ಶ್ರೀನಿವಾಸಪುರ: ಆಧುನಿಕ ಯುಗದಲ್ಲಿ ತೊಗಲು ಗೊಂಬೆಯಾಟ ನೇಪಥ್ಯಕ್ಕೆ ಸರಿಯುತ್ತಿರುವ ಕಾಲಘಟ್ಟದಲ್ಲಿ ಹಿರಿಯ ತೊಗಲು ಗೊಂಬೆಯಾಟ ಕಲಾವಿದರೊಬ್ಬರು ಇದರ ಪ್ರಚಾರದಲ್ಲಿ ತೊಡಗಿದ್ದಾರೆ.
ಶ್ರೀನಿವಾಸಪುರದಲ್ಲಿ ನೆಲೆಸಿರುವ ಹಿರಿಯ ತೊಗಲು ಗೊಂಬೆ ಕಲಾವಿದ ಪಾವಗಡ ಸತ್ಯನಾರಾಯಣ ಅವರು ಊರೂರು ಸುತ್ತಿ ಆಟದ ಹಾಡು ಹಾಡುವುದರ ಮೂಲಕ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಸತ್ಯನಾರಾಯಣ ಅವರು ತಮ್ಮ ಮಗಳು ಶಾರದಮ್ಮ ಅವರ ಜತೆ ಹಾರ್ಮೋನಿಯಂ ನುಡಿಸುತ್ತಾ ಹಾಡಿದರೆ ಕೇಳುಗರಿಗೆ ಗೊಂಬೆಗಳು ಕಣ್ಮುಂದೆ ಕುಣಿದಾಡುವ ಅನುಭವವಾಗುತ್ತದೆ.
ಒಂದು ಕಾಲದಲ್ಲಿ ತೊಗಲು ಗೊಂಬೆಯಾಟ ಸಿನಿಮಾದಷ್ಟೇ ಆಕರ್ಷಣೆ ಹೊಂದಿದ್ದ ಜಾನಪದ ಕಲೆಯಾಗಿತ್ತು. ಹೆಸರಾಂತ ಕಲಾವಿದರು ಮೇಕೆ ಚರ್ಮದಿಂದ ಕತೆಗೆ ಅಗತ್ಯವಾದ ಗೊಂಬೆ ತಯಾರಿಸಿ ಮನಮೋಹಕ ಬಣ್ಣ ಹಾಕುತ್ತಿದ್ದರು. ವೃತ್ತಿಪರ ಕಲಾವಿದರು ಗ್ರಾಮಗಳನ್ನು ಹಂಚಿಕೊಂಡು ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಪ್ರದರ್ಶನ ನೀಡುತ್ತಿದ್ದರು. ಪ್ರತಿಯಾಗಿ ಗ್ರಾಮಸ್ಥರಿಂದ ದವಸ, ಧಾನ್ಯ, ಬಟ್ಟೆ, ಕುರಿ, ಕೋಣ ಪಡೆದು ಜೀವನ ಸಾಗಿಸುತ್ತಿದ್ದರು. ಆದರೆ, ಸಿನಿಮಾ ಬಂದ ಮೇಲೆ ಸಹಜವಾಗಿಯೇ ತೊಗಲು ಗೊಂಬೆಯಾಟ ಮಹತ್ವ ಕಳೆದುಕೊಂಡು ಕಲಾವಿದರು ಬೀದಿಗೆ ಬಿದ್ದರು.
ತೊಗಲು ಗೊಂಬೆಯಾಟ ಕಣ್ತುಂಬಿಕೊಂಡು ಖುಷಿಪಟ್ಟ ಹಿರಿಯ ಪ್ರೇಕ್ಷರು ಇನ್ನೂ ಜೀವಂತವಾಗಿದ್ದಾರೆ. ರಾಮಾಯಣ, ಮಹಾಭಾರತದ ಪಾತ್ರಗಳಿಗೆ ಗೊಂಬೆಗಳ ಮೂಲಕ ಜೀವ ತುಂಬಿ ಕುಣಿಸುತ್ತಿದ್ದ ಪರಿ ನಿಜಕ್ಕೂ ಅನನ್ಯ.
ಇಳಿ ವಯಸ್ಸಿನ ಹಿರಿಯ ತೊಗಲು ಗೊಂಬೆ ಕಲಾವಿದ ಸತ್ಯನಾರಾಯಣ ಅವರು ಹೊಟ್ಟೆಪಾಡಿಗಾಗಿ ಹಾಡುವ ವೃತ್ತಿ ಆಯ್ಕೆ ಮಾಡಿಕೊಂಡವರಲ್ಲ. ಒಂದು ಪುರಾತನ ಜನಪದ ಪ್ರಕಾರಕ್ಕೆ ಮರುಜೀವ ತುಂಬುವ ಪ್ರಯತ್ನ ಅವರದಾಗಿದೆ. ಹೋದ ಗ್ರಾಮದಲ್ಲಿ ಮೊದಲು, ತೊಗಲು ಗೊಂಬೆ ಪ್ರದರ್ಶನ ಏರ್ಪಡಿಸುತ್ತಾರೆ. ತೊಗಲು ಗೊಂಬೆ ಆಟದ ಇತಿಹಾಸದ ಬಗ್ಗೆ ಮಾತನಾಡುತ್ತಾರೆ. ಹಾರ್ಮೋನಿಯಂ ನುಡಿಸುತ್ತ ಹಾಡಿ ರಂಜಿಸುತ್ತಾರೆ.
‘ಜನ ಮತ್ತೆ ತೊಗಲು ಗೊಂಬೆಯನ್ನು ಮಡಿಲು ತುಂಬಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿಲ್ಲ. ಆದರೆ ಹೊಸ ಪೀಳಿಗೆಗೆ ಹಿಂದೆ ಮನರಂಜನೆಯ ಮುಂಚೂಣಿಯಲ್ಲಿದ್ದ ಜನಪದ ಕಲೆಯೊಂದರ ಪರಿಚಯ ಮಾಡಿಕೊಡುವುದು ನನ್ನ ತಿರುಗಾಟದ ಉದ್ದೇಶ’ ಎಂದು ಸತ್ಯನಾರಾಯಣ ಅವರು ಪ್ರಜಾವಾಣಿಗೆ ತಿಳಿಸಿದರು.
‘ಹಿಂದೆ ಜೀವನ ಕಷ್ಟವಾಗಿತ್ತು. ಆದರೆ, ಸರ್ಕಾರದ ಸುರಕ್ಷಾ ಯೋಜನೆಗಳು ಕೈ ಹಿಡಿದಿವೆ. ಎರಡು ಹೊತ್ತು ಊಟಕ್ಕೆ ತೊಂದರೆಯಿಲ್ಲ. ಕಲಾವಿದ ಭಿಕ್ಷುಕನಾದಾಗ ಕಲೆ ಗೌರವ ಕಳೆದುಕೊಳ್ಳುತ್ತದೆ. ಯಾರ ಬಳಿಯೂ ಕೈಯೊಡ್ಡದಿದ್ದರೂ, ಕಲಾ ಪ್ರೇಮಿಗಳು ಪ್ರೀತಿಯಿಂದ ಸ್ವಲ್ಪ ಆರ್ಥಿಕ ನೆರವು ನೀಡುತ್ತಾರೆ. ನಿರಾಕರಿಸದೆ ಪಡೆದು ಕಲಾ ಪ್ರಚಾರಕ್ಕೆ ಬಳಸುತ್ತೇನೆ’ ಎಂದು ಹೇಳಿದರು.
ಕೆಲವು ವರ್ಷಗಳ ಹಿಂದೆ ಪಾವಗಡದಿಂದ ಪ್ರಾರಂಭಿಸಲಾದ ತೊಗಲು ಗೊಂಬೆ ಪ್ರಚಾರ ಯಾತ್ರೆ, ಜಿಲ್ಲೆಯ ಗಡಿ ದಾಟಿ ನೆರೆಯ ಆಂಧ್ರಪ್ರದೇಶದಲ್ಲೂ ಮುಂದುವರಿದಿದೆ. ಈ ಹಿರಿಯ ಕಲಾವಿದನ ಆಶಯದ ಹಿಂದೆ ಸಮುದಾಯದ ಬೆಂಬಲ ಇರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.