ADVERTISEMENT

ಕೋಲಾರಕ್ಕೆ ಕೃಷ್ಣಾ ನದಿ ನೀರು ತರಲು ಪ್ರಯತ್ನ: ಮಲ್ಲೇಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 13:21 IST
Last Updated 8 ಜೂನ್ 2024, 13:21 IST
ಎಂ.ಮಲ್ಲೇಶ್‌ ಬಾಬು
ಎಂ.ಮಲ್ಲೇಶ್‌ ಬಾಬು   

ಕೋಲಾರ: ‘ನೀರಾವರಿ ಯೋಜನೆ ಕಲ್ಪಿಸಲಿ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಸಲು ಮೊದಲ ಆಧ್ಯತೆ ನೀಡುತ್ತೇನೆ’ ಎಂದು ನೂತನ ಸಂಸದ ಎಂ.ಮಲ್ಲೇಶ್‍ ಬಾಬು ತಿಳಿಸಿದರು.

ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಲಾರ ಕ್ಷೇತ್ರದ ಜನತೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. 5 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದರೆ ಒಳ್ಳೆಯದು. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಆದರೆ, ಯಾವ ಖಾತೆ ಸಿಗಲಿದೆ ಎನ್ನುವುದು ಬಿಜೆಪಿ ಹೈಕಮಾಂಡ್‌ ಹಾಗೂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ. ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಸಂಬಂಧಿಸಿದ ಖಾತೆ ಲಭಿಸಿದರೆ ಉತ್ತಮ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಬಂಗಾರಪೇಟೆ ಹಾಗೂ ಕೆಜಿಎಫ್ ಕ್ಷೇತ್ರದಲ್ಲಿ ಪ್ರತಿನಿತ್ಯ 30 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರು ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಅದನ್ನು ತಪ್ಪಿಸಲು ಬಿಜಿಎಲ್ ಪ್ರದೇಶದಲ್ಲಿ ಉತ್ಪಾದನಾ ಘಟಕ ಸ್ಥಾಪನೆಯಾಗಬೇಕು. ಕೋಲಾರ ಗಡಿಯಾದ ವಿ.ಕೋಟ ಪಲಮನೇರು ಭಾಗದಲ್ಲಿ ಹರಿಯುತ್ತಿರುವ ಕೃಷ್ಣ ನದಿ ನೀರನ್ನು ಕೋಲಾರಕ್ಕೆ ತರುವ ಬಗ್ಗೆ ಎನ್.ಡಿ.ಎ ಮೈತ್ರಿಯಲ್ಲಿ ಭಾಗವಾಗಿರುವ ಆಂಧ್ರದ ಟಿಡಿಪಿ ಅವರ ಜೊತೆ ಮಾತನಾಡಲು ಒಳ್ಳೆಯ ಅವಕಾಶ ಲಭಿಸಿದೆ. ಕೃಷ್ಣಾ ನದಿ ನೀರನ್ನು ಕೋಲಾರಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ಮೇಲೆ ಒತ್ತಡ ಹಾಕಲಾಗುವುದು’ ಎಂದು ಭರವಸೆ ನೀಡಿದರು.

‘ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಶಕ್ತಿ ಏನು ಎಂಬುದು ಕಾಂಗ್ರೆಸ್‌ಗೆ ಅರಿವು ಆಗಿದೆ. ಎಂಟು ವಿಧಾನಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಆ ನಂಬಿಕೆ ನನ್ನಲ್ಲಿ ಇತ್ತು. ಅದೀಗ ಫಲಿತಾಂಶ ರೂಪದಲ್ಲಿ ಕಾಣಿಸಿಕೊಂಡಿದ್ದು, ಗೆಲ್ಲಲು ಸಾಧ್ಯವಾಗಿದೆ’ ಎಂದರು.

‘5 ವರ್ಷ ಬಿಜೆಪಿ ಸಂಸದರಾಗಿದ್ದ ಎಸ್.ಮುನಿಸ್ವಾಮಿ ಅವರು ಕ್ಷೇತ್ರಕ್ಕೆ ಬೇಕಾದ ಅಭಿವೃದ್ದಿಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಸಮಯದ ಅಭಾವದಿಂದ ಅದನ್ನು ಇನ್ನು ನೋಡಿಲ್ಲ. ಈಗಾಗಲೇ ಅವರು ಕೈಗೆತ್ತಿಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.