ADVERTISEMENT

ಟಿಪ್ಪು ನಾಟಕ ಪ್ರದರ್ಶನ: ಅವಕಾಶ ನೀಡದಂತೆ ಇಬ್ರಾಹಿಂ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 13:44 IST
Last Updated 5 ಮಾರ್ಚ್ 2023, 13:44 IST
   

ಕೋಲಾರ: ‘ಚುನಾವಣಾ ಸಮಯದಲ್ಲಿ ಕಲಹ ಉಂಟು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಹಂತದಲ್ಲಿ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಟಿಪ್ಪು ನಾಟಕ ಪ್ರದರ್ಶನಕ್ಕೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅವಕಾಶ ನೀಡದೆ ನಿಷೇಧ ಹೇರಬೇಕು. ನಾನು ಹಾಗೂ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೇಂದ್ರದ ವಸ್ತುಸಂಗ್ರಹಾಲಯದಲ್ಲಿ ಟಿಪ್ಪು ಚರಿತ್ರೆ ಏನಿದೆ? ಅದು ಬಿಜೆಪಿಗೆ ಗೊತ್ತಿಲ್ಲವೇ? ಜಗದೀಶ ಶೆಟ್ಟರ್‌ ಟಿಪ್ಪು ಜಯಂತಿ ಆಚರಿಸಲಿಲ್ಲವೇ? ಕಾಲೇಜಿನಲ್ಲಿದ್ದಾಗ ಲವ್ವು, ವಯಸ್ಸಾದ ಮೇಲೆ ಡಿವೋರ್ಸ್‌. ಇದು ಬಿಜೆಪಿ ಪರಿಸ್ಥಿತಿ’ ಎಂದರು.

ರಂಗಾಯಣ ಮೈಸೂರು ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ನಿರ್ದೇಶನದ ‘ಟಿಪ್ಪು ನಿಜಕನಸುಗಳು’ ನಾಟಕವನ್ನು ಕೋಲಾರ ನಗರದಲ್ಲಿ ಮಾರ್ಚ್‌ 7ರಂದು ಏರ್ಪಡಿಸಿದ್ದು, ಈ ಸಂಬಂಧ ಉದ್ಭವಿಸಿರುವ ವಿವಾದದ ಕುರಿತು ಅವರು ಪ್ರತಿಕ್ರಿಯಿಸಿದರು.

ADVERTISEMENT

‘ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದಲ್ಲಿ ಮೂರನೇ ಸ್ಥಾನವೇ ಗತಿ. ದಯವಿಟ್ಟು ಇಲ್ಲಿ ಅವರು ಸ್ಪರ್ಧಿಸಬಾರದು. ತಾನು ಸೋಲುತ್ತಿದ್ದು, ಸಿದ್ದರಾಮಯ್ಯ ಅವರೂ ಸೋಲಲಿ ಎಂದು ಶಾಸಕ ರಮೇಶ್‌ ಕುಮಾರ್‌ ಇಲ್ಲಿಗೆ ಕರೆತಂದಿದ್ದಾರೆ’ ಎಂದು ಲೇವಡಿ ಮಾಡಿದರು.

‘ದೇವೇಗೌಡ ಹಾಗೂ ಕುಮಾರಸ್ವಾಮಿ ಹಿನ್ನೆಲೆ ನೋಡಿ ನಮಗೆ ಮತ ಹಾಕಿ. ಅವರ ಜೀವನಚರಿತ್ರೆ, ಪ್ರಾಮಾಣಿಕತೆ ಗಮನಿಸಿ. ದೇಶದ ಪ್ರಧಾನಿ ಆಗಿದ್ದವರಿಗೆ ಒಂದು ಸ್ವಂತ ಮನೆ ಇಲ್ಲ. ಆದರೆ, ಇವತ್ತು ಶಾಸಕನ ಮಗನ ಮನೆಯಲ್ಲಿ ₹ 8 ಕೋಟಿ ಸಿಗುತ್ತಿದೆ. ಒಬ್ಬ ಮಾಜಿ ಪ್ರಧಾನಿ ಬಳಿ ನಾಲ್ಕು ಜುಬ್ಬಾ, ನಾಲ್ಕು ಪಂಚೆ ಇಲ್ಲ. ಇದನ್ನು ಜನರ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.