ಕೆಜಿಎಫ್: ಚಿನ್ನದ ಗಣಿ (ಬಿಜಿಎಂಎಲ್) ಮುಚ್ಚಿ 24 ವರ್ಷ ಗತಿಸಿದರೂ, ಈ ಸಂಸ್ಥೆಯು ಒಂದಲ್ಲಾ ಒಂದು ವಿವಾದದ ಮೂಲಕ ಸದಾ ಸುದ್ದಿಯಲ್ಲಿರುತ್ತದೆ.
ಗಣಿ ಕಾರ್ಮಿಕರ ಸಮಸ್ಯೆ, ಆಸ್ತಿ ವಿವಾದ, ಒತ್ತುವರಿ, ಕಳ್ಳತನ, ಕೂಡಂಕುಲಂ ಅಣು ತ್ಯಾಜ್ಯ ವಿಲೇವಾರಿ ಸೇರಿದಂತೆ ಇನ್ನಿತರ ಕಾರಣಗಳಿಂದ ಈ ಸ್ಥಳವು ಸುದ್ದಿಯಲ್ಲಿತ್ತು. ಇದೀಗ ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಘಟಕ ಸ್ಥಾಪನೆ ಮಾಡುವ ಯೋಜನೆಯು ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ಕೆಜಿಎಫ್‌ನ ಹೊರವಲಯದ ಬಿಜಿಎಂಎಲ್‌ಗೆ ಸೇರಿದ ಜಾಗದಲ್ಲಿ ವಿಲೇವಾರಿ ಮಾಡಲು ಘಟಕ ಸ್ಥಾಪಿಸುವ ಪ್ರಸ್ತಾವವನ್ನು ಜಿಲ್ಲಾಧಿಕಾರಿ ದೃಢಪಡಿಸುತ್ತಿದ್ದಂತೆಯೇ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಅಲ್ಲದೆ, ಈ ಪ್ರಸ್ತಾವನೆಯಿಂದ ಹಿಂದೆ ಸರಿಯಲು ಸರ್ಕಾರ ನಿರಾಕರಿಸಿದಲ್ಲಿ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ವಿವಿಧ ಸಂಘಟನೆಗಳು ನೀಡಿವೆ.
ಸರ್ಕಾರದ ಈ ನಿರ್ಧಾರ ಹಿಂಪಡೆಯುವಂತೆ ಮಾಡುವ ಭಾಗವಾಗಿ ವಿವಿಧ ಸಂಘಟನೆಗಳು ಮತ್ತು ಸ್ಥಳೀಯರು, ಸಾಮಾಜಿಕ ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕೆಲವು ಸಂಘಟನೆಗಳು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿವೆ.
ಇಂಥ ಪ್ರಸ್ತಾವನೆ ಇದು ಮೊದಲಲ್ಲ: 2012ರಲ್ಲಿ ತಮಿಳುನಾಡಿನ ಕೂಡಂಕುಲಂನಲ್ಲಿರುವ ಅಣುಶಕ್ತಿ ಸ್ಥಾವರದಿಂದ ಬಿಡುಗಡೆಯಾಗುವ ಅಣು ತ್ಯಾಜ್ಯವನ್ನು ಇಲ್ಲಿನ ಗಣಿಯ ಖಾಲಿ ಸುರಂಗಗಳಲ್ಲಿ ಸುರಿಯಲಾಗುವುದು ಎಂಬ ಸುದ್ದಿ ಹೊರಬಿದ್ದಿತ್ತು. ಈ ಪ್ರಸ್ತಾವನೆ ವಿರುದ್ಧ ಆಗಲೂ ಸ್ಥಳೀಯರ ತೀವ್ರ ಪ್ರತಿರೋಧಕ್ಕೆ ಕಾರಣವಾಗಿತ್ತು. ಆಗಿನ ಕೇಂದ್ರ ಸಚಿವ ಹಾಗೂ ಕೋಲಾರ ಸಂಸದರೂ ಆಗಿದ್ದ ಕೆ.ಎಚ್. ಮುನಿಯಪ್ಪ ಅವರು ಈ ಕುರಿತು ಹಿರಿಯ ಅಧಿಕಾರಿಗಳಿಂದ ಸ್ಪಷ್ಟನೆ ರೂಪದ ಹೇಳಿಕೆಯನ್ನು ಕೊಡಿಸಿ ಪ್ರತಿಭಟನೆಯ ಕಾವನ್ನು ತಣಿಸಿದ್ದರು.
ಬಿಬಿಎಂಪಿ ಕಸವನ್ನು ಬಿಜಿಎಂಎಲ್‌ನ ಖಾಲಿ ಜಾಗದಲ್ಲಿ ಕಸ ವಿಲೇವಾರಿ ಮಾಡುವ ಪ್ರಕ್ರಿಯೆಗೂ ಕೂಡಂಕುಲಂ ರೀತಿಯ ಹೋರಾಟ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ. ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡುವ ಪ್ರಸ್ತಾವನೆ ವಿರುದ್ಧ ಸೆ.2ರಂದು ಬೇತಮಂಗಲದಿಂದ ಕೆಜಿಎಫ್‌ಗೆ ಪಾದಯಾತ್ರೆ ಮೂಲಕ ಚಳವಳಿ ಪ್ರಾರಂಭಿಸಲು ಮುಂದಾಗಿವೆ. ಆದರೆ, ಶಾಸಕಿ ಎಂ. ರೂಪಕಲಾ ಶಶಿಧರ್ ಅವರು ಈವರೆಗೂ ಸರ್ಕಾರದ ಈ ನಿರ್ಧಾರದ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಇದು ಸ್ಥಳೀಯರು ಮತ್ತು ವಿವಿಧ ಸಂಘಟನೆಗಳವರ ಕುತೂಹಲ ಕೆರಳಿಸಿದೆ.
ಬಿಜಿಎಂಎಲ್‌ಗೆ ಸೇರಿದ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಕುರಿತು ಮಾತುಗಳು ಪ್ರಗತಿಯಲ್ಲಿದೆ. ಉದ್ದೇಶಿತ ಕಸ ಸಂಗ್ರಹ ಘಟಕದ ಬಳಿಯೇ 600 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣ ಅಭಿವೃದ್ಧಿಗೆ ಕೆಐಎಡಿಬಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಾಮಫಲಕವನ್ನು ಹಾಕಲಾಗಿದೆ.
ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಈ ಪ್ರದೇಶಕ್ಕೆ ವಾಹನಗಳಲ್ಲಿ ಕಸ ತಂದು ಸುರಿಯುವ ಈ ಯೋಜನೆಯು ಆರ್ಥಿಕವಾಗಿ ಕಾರ್ಯಸಾಧುವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಕಸದ ಲಾರಿಗಳು ಸಂಚರಿಸುವಾಗ ರಸ್ತೆಗಳಲ್ಲಿ ಕಸ ಬಿದ್ದು ರಸ್ತೆಯ ಸ್ವಚ್ಚತೆಗೆ ಕೂಡ ಧಕ್ಕೆ ಬರಲಿದೆ ಎಂಬ ಅಪಸ್ವರಗಳೂ ಕೇಳಿಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.