ADVERTISEMENT

ಅಮೃತ್‌ ಯೋಜನೆ ಕಾಮಗಾರಿ ಅವೈಜ್ಞಾನಿಕ

ಕೋಲಾರ ನಗರಸಭೆ ಅಧಿಕಾರಿಗ‌ಳ ವಿರುದ್ಧ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 6:17 IST
Last Updated 11 ಜನವರಿ 2023, 6:17 IST
ಕೋಲಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಮುರಳಿಗೌಡ, ಅಂಬರೀಶ್‌ ಮಾತನಾಡಿದರು
ಕೋಲಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಮುರಳಿಗೌಡ, ಅಂಬರೀಶ್‌ ಮಾತನಾಡಿದರು   

ಕೋಲಾರ: ಅಮೃತ್‌ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅವೈಜ್ಞಾನಿಕ ಹಾಗೂ ಕಳಪೆಯಾಗಿದ್ದು, ಲೋಪ ಸರಿಪಡಿಸಿದ ಬಳಿಕ ಅಜೆಂಡಾದಲ್ಲಿ ಸೇರಿಸುವಂತೆ ನಗರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಲೋಪ ಸರಿಪಡಿಸುವ ಮುನ್ನವೇ ನಗರಸಭೆಗೆ ಹಸ್ತಾಂತರಿಸಲು ಅಜೆಂಡಾದಲ್ಲಿ ವಿಷಯ ಪ್ರಸ್ತಾಪಿಸಿದ್ದಕ್ಕೆ ಮಂಗಳವಾರ ಇಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

₹ 75 ಕೋಟಿ ವೆಚ್ಚದಲ್ಲಿ ನಾಲ್ಕೈದು ವರ್ಷದ ಹಿಂದೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೊಂಡಿರುವ ನೀರು ಸರಬರಾಜು, ಒಳಚರಂಡಿ ಕೊಳವೆ, ವೆಟ್‍ವೆಲ್, ಎಸ್‌ಟಿಪಿ, ಗೃಹಸಂಪರ್ಕ, ಮೀಟರ್‌ ಅಳವಡಿಕೆ ಕಾಮಗಾರಿಯನ್ನು ನಗರಸಭೆಗೆ ಹಸ್ತಾಂತರಿಸುವ ವಿಚಾರ ಚರ್ಚೆಗೆ ಬಂದಾಗ ಪ್ರವೀಣ್‍ ಗೌಡ, ರಾಕೇಶ್, ಮುರಳಿ ಗೌಡ, ಅಂಬರೀಶ್, ಎಂ.ಬಿ.ಮುಬಾರಕ್ ಸೇರಿದಂತೆ ಹಲವು ಸದಸ್ಯರು ಪಕ್ಷಭೇದ ಮರೆತು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಹಿಂದಿನ ಕೌನ್ಸಿಲ್‌ ಸಂದರ್ಭದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿ ನಡೆಸಿ ನಾಪತ್ತೆಯಾಗಿದ್ದಾರೆ. ಕಚೇರಿಯೂ ಕೋಲಾರದಲ್ಲಿಲ್ಲ. ₹ 10 ಕೋಟಿಯನ್ನೂ ಖರ್ಚುಮಾಡಿಲ್ಲ. ಮೂರನೇ ಸಂಸ್ಥೆಯಿಂದ ಪರಿಶೀಲನೆ ನಡೆಸಲು ಒತ್ತಾಯಿಸಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದರು.

‘ಯುಜಿಡಿ ಪೈಪ್‍ಲೈನ್‍ಗಿಂತ ಮನೆ ಸಂಪರ್ಕ ಪೈಪ್‍ಗಳು ತಗ್ಗಿನಲ್ಲಿದ್ದು ಕಲುಷಿತ ನೀರು ಸರಾಗವಾಗಿ ಹಾದು ಹೋಗುತ್ತಿಲ್ಲ. ತ್ಯಾಜ್ಯ ನೀರನ್ನು ಒಂದೆಡೆ ಸಂಗ್ರಹಿಸಬೇಕಿತ್ತಾದರೂ ಆ ಕೆಲಸ ಮಾಡದೆ ಕೋಲಾರಮ್ಮ ಕೆರೆಗೆ ಹರಿಸಿದ್ದಾರೆ. ಕೆರೆಯಲ್ಲಿ ಹುಳು ಬಿದ್ದಿದ್ದು ಪರಿಸರ ಕಲುಷಿತಗೊಳ್ಳುವಂತಾಗಿದೆ. ಹೀಗಿದ್ದೂ ಕಾಮಗಾರಿ ಹಸ್ತಾಂತರಿಸಲು ಹೇಗೆ ಸಾಧ್ಯ’ ಎಂದು
ಪ್ರಶ್ನಿಸಿದರು.

‘ಅಧ್ಯಕ್ಷೆ ಒಳಗೊಂಡಂತೆ ತಟಸ್ಥ ಸಂಸ್ಥೆಯಿಂದ ಪರಿಶೀಲಿಸಿ ಎಲ್ಲವೂ ಸಮರ್ಪಕವಾಗಿದೆ ಎಂದು ಮನವರಿಕೆಯಾದ ನಂತರವೇ ಹಸ್ತಾಂತರಿಸಿಕೊಳ್ಳಬೇಕು. ವಿಶೇಷ ಸಭೆ ಕರೆದು ಚರ್ಚಿಸುವ ಅಗತ್ಯವಿದೆ’ ಎಂದು ಸದಸ್ಯ ಪ್ರಸಾದ್ ಬಾಬು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷೆ ಆರ್‌.ಶ್ವೇತಾ ಪ್ರತಿಕ್ರಿಯಿಸಿ, ಈ ಸಂಬಂಧ ಸಭೆ ಕರೆಯುವಂತೆ ಪ್ರಭಾರ ಪೌರಾಯುಕ್ತ ಪವನ್‌ ಕುಮಾರ್‌ ಅವರಿಗೆ ಸೂಚಿಸಿದರು.

ಗುತ್ತಿಗೆದಾರನ ಪರ: ‘ಇಟಿಸಿಎಂ ಆಸ್ಪತ್ರೆ ಪಕ್ಕದ ರಸ್ತೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ ಜಿ.ಸೊಣ್ಣೇಗೌಡ ಅವರಿಗೆ ಅಂತಿಮ ನೋಟಿಸ್ ನೀಡಿದ್ದು, ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು’ ಎಂಬ ಪ್ರಸ್ತಾಪಕ್ಕೆ ರಾಕೇಶ್‌ ಸೇರಿದಂತೆ ಹಲವರು ಸದಸ್ಯರು ವಿರೋಧ ವ್ಯಕ್ತಪಡಿಸಿ ಕ್ರಮ ಕೈಗೊಂಡರೆ ಬೇರೆಯವರು ಕಾಮಗಾರಿ ನಡೆಸಲು ಬರುವುದಿಲ್ಲ ಎಂದರು.

ಸದಸ್ಯ ಸೂರಿ ಮಾತನಾಡಿ, ‘ವಿಶ್ವ ಯೋಗ ದಿನಾಚರಣೆಗೆ 20 ಲೀ ಸಾಮರ್ಥ್ಯದ 1 ಸಾವಿರ ಕ್ಯಾನ್ ಸರಬರಾಜು ಮಾಡಿರುವುದಕ್ಕೆ ₹ 85 ಸಾವಿರ ಬಿಲ್ ಪಾವತಿಗಾಗಿ ಅನುಮೋದನೆಗೆ ಬಂದಿದ್ದು, ₹ 40 ಸಾವಿರ ಆಗುವುದಕ್ಕೆ ಇಷ್ಟು ಹೆಚ್ಚಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಪಟ್ಟುಹಿಡಿದರು.

ಸದಸ್ಯ ಪ್ರಸಾದ್‍ ಬಾಬು ಮಾತನಾಡಿ, ‘ಹಿಂದಿನ ಸರ್ಕಾರವು ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ₹ 5 ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಈಗಿನ ಸರ್ಕಾರ ವಾಪಸ್ಸು ಪಡೆದುಕೊಂಡಿದೆ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕ್ಲಾಕ್ ಟವರ್, ಹಳೆಯ ಬಸ್ ನಿಲ್ದಾಣದಲ್ಲಿ ದೊಡ್ಡ ಗಡಿಯಾರ ಅಳವಡಿಸುವುದು, ಟಿ.ಚನ್ನಯ್ಯರಂಗಮಂದಿರ ಆವರಣದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ, ವಿವಿಧೆಡೆ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಸಭೆ ಒಪ್ಪಿಗೆ ನೀಡಿತು.

ನಗರಸಭೆಗೆ ನಿರ್ವಹಣೆ ಕಷ್ಟ: ‘ಅಮೃತ್ ಯೋಜನೆಯನ್ನು ನಗರಸಭೆಗೆ ಹಸ್ತಾಂತರಿಸಿದರೆ ನಿರ್ವಹಣೆ ಕಷ್ಟವಾಗುತ್ತದೆ. ಎಸ್‍ಡಿಪಿ ಘಟಕಗಳ ಸ್ಥಳಾಂತರ ಮತ್ತು ನಿರ್ಮಾಣ, ಅವೈಜ್ಞಾನಿಕವಾಗಿ ಅಳವಡಿಸಿರುವ ಒಳಚರಂಡಿ ಪೈಪ್‍ಗಳನ್ನು ಸರಿಪಡಿಸುವುದು, ಚೇಂಬರ್‌ಗಳ ಮೇಲಿನ ಕಳಪೆ ಮುಚ್ಚಳ ಬದಲಿಸಬೇಕಾದರೆ ₹ 20ರಿಂದ 30 ಕೋಟಿ ಖರ್ಚು ಮಾಡಿದರೂ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗುತ್ತಿಗೆದಾರರ ಪರ ಕೆಲಸ ಮಾಡುತ್ತಿರುವ ಅಧಿಕಾರಿಗಳ ನಡೆ ಅಕ್ಷಮ್ಯ ಅಪರಾಧ’ ಎಂದು ಸದಸ್ಯರಾದ ಪ್ರಸಾದ್ ಬಾಬು, ಅಂಬರೀಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.