ADVERTISEMENT

ಸ್ವರ್ಣನಗರದಲ್ಲಿ ಕಳ್ಳರ ಕಾಟ: ಭೀತಿಯಲ್ಲಿ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:59 IST
Last Updated 13 ಜೂನ್ 2024, 15:59 IST

ಕೆಜಿಎಫ್‌: ರಾಬರ್ಟಸನ್‌ಪೇಟೆಯ ಸ್ವರ್ಣ ನಗರ ಬಡಾವಣೆಯಲ್ಲಿ ರಾತ್ರಿ ಹೊತ್ತು ಕಳ್ಳರ ತಂಡ ಮುಕ್ತವಾಗಿ ಓಡಾಡುತ್ತಿರುವುದು ನಾಗರಿಕರಿಗೆ ಆತಂಕವನ್ನು ಉಂಟು ಮಾಡಿದೆ.

ಬಡಾವಣೆಯಲ್ಲಿ ಬುಧವಾರ ರಾತ್ರಿ ಕಳ್ಳನೊಬ್ಬ ಮನೆಯ ಕಾಂಪೊಂಡು ದಾಟಿ ಕಳ್ಳತನಕ್ಕೆ ಪ್ರಯತ್ನ ಮಾಡಿರುವುದು ಸಿ.ಸಿ. ಟಿವಿಯಲ್ಲಿ ದಾಖಲಾಗಿದೆ. ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಾಗರಿಕರಿಗೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕಳೆದ ವಾರ ದರೋಡೆ ಕೋರರ ತಂಡವೊಂದು ಕೆಎಸ್‌ಆರ್‌ಟಿಸಿ ನೌಕರರೊಬ್ಬರ ಮನೆಯ ಕಿಟಕಿ ಸರಳು ಮುರಿದು ದರೋಡೆ ಮಾಡಲು ಪ್ರಯತ್ನ ನಡೆಸಿತ್ತು. ಮನೆಯವರು ಎಚ್ಚರಗೊಂಡ ನಂತರ ಅವರು ಓಡಿಹೋಗಿದ್ದರು. ಪುನಃ ಮರುದಿನ ಬೈಕ್‌ನಲ್ಲಿ ಕಳ್ಳರು ಬಡಾವಣೆಯಲ್ಲಿ ಓಡಾಡಿದ್ದರು. ಇವೆಲ್ಲ ದೃಶ್ಯಗಳು ಸಿ.ಸಿ ಟಿವಿಯಲ್ಲಿ ದಾಖಲಾಗಿದ್ದು, ಈಗ ಮತ್ತೊಂದು ಕಳ್ಳತನ ಯತ್ನ ನಡೆದಿರುವುದು ಬಡಾವಣೆಯ ನಿವಾಸಿಗಳಿಗೆಗೆ ಆತಂಕ ಮೂಡಿಸಿದೆ. ರಾತ್ರಿ ಹೊತ್ತು ಓಡಾಡುವುದಕ್ಕೆ ಕೂಡಾ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಬಡಾವಣೆಯಲ್ಲಿ ಇಷ್ಟೊಂದು ಭೀತಿಯ ವಾತಾವರಣ ನಿರ್ಮಾಣವಾಗಿದ್ದರೂ, ಪೊಲೀಸರು ಸಾರ್ವಜನಿಕರಿಗೆ ಭೀತಿ ಹೋಗಲಾಡಿಸುವ ಕೆಲಸ ಮಾಡಿಲ್ಲ. ರಾಬರ್ಟಸನ್‌ಪೇಟೆ ಪೊಲೀಸರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಈಗ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಕೂಡ ವರ್ಗಾವಣೆಯಾಗಿರುವುದರಿಂದ ಜವಾಬ್ದಾರಿ ಅಧಿಕಾರಿ ಇಲ್ಲದೆ ಇರುವುದು ಕಳ್ಳರಿಗೆ ವರದಾನವಾಗಿದೆ. ನಿವಾಸಿಗಳು ಮನೆ ಬಿಟ್ಟು ಹೋಗುವುದಕ್ಕೆ ಭಯ ಪಡುವ ಪರಿಸ್ಥಿತಿ ಉಂಟಾಗಿದೆ. ಮನೆಯಲ್ಲಿ ನಿವಾಸಿಗಳು ಇದ್ದಾಗಲೇ ಕಳ್ಳತನ ಮಾಡಲು ಯತ್ನಿಸುತ್ತಿರುವುದು ಜನತೆಯಲ್ಲಿ ಆತಂಕ ಉಂಟು ಮಾಡಿದೆ’ ಎಂದು ನಿವಾಸಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.