ರಯತ್ನ ನಡೆಸಿದೆ. ದಲ್ಲಾಳಿಗಳ ಹಾವಳಿ ತಪ್ಪಿಸಿ ಸೂಕ್ತ ಮಾರುಕಟ್ಟೆ ಒದಗಿಸುವುದು ಇದರ ಉದ್ದೇಶ. ರೈತರು ಉತ್ಪಾದಕ ಸಂಸ್ಥೆಗಳ ರಚನೆಗೆ ಮುಂದಾಗಬೇಕು’ ಎಂದು ಮೈರಾಡ ಸಂಸ್ಥೆ ಜಿಲ್ಲಾ ಸಂಯೋಜಕ ಎಸ್ ಧನಂಜಯ್ ವಿವರಿಸಿದರು.

ಜಿಲ್ಲೆಯ ರೈತರು ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದಿದ್ದಾರೆ. ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾಗಿದೆ. ಮಣ್ಣಿನ ಫಲವತ್ತತೆ ಕಾಪಾಡಲು ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಬೇಕು. ಪೋಷಕಾಂಶ ನಿರ್ವಹಣೆಯಲ್ಲಿ ಮಣ್ಣು ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಸುಣ್ಣಕಟ್ಟು ರೋಗ ಮತ್ತು ಎಲೆ ಸುರುಳಿ ರೋಗ ನಿಯಂತ್ರಿಸಿದರೆ ಹೆಚ್ಚು ಇಳುವರಿ ಪಡೆಯಬಹುದು’ ಎಂದು ರೇಷ್ಮೆ ವಿಸ್ತರಣಾಧಿಕಾರಿ ಎಂ.ಎಸ್.ಕಲ್ಯಾಣಸ್ವಾಮಿ ಮಾಹಿತಿ ನೀಡಿದರು.

ವೇಮಗಲ್ ರೇಷ್ಮೆ ವಿಸ್ತರಣಾಧಿಕಾರಿ ಎನ್.ಚಂದ್ರಶೇಖರ್‌ಗೌಡ, ವೇಮಗಲ್ ಸೊಸೈಟಿ ಅಧ್ಯಕ್ಷ ಕೆ.ಜಿ.ದೇವರಾಜ್, ಪ್ರಗತಿಪರ ರೈತರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.