ಕೋಲಾರ: ಜಿಲ್ಲೆಯ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಟೊಮೆಟೊ ಕೊಯ್ಲು ಆರಂಭವಾಗಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಇಳಿಕೆಯು ಆಘಾತ ನೀಡಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿದ್ದು, ಬೆಲೆ ಕುಸಿಯುತ್ತಾ ಸಾಗಿದೆ.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಮಾರು 8,800 ಹೆಕ್ಟೇರ್ ಟೊಮೆಟೊ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಮೇ ತಿಂಗಳಿಂದ ಆಗಸ್ಟ್ ಅಂತ್ಯದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆ ಬರುತ್ತದೆ.
ಜಿಲ್ಲೆಯಲ್ಲಿ ವರ್ಷಕ್ಕೆ 5 ಲಕ್ಷ ಮೆಟ್ರಿಕ್ ಟನ್ ಟೊಮೆಟೊ ಉತ್ಪಾದನೆಯಾಗುತ್ತಿದ್ದು, ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಪ್ರತಿನಿತ್ಯ ಟೊಮೆಟೊ ರಫ್ತಾಗುತ್ತದೆ. ಮುಖ್ಯವಾಗಿ ರಾಜಸ್ತಾನ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರಕ್ಕೆ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ಟೊಮೆಟೊ ರಫ್ತಾಗುತ್ತದೆ.
ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವ್ಯಾಪಾರಿಗಳು ಸ್ಥಳೀಯ ಮಾರುಕಟ್ಟೆಯಿಂದ ದಿನನಿತ್ಯ ಲೋಡ್‌ಗಟ್ಟಲೆ ಟೊಮೆಟೊ ಖರೀದಿಸಿಕೊಂಡು ಹೋಗುತ್ತಾರೆ. ಆದರೆ, ಆ ರಾಜ್ಯಗಳಲ್ಲೇ ಸದ್ಯ ಟೊಮೆಟೊ ಕೊಯ್ಲು ಆರಂಭವಾಗಿರುವ ಕಾರಣ ಅಲ್ಲಿನ ವ್ಯಾಪಾರಿಗಳು ಸ್ಥಳೀಯ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ.
ಮತ್ತೊಂದೆಡೆ ಆಂಧ್ರಪ್ರದೇಶದ ಕಡಪ, ಅನಂತಪುರ, ಪುಂಗನೂರು, ತಮಿಳುನಾಡಿನ ಹೊಸೂರು ಹಾಗೂ ರಾಜ್ಯದ ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಯಿಂದ ಸ್ಥಳೀಯ ಮಾರುಕಟ್ಟೆಗೆ ಟೊಮೆಟೊ ಬರುತ್ತಿದೆ. ಇದರಿಂದ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಹೆಚ್ಚಿದೆ. ಆದರೆ, ಆವಕದ ಪ್ರಮಾಣಕ್ಕೆ ತಕ್ಕಂತೆ ಬೇಡಿಕೆ ಹೆಚ್ಚಿಲ್ಲ. ಇದು ಬೆಲೆ ಕುಸಿತಕ್ಕೆ ಮುಖ್ಯ ಕಾರಣವಾಗಿದೆ.
ಏರಿಳಿತವಿಲ್ಲ: ತಿಂಗಳ ಹಿಂದೆ ಅಂದರೆ ಫೆ.18ರಂದು ಸ್ಥಳೀಯ ಎಪಿಎಂಸಿಯಲ್ಲಿ ಟೊಮೆಟೊ ಸಗಟು ದರ ಕ್ವಿಂಟಾಲ್‌ಗೆ ಕನಿಷ್ಠ ₹ 467 ಮತ್ತು ಗರಿಷ್ಠ ₹ 1,867 ಇತ್ತು. ಗುರುವಾರ (ಮಾರ್ಚ್ 18) ಸಗಟು ದರ ಕ್ವಿಂಟಾಲ್‌ಗೆ ಕನಿಷ್ಠ ₹ 300 ಮತ್ತು ಗರಿಷ್ಠ ₹ 867ಕ್ಕೆ ತಲುಪಿದೆ. ಟೊಮೆಟೊ ಆವಕದಲ್ಲಿ ಹೆಚ್ಚಿನ ಏರಿಳಿತವಾಗಿಲ್ಲ. ತಿಂಗಳ ಹಿಂದೆ ಟೊಮೆಟೊ ಆವಕ ಸರಾಸರಿ 5,880 ಕ್ವಿಂಟಾಲ್ ಇತ್ತು. ಗುರುವಾರ 5,545 ಕ್ವಿಂಟಾಲ್ ಟೊಮೆಟೊ ಮಾರುಕಟ್ಟೆಗೆ ಬಂದಿದೆ.
ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ತಗ್ಗಿದರೂ ಬೆಲೆ ಮಾತ್ರ ಏರಿಕೆಯಾಗಿಲ್ಲ. ಫೆಬ್ರುವರಿ ಅಂತ್ಯದಲ್ಲಿ ಟೊಮೆಟೊ ಚಿಲ್ಲರೆ ಮಾರಾಟ ದರ ಕೆ.ಜಿಗೆ ₹ 30 ಇತ್ತು. ಈಗ ದರ ₹ 10ಕ್ಕೆ ಕುಸಿದಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರು ಇಲ್ಲ. ಟೊಮೆಟೊ ಕೊಯ್ಯಲು ಮತ್ತು ಸಾಗಣೆಗೆ ಮಾಡಿದ ಹಣ ಸಹ ರೈತರಿಗೆ ಸಿಗುತ್ತಿಲ್ಲ.
ಕೋವಿಡ್ ಸಂಕಟ: ಕಳೆದ ವರ್ಷ ಕೋವಿಡ್ ಹಾಗೂ ಲಾಕ್‌ಡೌನ್ ಕಾರಣಕ್ಕೆ ಸರಕು ಸಾಗಣೆ ಸೇವೆ ಸ್ಥಗಿತಗೊಂಡು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಟೊಮೆಟೊ ಸಾಗಿಸುವುದು ಸಾಧ್ಯವಾಗಿರಲಿಲ್ಲ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಗಣನೀಯವಾಗಿ ಕುಸಿದು ರೈತರು ಟೊಮೆಟೊ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದರು. ಕೆಲ ರೈತರು ಜಮೀನಿನಲ್ಲೇ ಟೊಮೆಟೊ ಬೆಳೆ ನಾಶಪಡಿಸಿದ್ದರು. ಹಿಂದಿನ ವರ್ಷದ ನಷ್ಟದಿಂದ ರೈತರು ಚೇತರಿಸಿಕೊಳ್ಳುವಷ್ಟರಲ್ಲಿ ಬೆಲೆ ಇಳಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.