ಬಂಗಾರಪೇಟೆ: ಮೈಸೂರು ದಸರಾ ಮಹೋತ್ಸವ ವೀಕ್ಷಣೆಗೆ ಕುಟುಂಬ ಸದಸ್ಯರೆಲ್ಲರೂ ಮೈಸೂರಿಗೆ ಹೋಗಿದ್ದಾಗ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಆರೋಪಿಸಿ ಇಟ್ಟಿಗೆ ವ್ಯಾಪಾರಿ ಮಹಮ್ಮದ್ ಸಾಕೀಬ್ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ಮನೆಯಲ್ಲಿ ₹45 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಇದೇ 11ರ ಶುಕ್ರವಾರದಂದು ದಸರಾ ಮಹೋತ್ಸವ ವೀಕ್ಷಣೆಗಾಗಿ ಕುಟುಂಬ ಸಮೇತರಾಗಿ ಮೈಸೂರಿಗೆ ಹೋಗಿದ್ದೆವು. ಒಂದು ವಾರ ಮೈಸೂರು ಪ್ರವಾಸ ಮುಗಿಸಿ ಶುಕ್ರವಾರ ಬೆಳಗ್ಗಿನ ಜಾವ ಮನೆಗೆ ಬಂದೆವು. ಆದರೆ, ಅಷ್ಟೊತ್ತಿಗಾಗಲೇ ನಮ್ಮ ಮನೆಯ ಬಾಗಿಲು ತೆರೆದಿತ್ತು. ಮನೆಯ ಒಳಗೆ ಹೋಗಿ ಪರಿಶೀಲಿಸಿದಾಗ 650 ಗ್ರಾಂ ಚಿನ್ನಾಭರಣಗಳು ಮತ್ತು ₹7.5 ನಗದು ಕಳ್ಳತನವಾಗಿರುವುದು ಗೊತ್ತಾಗಿದೆ’ ಎಂದು ಮಹಮ್ಮದ್ ಸಾಕೀಬ್ ಹೇಳಿದ್ದಾರೆ.
ಕಳ್ಳರು ಮನೆಯ ಗೇಟ್ ಬೀಗ ಮುರಿದು ಒಳ ಬಂದು, ಕಳ್ಳತನ ಮಾಡಿ, ಹಿಂಭಾಗಿಲಿನ ಗೇಟ್ ಮೂಲಕ ಹೋಗಿದ್ದಾರೆ ಎಂದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ನಂಜಪ್ಪ, ಜೆ.ಸಿ. ನಾರಾಯಣಸ್ವಾಮಿ ಮತ್ತು ಮಾರ್ಕೊಂಡಯ್ಯ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.