ಮುಳಬಾಗಿಲು: ಮುಳಬಾಗಿಲು ನಗರಸಭೆಯಾಗಿ ಮೇಲ್ದರ್ಜೆಗೇರಿ ಸುಮಾರು ಮೂರು ವರ್ಷಗಳಾಗಿದ್ದು, ನಗರದಲ್ಲಿ ತಾಲ್ಲೂಕಿನ ಎಲ್ಲಾ ಕಚೇರಿಗಳಿವೆ. ನಗರಕ್ಕೆ ಪ್ರತಿನಿತ್ಯ ಸುಮಾರು ಹತ್ತು ಸಾವಿರ ಮಂದಿ ಬಂದು ಹೋಗುತ್ತಾರೆ. ಆದರೆ, ಈ ಜನಸಂಖ್ಯೆಗೆ ತಕ್ಕಂತೆ ಶೌಚಾಲಯಗಳ ವ್ಯವಸ್ಥೆ ಇಲ್ಲದೆ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ನಗರ ದಿನೇ ದಿನೇ ಬೆಳೆಯುತ್ತಿದ್ದು ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಈಗಾಗಲೇ 70 ಸಾವಿರ ಜನಸಂಖ್ಯೆಯನ್ನು ಮೀರಿದೆ. ಪುರಸಭೆಯಾಗಿದ್ದ ಮುಳಬಾಗಿಲು ಪಟ್ಟಣವನ್ನು ಈಚೆಗೆ ಮೂರು ವರ್ಷಗಳ ಹಿಂದೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದರೂ ನಗರದಲ್ಲಿ ಸೂಕ್ತವಾದ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡದೇ ಇರುವುದರಿಂದ ಹಾಗೂ ಇರುವ ಶೌಚಾಲಯಗಳನ್ನು ತೆರೆಯದೆ ಇರುವುದರಿಂದ ಜನರು ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ.
ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು ಎಂಬ ಸರ್ಕಾರದ ಆದೇಶವಿದೆ. ನಗರದಲ್ಲಿ ತಾಲ್ಲೂಕು ಪಂಚಾಯಿತಿ ಮುಂಭಾಗ ಹಾಗೂ ಎಂ.ಜಿ. ರಸ್ತೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆಯಾದರೂ ಕೆ.ಇ.ಬಿ ವೃತ್ತದಲ್ಲಿ ಮಾತ್ರ ಕೇವಲ ಒಂದೇ ಒಂದು ಸಾರ್ವಜನಿಕ ಶೌಚಾಲಯ ಮಾತ್ರ ತೆರೆದಿದೆ. ಹಾಗಾಗಿ, ನಗರಕ್ಕೆ ಬರುವ ಪ್ರಯಾಣಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ನೌಕರರು ಮುಂತಾದವರು ಶೌಚಾಲಯಗಳಿಗಾಗಿ ಪರದಾಡುವ ಸ್ಥಿತಿ ಇದೆ. ನಗರದಲ್ಲಿ ಎಲ್ಲಿ ನೋಡಿದರೂ ಬಯಲು ಮೂತ್ರ ವಿಸರ್ಜನೆ ಹಾಗೂ ಕೆಲವು ಕಡೆಗಳಲ್ಲಿ ಬಯಲು ಶೌಚಾಲಯ ಸಾಮಾನ್ಯವಾಗಿದೆ.
ನಗರದಲ್ಲಿ ಐತಿಹಾಸಿಕ ಮತ್ತು ಸುಪ್ರಸಿದ್ಧ ಪ್ರವಾಸಿ ತಾಣಗಳಾದ ಆಂಜನೇಯ ದೇವಾಲಯ, ಸೋಮೇಶ್ವರ, ನರಸಿಂಹ ತೀರ್ಥ ಸಮೀಪದ ಪಾದರಾಜ ಮಠ ಮುಂತಾದ ಪ್ರವಾಸಿ ಕೇಂದ್ರಗಳು ಹಾಗೂ ಆವಣಿ ರಾಮಲಿಂಗೇಶ್ವರ, ಕುರುಡುಮಲೆ ವಿನಾಯಕ ಮುಂತಾದ ಗ್ರಾಮಗಳಿಗೆ ಹೋಗುವ ಮುಖ್ಯ ಕೇಂದ್ರ ಮುಳಬಾಗಿಲು ನಗರವಾಗಿದೆ. ಪ್ರತಿನಿತ್ಯ ನೂರಾರು ಮಂದಿ ಪ್ರವಾಸಿಗರೂ ಬಂದು ಹೋಗುತ್ತಾರೆ.ಆದರೆ ನಗರಕ್ಕೆ ಬರುವವರಿಗೆ ಬೆಸ್ಕಾಂ ಕಚೇರಿಯ ಮುಂದೆ ಹಾಗೂ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಎರಡು ರೂಪಾಯಿ ಪಾವತಿ ಮಾಡಿ ಉಪಯೋಗಿಸುವ ಶೌಚಾಲಯಗಳು ಮಾತ್ರ ಇವೆ.
ಸ್ವಚ್ಚತಾ ಅರಿವು ಕೇಂದ್ರದ ಮುಂದೆಯೇ ಶೌಚಾಲಯಕ್ಕೆ ಬೀಗ: ತಾಲ್ಲೂಕಿನಲ್ಲಿ ಸ್ವಚ್ಚತೆ ಮತ್ತು ಶೌಚಾಲಯಗಳ ನಿರ್ಮಾಣದ ಕುರಿತು ಅರಿವು ಮೂಡಿಸುವ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿಯೇ ಶೌಚಾಲಯ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ವರ್ಷ ಕಳೆಯುತ್ತಿದ್ದರೂ ಇದುವರೆಗೂ ಬೀಗ ತೆರೆದು ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ತಾಲ್ಲೂಕು ಕಚೇರಿಗಳಿಗೆ ಬರುವವರು ಶ್ರೀರಾಮ ಮಂದಿರ ಹಿಂಭಾಗದಲ್ಲಿ ಬಯಲು ಶೌಚ ಮತ್ತು ಮೂತ್ರ ಮಾಡುತ್ತಿದ್ದಾರೆ.
ಕ್ರೀಡಾಂಗಣವಲ್ಲ ಬಯಲು ಶೌಚಾಲಯ: ನಗರದ ನೇತಾಜಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ ಮೊದಲಾದ ಕಾರ್ಯಕ್ರಮಗಳು ನಡೆಯುತ್ತದೆ. ಆದರೆ ಕ್ರೀಡಾಂಗಣದಲ್ಲಾಗಲೀ ಅಥವಾ ಸಮೀಪದಲ್ಲಾಗಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ಇರುವುದರಿಂದ ಕಾರ್ಯಕ್ರಮಗಳಿಗೆ ಬರುವವರು ಕ್ರೀಡಾಂಗಣದ ಸುತ್ತಲೂ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಕ್ರೀಡಾಂಗಣದ ಮೂಲೆಗಳು ದುರ್ನಾತ ಬೀರುತ್ತಿವೆ.
ಕೆನರಾ ಬ್ಯಾಂಕ್ ಸಮೀಪದ ಶೌಚಾಲಯವೂ ಬೀಗ: ಆರು ತಿಂಗಳ ಹಿಂದೆ ಸರ್ಕಾರಿ ಆಸ್ಪತ್ರೆಯ ಎಡ ಬದಿಯಲ್ಲಿ ನೂತನವಾಗಿ ಶೌಚಾಲಯ ಕೇಂದ್ರವನ್ನು ನಿರ್ಮಿಸಲಾಗಿದೆಯಾದರೂ ಕೆಲವು ದಿನಗಳು ಮಾತ್ರ ತೆರೆದು ದಿನಗಳು ಕಳೆದಂತೆ ಬೀಗ ಜಡಿಯಲಾಗಿದೆ.ಇದರಿಂದ ಆಸ್ಪತ್ರೆ, ಬ್ಯಾಂಕುಗಳು, ವ್ಯಾಪಾರ ವಹಿವಾಟುಗಳಿಗೆ ಬರುವವರು ಶೌಚಾಲಯಕ್ಕೆ ಸ್ಥಳಾವಕಾಶ ಇಲ್ಲದೆ ಇರುವುದರಿಂದ ಖಾಲಿ ಬಯಲುಗಳಲ್ಲಿ ಮೂತ್ರ ಮಾಡುವಂತಹ ಪರಿಸ್ಥಿತಿ ಇದೆ.ಆದರೂ ಇದುವರೆಗೂ ನಗರಸಭೆಯ ಯಾವ ಅಧಿಕಾರಿಯೂ ಶೌಚಾಲಯಗಳ ನಿರ್ವಹಣೆ ಅಥವಾ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ಅಧಿಕಾರಿಗಳ ಬೇಜವಬ್ದಾರಿಯನ್ನು ತೋರಿಸುತ್ತದೆ.
ನಗರದಲ್ಲಿ ಶೌಚಾಲಯಗಳನ್ನು ಹೆಚ್ಚಾಗಿ ನಿರ್ಮಿಸಿ ದೂರದ ಕಡೆಗಳಿಂದ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಲವು ಬಾರಿ ನಗರಸಭೆ ಆಯುಕ್ತ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇಲ್ಲದಂತಾಗಿದೆ.ಪ್ರಭಾಕರ್ ಸಾರ್ವಜನಿಕ
ನಗರದಲ್ಲಿ ಮುಚ್ಚಲಾಗಿರುವ ಶೌಚಾಲಯಗಳು ಸ್ವಲ್ಪ ದುರಸ್ತಿಯಾಗಿದ್ದು ಶೀಘ್ರದಲ್ಲೇ ಪುನಃ ಕಾರ್ಯಾರಂಭ ಮಾಡಲು ಟೆಂಡರ್ ಕರೆದು ಶೌಚಾಲಯಗಳನ್ನು ತೆರೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.ಶ್ರೀಧರ್ ನಗರಸಭೆ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.