ಬಂಗಾರಪೇಟೆ: ಕಾಡಂಚಿನ ದೇವರಗುಟ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದೇವಾಲಯದ ಆವರಣವೇ ಪಾಠ ಪ್ರವಚನಗಳ ತರಗತಿಯಾಗಿದೆ.
ಬೂದಿಕೋಟೆ ಹೋಬಳಿಯ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೇವರಗುಟ್ಲಹಳ್ಳಿ ಶಾಲೆಯಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ದೇವರಗುಟ್ಲಹಳ್ಳಿ ಗ್ರಾಮದಲ್ಲಿ ಸುಮಾರು 500 ಮಂದಿಯಿದ್ದು, ಬಹುತೇಕ ಎಲ್ಲರೂ ರೈತರು ಮತ್ತು ಕೂಲಿ ಕಾರ್ಮಿಕರಾಗಿದ್ದಾರೆ.
‘ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 40 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಕಳೆದ ಐದು ದಶಕಗಳಿಂದ ಶಾಲೆಯಲ್ಲಿ ಕಾಯಂ ಶಿಕ್ಷಕರೇ ಇಲ್ಲ. ಇದರ ಪರಿಣಾಮ ಗುಣಮಟ್ಟದ ಶಿಕ್ಷಣ ಸೊರಗಿದೆ. ಶಾಲಾ ಕಟ್ಟಡದಲ್ಲಿ ಕೇವಲ ಒಂದು ಕೊಠಡಿ ಮಾತ್ರವೇ ಇದೆ. ಒಂದು ಕೊಠಡಿಯಲ್ಲಿ ಮೂರನೇ ತರಗತಿಯವರೆಗೆ ಮಕ್ಕಳಿಗೆ ಪಾಠ ಬೋಧನೆ ನಡೆಯುತ್ತದೆ. ಈ ಸಂದರ್ಭದಲ್ಲಿ ಮತ್ತೊಬ್ಬ ಶಿಕ್ಷಕರು ಶಾಲೆಯ ಪಕ್ಕ ಇರುವ ದೇವಸ್ಥಾನದ ಆವರಣದಲ್ಲಿ ನಾಲ್ಕನೇ ತರಗತಿ ಮತ್ತು ಐದನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಆದರೆ, ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಗ್ರಾಮಸ್ಥರು ದೂರಿದರು.
ಶಾಲಾ ಕಟ್ಟಡವು ಸುಣ್ಣಬಣ್ಣವನ್ನು ಕಂಡು ದಶಕಗಳೇ ಕಳೆದಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಪ್ರಾಥಮಿಕ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಮೂರು ಕಿ.ಮೀ ದೂರದ ಕನಮನಹಳ್ಳಿಯಲ್ಲಿರುವ ಶಾಲೆಗೆ ಹೋಗಬೇಕು. ಆದರೆ, ಬಸ್ ಸೌಲಭ್ಯ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಇರುವ ಕಾರಣ ನಡೆದುಕೊಂಡೇ ಹೋಗಿಬರಬೇಕಾಗಿದೆ ಎಂದು ಮಕ್ಕಳ ಪೋಷಕರು ತಿಳಿಸಿದರು.
‘ನಮ್ಮದು ಕಾಡಂಚಿನ ಗ್ರಾಮವಾಗಿದ್ದು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸಮರ್ಪಕ ಸೌಲಭ್ಯಗಳನ್ನು ಒದಗಿಸಿ ಗ್ರಾಮವನ್ನು ಅಭಿವೃದ್ಧಿಪಡಿಸಬೇಕು’ ಎಂದು ನಿವಾಸಿ ಗೋಲಪ್ಪ ಆಗ್ರಹಿಸಿದರು.
ಗ್ರಾಮ ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತೆ ವಹಿಸಿದ್ದಾರೆ. ಚುನಾವಣೆ ಸಮಯದಲ್ಲಿ ಬಂದು ಭರವಸೆ ನೀಡುವ ಅಧಿಕಾರಿಗಳು, ಚುನಾವಣೆ ಬಳಿಕ ಇತ್ತ ನೋಡುವುದಿಲ್ಲ ಎಂದು ಗ್ರಾಮಸ್ಥರೊಬ್ಬರು ಬೇಸರ ವ್ಯಕ್ತಪಡಿಸಿದರು.
ಶೌಚಾಲಯಗಳೇ ಇಲ್ಲ!
ಇನ್ನು ಗ್ರಾಮದಲ್ಲಿ ಶೌಚಾಲಯ ಎಂಬುದು ಮರೀಚಿಕೆಯಾಗಿದ್ದು ಬಹುತೇಕ ಮಂದಿ ಬಯಲು ಶೌಚವನ್ನೇ ನೆಚ್ಚಿಕೊಂಡಿದ್ದಾರೆ. ಇದರಿಂದಾಗಿ ಮಹಿಳೆಯರು ಶೌಚಕ್ಕೆ ಹೋಗಲು ಕತ್ತಲು ಆಗುವವರೆಗೆ ಕಾಯುವಂತಾಗಿದೆ. ತಿಪ್ಪೆಗುಂಡಿಗಳು ಗ್ರಾಮದ ಹೊರವಲಯದ ಮುಖ್ಯ ರಸ್ತೆಗಳು ಜಮೀನುಗಳಿಗೆ ಸಂಪರ್ಕಿಸುವ ರಸ್ತೆಗಳು ಶೌಚಾಲಯಗಳಾಗಿ ಪರಿವರ್ತನೆಯಾಗಿವೆ. ಸುತ್ತಮುತ್ತಲಿನ ನಿವಾಸಿಗಳು ಮಲದ ದುರ್ವಾಸನೆಗೆ ಬೇಸತ್ತಿದ್ದಾರೆ.
ರಸ್ತೆ ಮತ್ತು ಚರಂಡಿಯ ವ್ಯವಸ್ಥೆ: ಸುಸಜ್ಜಿತ ರಸ್ತೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗದೆ ಚರಂಡಿಯಲ್ಲಿ ನಿಂತಿದ್ದು ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಗ್ರಾಮದ ಖಾಲಿ ಜಾಗಗಳಲ್ಲಿ ಕಸದ ರಾಶಿ ಬಿದ್ದಿರುವುದರಿಂದ ಸ್ವಚ್ಛತೆ ಮರೀಚಿಕೆಯಾಗಿದೆ.
ಕಾಡಂಚಿನ ಗ್ರಾಮವಾಗಿರುವ ಕಾರಣ ಕಾಡು ಪ್ರಾಣಿಗಳು ಗ್ರಾಮಕ್ಕೆ ರಾತ್ರಿ ವೇಳೆ ಬರುವ ಆಂತಕವಿದೆ. ಆದ್ದರಿಂದ ಹೈಮಾಸ್ಟ್ ಅಥವಾ ಸೋಲಾರ್ ದೀಪ ಅಳವಡಿಸಬೇಕು.ಸೋಣ್ಣಪ್ಪ, ಗ್ರಾಮ ನಿವಾಸಿ
ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ 40 ಮಕ್ಕಳು ಓದುತ್ತಿದ್ದು ಒಂದೇ ಕೊಠಡಿ ಇದೆ. ಶಾಲೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು.ವೆಂಕಟೇಶಪ್ಪ, ರೈತ
ದೇವರಗುಟ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.ಗುರುಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.