ADVERTISEMENT

ಬಿಜೆಪಿ ಸೇರುತ್ತೇನೆ: ವರ್ತೂರು ಪ್ರಕಾಶ್ ಘೋಷಣೆ

ಜಿಲ್ಲಾ ಕೇಂದ್ರದಲ್ಲಿ ಸಮಾವೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 6 ಮೇ 2022, 14:21 IST
Last Updated 6 ಮೇ 2022, 14:21 IST
ಕೋಲಾರದಲ್ಲಿ ಶುಕ್ರವಾರ ನಡೆದ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಮಾತನಾಡಿದರು
ಕೋಲಾರದಲ್ಲಿ ಶುಕ್ರವಾರ ನಡೆದ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಮಾತನಾಡಿದರು   

ಕೋಲಾರ: ‘ಬೆಂಗಳೂರಿನಲ್ಲಿ ಶನಿವಾರ (ಮೇ 7) ನಾನು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿ ರಾಜಕೀಯದ ಎರಡನೇ ಇನ್ನಿಂಗ್ಸ್‌ ಆರಂಭಿಸುತ್ತೇನೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಘೋಷಿಸಿದರು.

ಬಿಜೆಪಿ ಸೇರ್ಪಡೆ ವಿಚಾರವಾಗಿ ಇಲ್ಲಿ ಶುಕ್ರವಾರ ಬೆಂಬಲಿಗರು, ಆಪ್ತರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ಅವರು, ಕೋಲಾರದ ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ವೆಂಕಟರಮಣ ಸ್ವಾಮಿಗೆ ಪೂಜೆ ಸಲ್ಲಿಸಿ ಬೆಂಗಳೂರಿನ ಬೆಂಗಳೂರಿನ ಬಿಜೆಪಿ ಕಚೇರಿಗೆ ತೆರಳಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ’ ಎಂದರು.

‘ಕ್ಷೇತ್ರದ 210 ಹಳ್ಳಿಗಳಲ್ಲೂ ನನಗೆ ಬೆಂಬಲಿಗರಿದ್ದಾರೆ. ಬಿಜೆಪಿ ವರಿಷ್ಠರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಸಚಿವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ಶಾಸಕ ಶ್ರೀನಿವಾಸಗೌಡರೇ ನನ್ನ ವಿರುದ್ದ ಸ್ಪರ್ಧಿಸಲು ಸೂಕ್ತ ವ್ಯಕ್ತಿ. ಅವರು ಗ್ರಾಮಗಳ ಅಭಿವೃದ್ಧಿ ಮರೆತಿರುವುದರಿಂದಲೇ ಜನರು ಇಂದು ನನ್ನನ್ನು ಬೆಂಬಲಿಸುತ್ತಿದ್ದಾರೆ. ನಾನು ಈ ಹಿಂದೆ ಶಾಸಕನಾಗಿ ಮತ್ತು ಸಚಿವನಾಗಿ ಕ್ಷೇತ್ರದಲ್ಲಿ ಮಾಡಿದ ಜನಪರ ಕಾರ್ಯಗಳು ಮುಂದಿನ ಚುನಾವಣೆಯಲ್ಲಿ ನನಗೆ ನೆರವಾಗಲಿವೆ. ಕ್ಷೇತ್ರದ ಜನರ ಮತ್ತೆ ನನ್ನ ಕೈಹಿಡಿಯುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಕಲಿಗಳು: ‘ಕ್ಷೇತ್ರದಲ್ಲಿ ಸ್ಪರ್ಧಿಸಲು ವ್ಯಾಪಾರಿ ಮನೋಭಾವದಿಂದ ಬಂದಿರುವ ನಾಯಕರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಮರ್ಷಿಯಲ್ ಆಗಿ ಹಲವರು ಬಂದರು-ಹೋದರು ಅಷ್ಟೇ. ಅವರೆಲ್ಲಾ ನಕಲಿಗಳು’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದರು.

‘ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಇಬ್ಭಾಗವಾಗಿದೆ. ಇಷ್ಟು ದಿನ ಸಿಎಂಆರ್ ಶ್ರೀನಾಥ್ ಟೊಮೆಟೊ ವ್ಯಾಪಾರದ ಕಾಸು ಖರ್ಚು ಮಾಡಿ ಶಾಸಕರಾಗಬೇಕೆಂದು ಆಸೆ ಇಟ್ಟುಕೊಂಡಿದ್ದರು. ಇನ್ನಾದರೂ ಅವರು ಎಚ್ಚೆತ್ತುಕೊಳ್ಳಬೇಕು. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನನಗೆ ಸ್ಪರ್ಧಿಯೇ ಅಲ್ಲ, ಅವರ ಹತ್ತಿರ ಹಣ ಬಲವಿದೆ, ಆದರೆ ಜನ ಬಲವಿಲ್ಲ. ಕ್ಷೇತ್ರದಲ್ಲಿ ಓಡಾಡುತ್ತಿರುವ ಅರಿಕೆರೆ ಮಂಜುನಾಥಗೌಡರೇ ದಯವಿಟ್ಟು ಮನೆಗೆ ಹೋಗಿ, ವಿನಾಕಾರಣ ಹಣ ಹಾಳು ಮಾಡಿಕೊಳ್ಳಬೇಡಿ’ ಎಂದರು.

‘ಬಿಜೆಪಿಯು ದಲಿತರು ಮತ್ತು ಅಲ್ಪಸಂಖ್ಯಾತರ ವಿರೋಧಿಯಲ್ಲ. ಕಾಂಗ್ರೆಸ್ ಈ ಸಮುದಾಯಗಳನ್ನು ಓಟ್ ಬ್ಯಾಂಕ್‌ ಆಗಿ ಪರಿಗಣಿಸಿ ವಂಚಿಸುತ್ತಲೇ ಬಂದಿದೆ’ ಎಂದು ವಾಗ್ದಾಳಿ ನಡೆಸಿದರು.

ಬೆನ್ನಿಗೆ ನಿಲ್ಲಬೇಕು: ‘ಪರಿಶಿಷ್ಟರು ವರ್ತೂರು ಪ್ರಕಾಶ್‍ರನ್ನು ಮರೆಯಬಾರದು. ಅವರು ಯಾವುದೇ ಪಕ್ಷಕ್ಕೆ ಹೋದರೆ ಅವರ ಬೆನ್ನಿಗೆ ನಿಲ್ಲಬೇಕು. ನಾನು ಅವರ ಗೆಲುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಮುಖಂಡ ಬೆಗ್ಲಿ ಪ್ರಕಾಶ್ ಹೇಳಿದರು.

‘ನಮಗೆ ಒಂದು ನೆಲೆ ಬೇಕಾಗಿದೆ. 20 ವರ್ಷಗಳ ಕಾಂಗ್ರೆಸ್ ಒಡನಾಟ ಬಿಟ್ಟು, ಈಗ ಬಿಜೆಪಿಗೆ ಹೋಗುತ್ತಿದ್ದೇವೆ. ಶ್ರೀನಿವಾಸಗೌಡರು ಕ್ಷೇತ್ರದಲ್ಲಿ ನಯಾಪೈಸೆ ಕೆಲಸ ಮಾಡಿಲ್ಲ. ಅವರಿಗೆ ತಲೆ ಕೆಟ್ಟಿಲ್ಲ, ಮರೆವು ನಾಟಕ. ₹ 2 ಕೋಟಿ ಶಾಸಕರ ನಿಧಿ ಬಂದಿದ್ದರೂ ₹ 2 ಲಕ್ಷದ ಕಾಮಗಾರಿ ಗುತ್ತಿಗೆ ನೀಡಿಲ್ಲ’ ಎಂದು ಕುಟುಕಿದರು.

‘ಹಿಂದಿನ ಚುನಾವಣೆಯಲ್ಲಿ ಸ್ವಯಂಕೃತ ಅಪರಾಧದಿಂದ ವರ್ತೂರು ಪ್ರಕಾಶ್ ಸೋತರು. ಆ ಸೋಲಿನಿಂದ ರಾಜಕಾರಣದ ಅರಿವಾಗಿದೆ. ಈ ಬಾರಿ 50 ಸಾವಿರ ಮತಗಳಿಂದ ಗೆಲ್ಲುವುದು ನಿಶ್ಚಿತ. ಜೆಡಿಎಸ್‍ನಿಂದ ಗೆದ್ದಿದ್ದ ಶ್ರೀನಿವಾಸಗೌಡರು ತಮ್ಮದೇ ಪಕ್ಷದ ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡರ ವಿರುದ್ದ ಮತ ಹಾಕಿ ರಾಜಕೀಯವಾಗಿ ತುಳಿದರು’ ಎಂದು ದೂರಿದರು.

ವರ್ತೂರು ಪ್ರಕಾಶ್ ಬಿಜೆಪಿಗೆ ಸೇರುವ ಸಂಬಂಧ ನಿರ್ಧಾರ ತಿಳಿಸುವಂತೆ ಕೇಳಿದಾಗ ಸಭೆಯಲ್ಲಿ ಇದ್ದವರು ಎರಡೂ ಕೈ ಎತ್ತುವ ಮೂಲಕ ಸರ್ವಾನುಮತದ ಒಪ್ಪಿಗೆ ಸೂಚಿಸಿದರು. ಸಭೆಗೆ ಬಂದಿದ್ದವರಿಗೆ ವರ್ತೂರು ಪ್ರಕಾಶ್‌ ಬಾಡೂಟದ ವ್ಯವಸ್ಥೆ ಮಾಡಿದ್ದರು. ಬಿರಿಯಾನಿ ಮತ್ತು ಮೊಸರು ಬಜ್ಜಿ ವಿತರಿಸಲಾಯಿತು. ಕಾರ್ಯಕರ್ತರು ಬಿರಿಯಾನಿ ತೆಗೆದುಕೊಳ್ಳಲು ಮುಗಿಬಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅರುಣ್‌ಪ್ರಸಾದ್, ರೂಪಶ್ರೀ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ, ನಗರಸಭೆ ಮಾಜಿ ಸದಸ್ಯ ಕಾಶಿ ವಿಶ್ವನಾಥ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.