ಕೋಲಾರ: ಇಳುವರಿ ಕುಸಿತ ಹಾಗೂ ಮಾರುಕಟ್ಟೆಗೆ ಪೂರೈಕೆ ತಗ್ಗಿದ ಕಾರಣ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು, ಎರಡು ದಿನಗಳಿಂದ ಟೊಮೆಟೊ ಧಾರಣೆ ಏರುಗತಿಯಲ್ಲಿ ಸಾಗಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ ಉತ್ತಮ ಗುಣಮಟ್ಟದ 15 ಕೆ.ಜಿ. ತೂಕದ ಬಾಕ್ಸ್ ಟೊಮೆಟೊಗೆ ₹ 700ಕ್ಕೂ ಹೆಚ್ಚು ದರ ಸಿಗುತ್ತಿದೆ. ಕೆ.ಜಿ ಟೊಮೆಟೊಗೆ ಸರಾಸರಿ ಕನಿಷ್ಠ ₹ 47 ಇದೆ. ಕಳೆದ ವರ್ಷ ಈ ಸಮಯದಲ್ಲಿ ಇದಕ್ಕಿಂತ ಹೆಚ್ಚಿನ ಧಾರಣೆ ಇತ್ತು.
ಸ್ಥಳೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ ಕೆ.ಜಿಗೆ ₹ 50ರ ದರದಲ್ಲಿ ಮಾರಾಟವಾಗುತ್ತಿದೆ. ವಾರದ ಹಿಂದೆಯಷ್ಟೇ ₹ 25ರಿಂದ 30 ದರವಿತ್ತು.
ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ಟೊಮೆಟೊ ಆವಕ ಪ್ರಮಾಣ 8,500 ಕ್ವಿಂಟಲ್
(56,600 ಬಾಕ್ಸ್) ಇತ್ತು.
‘ಏಪ್ರಿಲ್‌ನಲ್ಲಿ ವಿಪರೀತ ಬಿಸಿಲು, ಈಗ ಮಳೆ ಹೆಚ್ಚಳ ಕಾರಣ ಈ ಬಾರಿ ಟೊಮೆಟೊ ಫಸಲು ಕಡಿಮೆ ಆಗಿದೆ. ರೋಗಬಾಧೆ ಹೆಚ್ಚಿರುವ ಕಾರಣ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆದಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಟೊಮೆಟೊ ಸುಗ್ಗಿ ಕಾಲವಾಗಿದ್ದರೂ ಪೂರೈಕೆ ಕಡಿಮೆಯಾಗಿದೆ’ ಎಂದು ಕೋಲಾರ ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಹೊರರಾಜ್ಯಗಳಿಂದಲೂ ಹೆಚ್ಚಿನ ಬೇಡಿಕೆ ಬರುತ್ತಿದೆ. ಇನ್ನು 15 ದಿನಗಳಲ್ಲಿ ಪೂರೈಕೆ ಹೆಚ್ಚುವ ಸಾಧ್ಯತೆ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.