ಕೆಜಿಎಫ್: ಸ್ಮಶಾನದಲ್ಲಿ ಹೆಣಗಳಿಗೆ ಗುಂಡಿ ತೋಡಿ, ಮೃತರ ಸಂಬಂಧಿಕರು ನೀಡುವ ಹಣದಲ್ಲಿ ಜೀವನ ಸಾಗಿಸುವ ಕುಟುಂಬದಿಂದ ಬಂದ ಶಿವಿಲ್‌ಕರ್ ಉದಯೋನ್ಮುಖ ಅಥ್ಲೇಟ್ ಪಟು. ಬೆಮಲ್ ಸಂಯುಕ್ತ ಕಿರಿಯ ಕಾಲೇಜಿನಲ್ಲಿ ಎರಡನೇ ಪಿಯು ವ್ಯಾಸಂಗ ಮಾಡುತ್ತಿರುವ ಶಿವಿಲ್‌ಕರ್, ತ್ರಿಬಲ್ ಜಂಪ್ (ತ್ರಿವಿಧ ಜಿಗಿತ)ನಲ್ಲಿ ಸಾಧನೆ ಮಾಡುವತ್ತ ದಾಫುಗಾಲು ಹಾಕಿದ್ದಾನೆ.
ಅಂತರ ಪಿಯು ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆದಾರರ ಗಮನ ಸೆಳೆದಿರುವ ಈ ಆಥ್ಲೆಟಿಕ್, ಈಗ ರಾಷ್ಟ್ರ ಮಟ್ಟದಲ್ಲಿ ಆಡುವ ಅರ್ಹತೆ ಪಡೆದಿದ್ದಾನೆ. ಮಂಗಳೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 13.99 ಮೀಟರ್ ಹಾರಿ ಸಾಧನೆ
ಮಾಡಿದ್ದಾನೆ.ಚಾಂಪಿಯನ್ ರೀಫ್ಸ್‌ನ ವಿಲಿಯಂ ರಿಚರ್ಡ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವಾಗಲೇ ಆಥ್ಲೆಟಿಕ್ ಮೇಲೆ ಆಸಕ್ತಿ ಬಂದಿತು.
ಶಾಲಾ ಮಟ್ಟದಲ್ಲಿ 200 ಮೀಟರ್ ಓಟದಲ್ಲಿ ರಾಜ್ಯ ಮಟ್ಟದವರೆಗೂ ಭಾಗವಹಿಸಿದ ಶಿವಿಲ್‌ಕರ್, ತ್ರಿಬಲ್ ಜಂಪ್‌ನಲ್ಲಿಯೂ ಭಾಗವಹಿಸಿದ್ದಾನೆ. ದೈಹಿಕ ಶಿಕ್ಷಕರಾದ ದಿನೇಶ್, ಮನೀಶ್, ವಿಜಯ್ ಮಾರ್ಗದರ್ಶನದಲ್ಲಿ ತ್ರಿಬಲ್ ಜಂಪ್ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಪಡೆದಿದ್ದಾನೆ. ನಂತರ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾಮಟ್ಟದಲ್ಲಿ ಎರಡನೇ ಸ್ಥಾನ ಮತ್ತು ರಾಜ್ಯಮಟ್ಟದಲ್ಲಿ ಕೂಡ ಭಾಗವಹಿಸುವ ಅರ್ಹತೆ ಪಡೆದಿದ್ದಾನೆ.
ತ್ರಿಬಲ್ ಜಂಪ್‌ಗೆ ನಗರದಲ್ಲಿ ಸೂಕ್ತ ಜಾಗವಿಲ್ಲ. ಇರುವ ನಗರಸಭೆ ಕ್ರೀಡಾಂಗಣದಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲ. ಇದಕ್ಕಾಗಿ ಪ್ರತಿನಿತ್ಯ ಬೆಮಲ್ ನಗರದ ಕ್ರೀಡಾ ಸಮುಚ್ಛಯಕ್ಕೆ ಹೋಗಿ ಅಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಇಂಗ್ಲೆಂಡ್‌ನ ತ್ರಿಬಲ್ ಜಂಪ್ ಸ್ಟಾರ್ ಜೋನಾಥನ್ ಇವರ ಆದರ್ಶವಾಗಿದ್ದಾರೆ.
ಅವರ ರೀತಿಯಲ್ಲಿಯೇ ಮಿಂಚಬೇಕೆಂಬ ಕನಸು ಇದೆ ಎಂದು ಶಿವಿಲ್‌ಕರ್ ಆಸೆಗಣ್ಣಿನಿಂದ ಹೇಳುತ್ತಾನೆ. ತೀರಾ ಬಡತನದಿಂದ ಬಂದಿರುವ ಶಿವಿಲ್‌ಕರ್ ಗೆ ದೈಹಿಕ ಅರ್ಹತೆ ಇದೆ. ಸಾಧಿಸಬೇಕೆಂಬ ಛಲವೂ ಇದೆ. ನಗರದಲ್ಲಿ ಉದ್ದ ಜಿಗಿತಕ್ಕೆ ಪಿಟ್ ಇಲ್ಲದೆ ಇರುವುದು ಸಮಸ್ಯೆಯಾಗಿದೆ. ಸೂಕ್ತ ಅವಕಾಶ ಕಲ್ಪಿಸಿಕೊಟ್ಟರೆ ಒಳ್ಳೆಯ ತ್ರಿಬಲ್ ಜಂಪ್ ಪಟುವನ್ನು ನಾವು ಸೃಷ್ಟಿಸಬಹುದು ಎಂದು ಶಿಕ್ಷಣ ಇಲಾಖೆ ತಾಲ್ಲೂಕು ದೈಹಿಕ ಅಧಿಕಾರಿ ಬಾಬು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.