ಕೋಲಾರ: ಜಿಲ್ಲೆಯ ಕೆಜಿಎಫ್ ಪೊಲೀಸರು ಬಂಧಿಸಿರುವ ಮಾರಿಕುಪ್ಪಂನ ರಾಜಾ ಅಲಿಯಾಸ್ ಪಲ್ಲೂರು ರಾಜಾ ಮತ್ತು ಜೋಸೆಫ್ ಎಂಬುವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಾಜಾ ಮತ್ತು ಜೋಸೆಫ್ ವಿರುದ್ಧ ಕಳ್ಳತನ, ಕೊಲೆ ಯತ್ನ, ಹಲ್ಲೆ, ಡಕಾಯಿತಿ, ಸುಲಿಗೆ, ದೌರ್ಜನ್ಯ, ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟದ ಸಂಬಂಧ ಹಲವು ಪ್ರಕರಣ ದಾಖಲಾಗಿವೆ. ಅಲ್ಲದೇ, ಕಳ್ಳಬಟ್ಟಿ ವ್ಯವಹಾರ, ಜೂಜಾಟ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿ, ಭೂಕಬಳಿಕೆ, ಸಿ.ಡಿ ದಂಧೆ ಸೇರಿದಂತೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ.
ಈ ಹಿನ್ನೆಲೆಯಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಯು ಇವರಿಬ್ಬರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಇತ್ತೀಚೆಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಜಿಲ್ಲಾಧಿಕಾರಿಯು ರಾಜಾ ಮತ್ತು ಜೋಸೆಫ್ ಅವರನ್ನು ಗೂಂಡಾಗಳೆಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ ಮತ್ತು ಅವರಿಬ್ಬರನ್ನೂ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆದೇಶಿಸಿದ್ದಾರೆ.
‘ನ್ಯಾಯಾಂಗ ಪ್ರಕ್ರಿಯೆಯಿಂದ ಈ ಇಬ್ಬರ ಅಪರಾಧ ಕೃತ್ಯ ನಿಯಂತ್ರಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಮತ್ತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜಾ ಹಾಗೂ ಜೋಸೆಫ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅವರಿಬ್ಬರನ್ನೂ 3 ತಿಂಗಳ ಕಾಲ ಬಳ್ಳಾರಿ ಕಾರಾಗೃಹದಲ್ಲಿ ಇರಿಸುವಂತೆ ಆದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.