ADVERTISEMENT

ಮುಳಬಾಗಿಲು: ಮನೆಯ ಚಪ್ಪಡಿ ಬಿದ್ದು ಹಲವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 14:27 IST
Last Updated 14 ಡಿಸೆಂಬರ್ 2023, 14:27 IST
ಮುಳಬಾಗಿಲು ತಾಲ್ಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಮುನೆಪ್ಪ ಎಂಬುವವರ ಮನೆಯ ಮೇಲ್ಚಾವಣಿ ಚಪ್ಪಡಿಗಳು ಬುಧವಾರ ರಾತ್ರಿ ಮುರಿದು ಬಿದ್ದಿರುವುದು
ಮುಳಬಾಗಿಲು ತಾಲ್ಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಮುನೆಪ್ಪ ಎಂಬುವವರ ಮನೆಯ ಮೇಲ್ಚಾವಣಿ ಚಪ್ಪಡಿಗಳು ಬುಧವಾರ ರಾತ್ರಿ ಮುರಿದು ಬಿದ್ದಿರುವುದು   

ಮುಳಬಾಗಿಲು: ಮನೆಯ ಮೇಲ್ಚಾವಣಿಗೆ ಹಾಕಿದ್ದ ಕಲ್ಲಿನ ಚಪ್ಪಡಿಗಳು ಮುರಿದು ಬಿದ್ದು ಹಲವರಿಗೆ ಗಾಯಗಳಾಗಿ, ಮನೆಯಲ್ಲಿದ್ದ ವಸ್ತುಗಳು ನಾಶವಾಗಿರುವ ಘಟನೆ ಬುುಧವಾರ ಮಧ್ಯರಾತ್ರಿ ನಡೆದಿದೆ.

ತಾಲ್ಲೂಕಿನ ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುನುಪಕುಂಟೆ ಗ್ರಾಮದ ಆರಿಗಾಳ್ಳ ಮುನೆಪ್ಪ ಎಂಬುವವರಿಗೆ ಸೇರಿದ 15 ವರ್ಷಗಳ ಮನೆಯ ಚಪ್ಪಡಿಗಳು ಎಲ್ಲಾ ಏಕಾಏಕಿ ಮುರಿದು ಬಿದ್ದಿದ್ದು ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನಾಶವಾಗಿವೆ.

ಮನೆಯಲ್ಲಿದ್ದ ಎಂಟು ಮಂದಿ ಮನೆಯಲ್ಲಿ ಮಲಗಿದ್ದಾಗ ಬುುಧವಾರ ಮಧ್ಯರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಚಪ್ಪಡಿಗಳು ಒಂದೇ ಸಮನೆ ಮುರಿದು ಬಿದ್ದಿವೆ. ಕೆಲವು ಚಪ್ಪಡಿಗಳು ಗೋಡೆಗಳಿಗೆ ಒರಗಿಸಿದಂತೆ ಬಿದ್ದಿದ್ದರೆ, ಮತ್ತೆ ಕೆಲವು ಒಂದರ ಮೇಲೊಂದು ಬಿದ್ದಿವೆ. ಗಾಡ ನಿದ್ರೆಯಲ್ಲಿದ್ದ ಕಾರಣ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ‌ಹಾಗಾಗಿ ಮನೆಯ ಮುನಿವೆಂಕಟಮ್ಮ ಮತ್ತು ಮೇಘನಾ ಎಂಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಮುನಿವೆಂಕಟಮ್ಮ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಘನಾ ಅವರಿಗೆ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.

ADVERTISEMENT

ಶ್ರೀನಿವಾಸ್ ಎಂಬುವವರು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ನಾಗಮ್ಮ, ಶಿವಶಂಕರ್, ವೈಷ್ಣವಿ ನರಸಿಂಹ ರಾಜ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಜೀವನ್ ಕುಮಾರ್ ಎಂಬ ಹುಡುಗ ಪಾರಾಗಿದ್ದಾನೆ. ಇನ್ನು ಮನೆಯಲ್ಲಿದ್ದ ಮಂಚ, ಬೀರು, ಪಾತ್ರೆ, ಟಿವಿ ಹಾಗೂ ಕೆಲವು ಪೀಠೋಪಕರಣಗಳು ಜಖಂ ಆಗಿವೆ. ದಿನಸಿ ಸಂಪೂರ್ಣ ಮಣ್ಣಾಗಿದೆ.

ಮಧ್ಯರಾತ್ರಿ ಘಟನೆ ನಡೆದಿದ್ದರಿಂದ ಸುತ್ತಮುತ್ತಲಿನ ಮನೆಯವರು ಸಹಾಯಕ್ಕೆ ಬರಲು ಸಾಧ್ಯವಾಗಿಲ್ಲ. ಗಾಯಾಳುಗಳ ಕಿರುಚಾಟ ಕೇಳಿಸಿಕೊಂಡ ನಂತರ ಹಲವರು ಬಂದು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಆರಿಗಾಳ್ಳ ಮುನೆಪ್ಪ ಹೇಳಿದರು.

ಮುನಿವೆಂಕಟಮ್ಮ ಅವರಿಗೆ ಕಾಲು ಹಾಗೂ ತಲೆಗೆ ಗಾಯಗಳಾಗಿದ್ದರೆ, ಮೇಘನಾಳಿಗೆ ಮುಖ ಅರ್ಧ ಭಾಗ ಜಜ್ಜಿಹೋಗಿದೆ. ಹಾಗಾಗಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ ಬೀದಿಗೆ ಬಂದಿದೆ.

ತಹಶೀಲ್ದಾರ್ ಟಿ.ರೇಖಾ, ರಾಜಸ್ವ ನಿರೀಕ್ಷಕ ಉಮೇಶ್, ಪಿಡಿಒ ಅಶ್ವತ್ ನಾರಾಯಣ, ನಂಗಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅರ್ಜುನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಮನೆಯ ಸಾಮಾನುಗಳು ನಾಶವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.