ADVERTISEMENT

ಕೋಲಾರ: ಹಳ್ಳಿಗಳ ಒಂಟಿ ಮಹಿಳೆಯರೇ ಕಳ್ಳರ ಟಾರ್ಗೆಟ್‌!

ಜಮೀನಲ್ಲಿ ಹಸು, ಎಮ್ಮೆ ಮೇಯಿಸುವ ರೈತ ಮಹಿಳೆಯರ ಸರ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:31 IST
Last Updated 21 ಅಕ್ಟೋಬರ್ 2024, 14:31 IST
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರು ಆರೋಪಿಗಳು ಹಾಗೂ ಕಳ್ಳತನವಾಗಿದ್ದ ವಸ್ತುಗಳನ್ನು ಪ್ರದರ್ಶಿಸಿದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರು, ಸಿಬ್ಬಂದಿಯನ್ನು ಶ್ಲಾಘಿಸಿದರು
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರು ಆರೋಪಿಗಳು ಹಾಗೂ ಕಳ್ಳತನವಾಗಿದ್ದ ವಸ್ತುಗಳನ್ನು ಪ್ರದರ್ಶಿಸಿದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರು, ಸಿಬ್ಬಂದಿಯನ್ನು ಶ್ಲಾಘಿಸಿದರು   

ಕೋಲಾರ: ಹಳ್ಳಿಗಳಲ್ಲಿನ ಒಂಟಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಸರಗಳವು ಮಾಡುತ್ತಿದ್ದ ಹಾಗೂ ಶಾಲೆಯಲ್ಲಿ ಕಳ್ಳತನದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಕೂತಾಂಡಹಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ನರೇಂದ್ರ ಅಲಿಯಾಸ್‌ ಜುಟ್ಟೆ (23), ಗದ್ದೆ ಕಣ್ಣೂರು ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಂದನ್‌ ಎಸ್‌ ಅಲಿಯಾಸ್‌ ತೂಟ (19) ಹಾಗೂ ಕೂತಾಂಡಹಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಅನಿಲ್‌ ಅಲಿಯಾಸ್‌ ಕೋಳಿ (28) ಬಂಧಿತರು. ಇವರ ಮೇಲೆ ಎರಡು ವರ್ಷಗಳಿಂದ ನಾಲ್ಕು ಕಡೆ ಸರಗಳ್ಳತನ, ಒಂದು ಕಡೆ ಶಾಲೆಯಲ್ಲಿ, ಮತ್ತೊಂದು ಕಡೆ ಕಾಲೇಜಿನ ಬಳಿ ಕಳ್ಳತನ ಹಾಗೂ ಮೊಬೈಲ್‌, ಹಣ ಸುಲಿಗೆ ಮಾಡಿದ ಆರೋಪಗಳಿವೆ. 

‘ಈ ಆರೋಪಿಗಳು ಹಳ್ಳಿಗಳ ಜಮೀನುಗಳಲ್ಲಿ ಹಸು, ಎಮ್ಮೆ ಮೇಯಿಸಲು ಹೋಗುವ ಅಮಾಯಕ ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡುತ್ತಿದ್ದರು. ಮಹಿಳೆಯರಿಗೆ ಚಾಕು ತೋರಿಸಿ, ಬೆದರಿಸಿ, ಕಣ್ಣಿಗೆ ಕಾರದ ಪುಡಿ ಎರಚಿ ಕತ್ತಿನಿಂದ ಚಿನ್ನದ ಸರಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗುತ್ತಿದ್ದರು. ಇದು ಸಾಮಾನ್ಯವಾದ ಕಳವು ಅಲ್ಲ; ಜನರಲ್ಲಿ ಭಯ ಮೂಡಿಸುವಂಥ ಚೈನ್‌ ಸ್ನ್ಯಾಚಿಂಗ್‌ ಪ್ರಕರಣಗಳು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಆರೋಪಿಗಳು ವೇಮಗಲ್ ಪೊಲೀಸ್‌ ಠಾಣೆ, ಕೋಲಾರ ಗ್ರಾಮಾಂತರ ಹಾಗೂ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದಲ್ಲಿ ತೊಡಗಿದ್ದರು. ಚೊಕ್ಕಹಳ್ಳಿಯ ಚಿನ್ಮಯ ಗ್ರಾಮೀಣ ವಿದ್ಯಾಲಯದಲ್ಲಿ ಕಳವು, ದಾನಹಳ್ಳಿ ಕೆರೆ ಬಳಿ ಸರಗಳ್ಳತನ, ಖಾಜಿಕಲ್ಲಹಳ್ಳಿ ಗ್ರಾಮದ ಬಳಿ ಸರಗಳ್ಳತನ, ಖಾಜಿಕಲ್ಲಹಳ್ಳಿ ಗೇಟ್‌ ಬಳಿ ಮೊಬೈಲ್‌ ಮತ್ತು ಹಣ ಸುಲಿಗೆ, ಚದುಮನಹಳ್ಳಿ ಗ್ರಾಮದ ಬಳಿ ಸರಗಳ್ಳತನ, ಕೋಲಾರ ನಗರದ ಬಾಲಕಿಯರ ಸರ್ಕಾರಿ ಕಾಲೇಜಿನ ಬಳಿ ಕಳ್ಳತನ ಹಾಗೂ ಚಿಂತಾಮಣಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಸೇರಿ ಒಟ್ಟು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ’ ಎಂದರು.

‘ಮೂವರು ಆರೋಪಿಗಳ ಜೊತೆಗೆ ಕೂತಾಂಡಹಳ್ಳಿ ಗ್ರಾಮದ ಮನೋಜ್‌ ಅಲಿಯಾಸ್‌ ಹುಲ್ಲುಗಾ (23) ಎಂಬಾತ ಕೂಡ ಸರಗಳ್ಳತನದಲ್ಲಿ ಭಾಗಿಯಾಗಿದ್ದ. ಆತ ಗ್ರಾಮಾಂತರ ಠಾಣೆ ಪೊಲೀಸ್‌ನಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರೋಪಿ ಅನಿಲ್‌ ಮೇಲೆ ನಂದಗುಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಇದ್ದ. ಇನ್ನುಳಿದ ಆರೋಪಿಗಳು ಬೇರೆ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

‘ಆರೋಪಿಗಳು ಚೊಕ್ಕಹಳ್ಳಿಯ ಚಿನ್ಮಯ ಶಾಲೆಯಲ್ಲಿ ₹12 ಲಕ್ಷ ನಗದು ಕಳ್ಳತನ ಮಾಡಿ ಹಂಚಿಕೊಂಡಿದ್ದಾರೆ. ಈ ಹಣದಿಂದ ಎರಡು ದ್ವಿಚಕ್ರ ವಾಹನ (ಎನ್‌ಎಸ್‌ ಪಲ್ಸರ್‌ ಬೈಕ್ ಹಾಗೂ ಹೊಂಡಾ ಡಿಯೊ ದ್ವಿಚಕ್ರ ವಾಹನ) ಖರೀದಿಸಿದ್ದಾರೆ. ಇವರು ಕಳ್ಳತನ ಮಾಡಿದ ನಾಲ್ಕು ಬಂಗಾರದ ಸರಗಳ ಒಟ್ಟು ಮೌಲ್ಯ ₹7.88 ಲಕ್ಷ ಇದೆ. ₹3.04 ಲಕ್ಷ ನಗದು ಸೇರಿ ಶಾಲೆ ಕಳ್ಳತನ ಹಾಗೂ ಸರಗಳ ಪ್ರಕರಣಗಳಲ್ಲಿ ಸುಮಾರು ₹14.5 ಲಕ್ಷ ಮೌಲ್ಯ ವಸ್ತು ಹಾಗೂ ಎರಡು ಬೈಕ್‌ ವಶಕ್ಕೆ ಪಡೆದಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್‌ ಹಾಗೂ ಅವರ ತಂಡ ಉತ್ತಮ ಕೆಲಸ ಮಾಡಿದೆ’ ಎಂದು ಶ್ಲಾಘಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ವಶಕ್ಕೆ ಪಡೆದಿರುವ ವಸ್ತುಗಳನ್ನು ಆಸ್ತಿ ಪರೇಡ್‌ ನಡೆಸಿ ಮಾಲೀಕರಿಗೆ ಒಪ್ಪಿಸಲಾಗುವುದು
ನಿಖಿಲ್‌ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಎಸ್‌ಪಿ ನಿಖಿಲ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರವಿಶಂಕರ್‌, ಜಗದೀಶ್‌, ಡಿವೈಎಸ್ಪಿ ಎಂ.ಎಚ್‌.ನಾಗ್ತೆ ಮಾರ್ಗದರ್ಶನದಲ್ಲಿ ಗಲ್‌ಪೇಟೆ ಪೊಲೀಸ್‌ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಜೆ.ಲೋಕೇಶ್‌, ಗಲ್‌ಪೇಟೆ ವೃತ್ತ ಕಚೇರಿಯ ಅಪರಾಧ ಪತ್ತೆ ದಳದ ಸಿಬ್ಬಂದಿ ವಾಸುದೇವ ಮೂರ್ತಿ, ಕೃಷ್ಣಮೂರ್ತಿ, ಶ್ರೀನಿವಾಸ್, ಮಂಜುನಾಥ್‌, ಗಂಗಾಧರ್‌, ಮಮತಾ, ವೇಮಗಲ್‌ ಪೊಲೀಸ್‌ ಠಾಣೆಯ ಸುರೇಶ್‌, ಮಹೇಶ್‌ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

ಪತ್ರಿಕಾಗೋಷ್ಠಿಯಲ್ಲಿ ಜಗದೀಶ್‌, ಎಂ.ಎಚ್‌.ನಾಗ್ತೆ, ಎಂ.ಜೆ.ಲೋಕೇಶ್‌ ಹಾಗೂ ಸಿಬ್ಬಂದಿ ಇದ್ದರು.

ವ್ಹೀಲಿಂಗ್‌; ಎಸ್‌ಪಿ ಎಚ್ಚರಿಕೆ

‘ಈಚೆಗೆ ನಗರ ಹಾಗೂ ಗ್ರಾಮೀಣ ಪ್ರದೇಶದ ಹೆದ್ದಾರಿಗಳಲ್ಲಿ ವ್ಹೀಲಿಂಗ್ ಮಾಡುವ ಪ್ರಕರಣ ಹೆಚ್ಚು ಆಗಿವೆ. ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದೇವೆ’ ಎಂದು ನಿಖಿಲ್‌ ಹೇಳಿದರು.

‘ಈಗಾಗಲೇ ನಾಲ್ಕು ಪ್ರಕರಣ ದಾಖಲಿಸಿದ್ದೇವೆ. ಇನ್ನು ಹೆಚ್ಚು ಪ್ರಕರಣಗಳಿವೆ. ಇಂಥವರ ವಾಹನ ವಶಕ್ಕೆ ಪಡೆಯುತ್ತಿದ್ದೇವೆ. ವ್ಹೀಲಿಂಗ್‌ ಮಾಡಿ ಯುವಕರು ಜೀವನ ಹಾಳು ಮಾಡಿಕೊಳ್ಳಬಾರದು. ಏಕೆಂದರೆ ಎಫ್‌ಐಆರ್‌ ಮಾಡುತ್ತೇವೆ ಚಾಲನಾ ಪರವಾನಗಿ ರದ್ದಾಗುತ್ತದೆ. ಅಲ್ಲದೇ ಸರ್ಕಾರಕ್ಕೆ ವರದಿ ನೀಡಿದರೆ ಸರ್ಕಾರದಿಂದ ಲಭಿಸುವ ಸೌಲಭ್ಯ ರದ್ದಾಗುತ್ತವೆ’ ಎಂದು ಎಚ್ಚರಿಕೆ ನೀಡಿದರು.

190 ಅಪಘಾತ ಪ್ರಕರಣ; 200 ಸಾವು

‘ಕೋಲಾರ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಸೆಪ್ಟೆಂಬರ್‌ ಅಂತ್ಯದವರೆಗೆ 190 ರಸ್ತೆ ಅಪಘಾತ ಪ್ರಕರಣ ನಡೆದಿದ್ದು 200 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದೆ’ ಎಂದು ನಿಖಿಲ್‌ ತಿಳಿಸಿದರು.

‘ರಸ್ತೆ ಅಪಘಾತ ಪ್ರಮಾಣ ತಡೆಯಲು ಪ್ರಯತ್ನ ನಡೆಸುತ್ತಿದ್ದೇವೆ. ಲೋಕೋಪಯೋಗಿ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚಿಸಿದ್ದೇವೆ. ರಸ್ತೆಯಲ್ಲಿ ತಾಂತ್ರಿಕ ವಿಚಾರವಾಗಿ ಕೆಲ ಬದಲಾವಣೆ ಮಾಡಿಸಿದ್ದೇವೆ’ ಎಂದರು.

‘ಅತಿ ವೇಗ ಬೇಜವಾಬ್ದಾರಿ ಚಾಲನೆ ಹೆಲ್ಮೆಟ್‌ ಧರಿಸದಿರುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.